ಗದಗ: ‘ರಾಯಣ್ಣ ಬ್ರಿಗೇಡ್‌ಗೆ ಬೇರೆ ಹೆಸರು ಇಡಬೇಕು ಎಂಬ ಚರ್ಚೆ ನಡೆದಿದೆ. ಅ.20ರಂದು ಬೃಹತ್ ಸಮಾವೇಶ ನಡೆಸುವ ಕುರಿತು ಯೋಜನೆ ರೂಪಿಸಲಾಗುತ್ತಿದೆ. ಅಂದೇ ಹೊಸ ಹೆಸರು ಘೋಷಣೆ ಮಾಡಲಾಗುವುದು’ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ತಿಳಿಸಿದರು.
‘ಹಿಂದುಳಿದವರು, ದಲಿತರಿಗೆ ಯಾವ ಸಂಘಟನೆಯ ಬೆಂಬಲವೂ ಸಿಗುತ್ತಿಲ್ಲ. ಹಾಗಾಗಿ ಸಂಘಟನೆಯ ಅವಶ್ಯಕತೆ ಇದೆ. ಶಾಸಕ ಬಸನಗೌಡ ಪಾಟೀಲ ಯತ್ನಾಳ ಕೂಡ ಸಮಾವೇಶಕ್ಕೆ ಬರುತ್ತಾರೆ’ ಎಂದು ಮಂಗಳವಾರ ಸುದ್ದಿಗಾರರಿಗೆ ತಿಳಿಸಿದರು.
‘ಬಿಜೆಪಿಯಲ್ಲಿ ಹಿಂದುತ್ವ ಬಿಟ್ಟು ಸ್ವಜನ ಪಕ್ಷಪಾತ ನಡೆಯುತ್ತಿದೆ. ಇದಕ್ಕೆ ತಡೆಯೊಡ್ಡಬೇಕಿದೆ. ಬಿಜೆಪಿ ಕುಟುಂಬ ರಾಜಕಾರಣದಿಂದ ಮುಕ್ತವಾಗಬೇಕು’ ಎಂದು ತಿಳಿಸಿದರು.
‘ಕಾಂಗ್ರೆಸ್ ಭ್ರಷ್ಟಾಚಾರದ ಬಗ್ಗೆ ನ್ಯಾಯಾಲಯ ಸ್ಪಷ್ಟವಾಗಿ ಆದೇಶಿಸಿದೆ. ಆದರೂ ಸಿಎಂ ರಾಜೀನಾಮೆ ಕೊಡುತ್ತಿಲ್ಲ. ಸಿದ್ದರಾಮಯ್ಯ ರಾಜೀನಾಮೆ ನೀಡದಿರುವುದು ನ್ಯಾಯಾಲಯಕ್ಕೆ ಮಾಡಿದ ಅಪಮಾನ’ ಎಂದು ಹರಿಹಾಯ್ದರು.
‘ಮುಖ್ಯಮಂತ್ರಿ ಸ್ಥಾನಕ್ಕಾಗಿ ಕಾಂಗ್ರೆಸ್‌ನಲ್ಲಿ ರೇಸ್ ಆರಂಭವಾಗಿದೆ. ಕಾಂಗ್ರೆಸ್‌ನ ಹಲವರು ನಾಯಕರು ಗೋಪ್ಯ ಸಭೆಗಳನ್ನು ಮಾಡಿ ಸಿಎಂ ಸ್ಥಾನಕ್ಕಾಗಿ ಪೈಪೋಟಿ ನಡೆಸಿದ್ದಾರೆ’ ಎಂದು ಹೇಳಿದರು.
‘ಕಾಂಗ್ರೆಸ್ ಪಕ್ಷ ದಲಿತರು ಮತ್ತು ಅಲ್ಪಸಂಖ್ಯಾತರನ್ನು ಮತಬ್ಯಾಂಕ್ ಆಗಿ ಮಾತ್ರ ಪರಿಗಣಿಸುತ್ತದೆ. ಇಲ್ಲೀವರೆಗೆ ಕಾಂಗ್ರೆಸ್ ಹಲವು ಬಾರಿ ಅಧಿಕಾರಕ್ಕೆ ಬಂದಿದೆ. ಆದರೆ, ಈವರೆಗೆ ದಲಿತ ನಾಯಕರನ್ನು ಮುಖ್ಯಮಂತ್ರಿ ಮಾಡಲಿಲ್ಲ. ಈಗ ದಲಿತ ಮುಖ್ಯಮಂತ್ರಿ ಆಗಬೇಕು ಎಂಬ ಚರ್ಚೆ ಕಾಂಗ್ರೆಸ್‌ನಲ್ಲಿ ಮುನ್