ದುರ್ವತನೆ ತೋರಿದ ವಕೀನ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ದಲಿತ ಸಂಘಟನೆಗಳ ಒಕ್ಕೂಟದ ಸದಸ್ಯರು ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು
ಗದಗ: ‘ಭಾರತಕ್ಕೆ ಸ್ವಾತಂತ್ರ್ಯ ಬಂದು 76 ವರ್ಷಗಳಾದರೂ ಮನುವಾದಿಗಳು, ಸನಾತನವಾದಿಗಳು ದೇಶದ ಸಂವಿಧಾನವನ್ನು ಒಪ್ಪದಿರುವ ಸಂಗತಿ ವಕೀಲ ರಾಕೇಶ್ ಕಿಶೋರ್ ಎಂಬುವನ ಮೂಲಕ ಮತ್ತೇ ಜಾಹೀರುಗೊಂಡಿದೆ’ ಎಂದು ದಲಿತ ಸಂಘಟನೆಗಳ ಒಕ್ಕೂಟದ ಸಂಚಾಲಕ ಮುತ್ತು ಬಿಳೆಯಲಿ ಆರೋಪ ಮಾಡಿದರು.
ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರತ್ತ ಶೂ ಎಸೆಯಲು ಯತ್ನಿಸಿದ ವಕೀಲ ಕಿಶೋರ್ ರಾಕೇಶ್ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಿ, ಗಡಿಪಾರು ಮಾಡುವಂತೆ ಆಗ್ರಹಿಸಿ ಗದಗ ಜಿಲ್ಲಾ ದಲಿತ ಸಂಘಟನೆಗಳ ಒಕ್ಕೂಟದ ವತಿಯಿಂದ ಬುಧವಾರ ಗಾಂಧಿ ವೃತ್ತದಲ್ಲಿ ನಡೆದ ಪ್ರತಿಭಟನೆ ವೇಳೆ ಮಾತನಾಡಿದರು.
‘ಒಬ್ಬ ವಕೀಲ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಮೇಲೆ ಕೋರ್ಟ್ ಹಾಲ್‌ನಲ್ಲೇ ಶೂ ಎಸೆಯುವ ಪ್ರಯತ್ನ ಮಾಡುತ್ತಾನೆಂದರೆ ಅದು ಅವನ ಮನುವಾದದ ಮನಃಸ್ಥಿತಿ, ಸಂವಿಧಾನ ವಿರೋಧಿ ಮನಃಸ್ಥಿತಿಯನ್ನು ತೋರಿಸುತ್ತದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಾಹಿತಿ ಬಸವರಾಜ ಸೂಳಿಭಾವಿ ಮಾತನಾಡಿ, ‘ರಾಕೇಶ್ ಕಿಶೋರ್ ಎಂಬ ವಕೀಲ ದೇಶದ ಸಂವಿಧಾನ, ದಲಿತ ಸಮುದಾಯವನ್ನು ಗುರಿಯಾಗಿಸಿಕೊಂಡು ಈ ಕೃತ್ಯ ಎಸಗಿದ್ದಾನೆ. ಈ ಕೃತ್ಯ ಎಸಗಿದವನ ಹಿಂದೆ ಆರ್‌ಎಸ್‌ಎಸ್ ಇದೆ’ ಎಂದು ಆರೋಪ ಮಾಡಿದರು.
‘ಆರ್‌ಎಸ್‌ಎಸ್‌ನಿಂದ ದೇಶದೊಳಗೆ ಅಶಾಂತಿಯ ವಾತಾವರಣ ಉಂಟಾಗುತ್ತಿದೆ. ಕಿಶೋರ್ ಜತೆಗೆ ಆರ್‌ಎಸ್‌ಎಸ್ ಮೇಲೆ ಕೂಡ ಕ್ರಮ ವಹಿಸಬೇಕು. ಪ್ರಧಾನಿ, ಕೇಂದ್ರ ಸರ್ಕಾರ ಈ ಘಟನೆಯ ಹೊಣೆ ಹೊರಬೇಕು. ಕೃತ್ಯ ಎಸಗಿದವನನ್ನು ದೇಶದಿಂದ ಗಡಿಪಾರು ಮಾಡಬೇಕು’ ಎಂದು ಆಗ್ರಹಿಸಿದರು.
‘ಒಬ್ಬ ವಕೀಲನಾಗಿ ನ್ಯಾಯಾಲಯದ ಘನತೆ ಕಾಪಾಡಬೇಕಾದ ವ್ಯಕ್ತಿಯೇ ಇಂತಹ ಕೃತ್ಯವೆಸಗಿರುವುದು ಸಮಸ್ತ ವಕೀಲ ಸಮುದಾಯಕ್ಕೆ ತೀವ್ರ ನೋವುಂಟು ಮಾಡಿದೆ. ಮುಖ್ಯ ನ್ಯಾಯಮೂರ್ತಿ ವಿರುದ್ಧ ಇಂತಹ ಕೃತ್ಯಕ್ಕೆ ಮುಂದಾದವರಿಗೆ ತಕ್ಕ ಶಿಕ್ಷೆಯಾಗಬೇಕು’ ಎಂದು ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ವಕೀಲರು ಆಗ್ರಹಿಸಿದರು.
ವಿವಿಧ ಸಂಘಟನೆಗಳು ನೂರಾರು ಮಂದಿ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಪ್ರತಿಭಟನೆ ಬಳಿಕ ಗದಗ ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿ, ಕ್ರಮಕ್ಕೆ ಆಗ್ರಹಿಸಿದರು.
ರಾಕೇಶ್ ಕಿಶೋರ್ ಹಿಂದೆ ಸನಾತನವಾದ ಮನುವಾದ ನಿಂತಿದೆ. ಕೇಂದ್ರ ಸರ್ಕಾರ ತಕ್ಷಣವೇ ಮಧ್ಯ ಪ್ರವೇಶಿಸಿ ವಕೀಲ ರಾಕೇಶ್ ಕಿಶೋರ್ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಿ ಬಂಧಿಸಬೇಕು.–ಮುತ್ತು ಬಿಳೆಯಲಿ, ದಲಿತ ಸಂಘಟನೆಗಳ ಒಕ್ಕೂಟದ ಸಂಚಾಲಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.