
ಪ್ರಜಾವಾಣಿ ವಾರ್ತೆ
ಗದಗ: ‘ಕೇಂದ್ರ ಸರ್ಕಾರ ಜಾರಿಗೆ ತಂದಿರುವ ರಾಂಪ್ (ಎಂಎಸ್‌ಎಂಇಗಳ ಕಾರ್ಯಕ್ಷಮತೆ ಹೆಚ್ಚಿಸುವುದು ಮತ್ತು ವೇಗಗೊಳಿಸುವುದು) ಯೋಜನೆಯ ಮುಖ್ಯ ಉದ್ದೇಶ ದೇಶದಲ್ಲಿನ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ದಿಮೆಗಳ ಸಾಮರ್ಥ್ಯ ಹೆಚ್ಚಿಸಿ, ಜಾಗತಿಕ ಸ್ಪರ್ಧೆಗೆ ಸಿದ್ಧಗೊಳಿಸುವುದಾಗಿದೆ’ ಎಂದು ಭಾರತೀಯ ರಫ್ತು ಸಂಸ್ಥೆಗಳ ಒಕ್ಕೂಟದ (ಫಿಯೊ) ಉಪ ನಿರ್ದೇಶಕಿ ಧನಿಶಾ ಮೀನು ಹೇಳಿದರು.
ನಗರದ ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯಲ್ಲಿ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ, ಭಾರತೀಯ ರಫ್ತು ಸಂಸ್ಥೆಗಳ ಒಕ್ಕೂಟ ಬೆಂಗಳೂರು ವಿಭಾಗ, ಗದಗ ಜಿಲ್ಲಾ ಕೈಗಾರಿಕಾ ಕೇಂದ್ರದ ಸಹಯೋಗದಲ್ಲಿ ಬುಧವಾರ ನಡೆದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
‘ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರತದ ಎಂಎಸ್‌ಎಂಇಗಳ ಪಾಲು ವಿಸ್ತರಿಸಲು ರಾಂಪ್ ಯೋಜನೆ ಮೂಲಕ ಯತ್ನಿಸಲಾಗುತ್ತಿದೆ. ರಫ್ತು ಉತ್ತೇಜನ ಮತ್ತು ಅದಕ್ಕೆ ಅಗತ್ಯವಿರುವ ಅನುಕೂಲ ಕಲ್ಪಿಸುವುದು ಈ ಯೋಜನೆಯ ಪ್ರಮುಖ ಅಂಶಗಳಲ್ಲಿ ಒಂದಾಗಿದೆ’ ಎಂದರು.
ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ಶರಣಬಸಪ್ಪ ಎಸ್. ಗುಡಿಮನಿ ಮಾತನಾಡಿ, ‘ರಫ್ತು ಮತ್ತು ಆಮದು, ದೇಶದ ಆರ್ಥಿಕ ಚಟುವಟಿಕೆಯ ಮೂಲಾಂಶಗಳು. ದೇಶದಲ್ಲಿ ಹೆಚ್ಚು ಉತ್ಪಾದನೆಯಾಗುವ ವಸ್ತುಗಳನ್ನು ಬೇರೆ ದೇಶಗಳಿಗೆ ಮಾರಾಟ ಮಾಡುವುದರಿಂದ, ಆರ್ಥಿಕ ಅಭಿವೃದ್ಧಿಗೆ ವೇಗ ಸಿಗುತ್ತದೆ. ರಫ್ತು ಹೆಚ್ಚಾದಂತೆ ದೇಶದ ಆರ್ಥಿಕ ಶಕ್ತಿ ಬಲವಾಗಿ ಉದ್ಯೋಗಾವಕಾಶಗಳು ಹೆಚ್ಚುತ್ತವೆ’ ಎಂದು ತಿಳಿಸಿದರು.
ಜವಳಿ ಇಲಾಖೆ ಗದಗ ಜಿಲ್ಲಾ ಉಪ ನಿರ್ದೇಶಕ ಅಜಿತ್ ನಾಯಕ ಮಾತನಾಡಿ, ‘ದೇಶದಲ್ಲಿ ರಫ್ತು ಹೆಚ್ಚಳ ಮಾಡಲು ಸಾಕಷ್ಟು ಯೋಜನೆಗಳನ್ನು ರೂಪಿಸಲಾಗಿದೆ. ಅಮೆರಿಕವು ರಫ್ತಿನ ಮೇಲೆ ಅಧಿಕ ತೆರಿಗೆ ವಿಧಿಸುತ್ತಿರುವುದರಿಂದ ಕೇಂದ್ರ ಸರ್ಕಾರ ಪರ್ಯಾಯ ಆಯ್ಕೆಗಳತ್ತ ಯೋಚಿಸುತ್ತಿದೆ. ವಿವಿಧ ದೇಶಗಳೊಂದಿಗೆ ಒಪ್ಪಂದ ಮಾಡಿಕೊಳ್ಳುವುದ ಜೊತೆಗೆ ರಫ್ತು ಮಾಡಲು ಉತ್ತೇಜನ ಹಾಗೂ ಪ್ರೋತ್ಸಾಹ ನೀಡಲಾಗುತ್ತಿದೆ’ ಎಂದರು.
ರಮೇಶ ಶಿಗ್ಲಿ, ಭಾಗ್ಯಲಕ್ಷ್ಮೀ, ಚನ್ನವೀರಪ್ಪ ಪ್ರಭಣ್ಣ ಹುಣಸಿಕಟ್ಟಿ ಸೇರಿದಂತೆ ಜಗದ್ಗುರು ತೋಂಟದಾರ್ಯ ಕಾಲೇಜು, ಮನೋರಮಾ ಕಾಲೇಜು, ಕನಕದಾಸ ಶಿಕ್ಷಣ ಸಂಸ್ಥೆ, ಆದರ್ಶ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
Quote - ನಮ್ಮಲ್ಲಿನ ಉತ್ಪನ್ನಗಳನ್ನು ರಫ್ತು ಮಾಡಲು ಉದ್ಯಮದಾರರು ಮತ್ತು ಯುವಕರು ಮುಂದೆ ಬರಬೇಕಿದೆ. ಅದಕ್ಕೆ ಅಗತ್ಯ ಮಾಹಿತಿಯನ್ನು ಕಾರ್ಯಾಗಾರದ ಮೂಲಕ ತಿಳಿಸಲಾಗುತ್ತಿದೆ ಶರಣಬಸಪ್ಪ ಎಸ್. ಗುಡಿಮನಿ ಅಧ್ಯಕ್ಷ ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ
Cut-off box - ‘ದೇಶದಿಂದ ಸಾಕಷ್ಟು ಉತ್ಪನ್ನಗಳನ್ನು ರಫ್ತು ಮಾಡಲು ಅವಕಾಶಗಳಿವೆ. ಸರ್ಕಾರ ಕೂಡ ಸಾಕಷ್ಟು ಉತ್ತೇಜನ ಹಾಗೂ ಪ್ರೋತ್ಸಾಹ ನೀಡುತ್ತಿದೆ. ಗದಗ ಜಿಲ್ಲೆಯಿಂದ ಶೇಂಗಾ ಜತೆಗೆ ಅನೇಕ ಉತ್ಪನ್ನಗಳು ರಫ್ತು ಆಗುತ್ತಿವೆ. ಮೊದಲು ಯಾವ ದೇಶಗಳಿಗೆ ರಫ್ತು ಮಾಡುತ್ತೇವೆ ವಸ್ತುಗಳ ಗುಣಮಟ್ಟ ಮತ್ತು ಪ್ಯಾಕಿಂಗ್ ಮೊದಲಾದ ಅಂಶಗಳನ್ನು ಅನೇಕ ಹಂತಗಳಲ್ಲಿ ಪರೀಕ್ಷೆಗೆ ಒಳಪಡಿಸಬೇಕು. ಆನಂತರ ರಫ್ತು ಮಾಡಲು ಅನುಕೂಲವಾಗುತ್ತದೆ’ ಎಂದು ರಫ್ತುದಾರ ವೈಭವ ಎಸ್. ಗದಗ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.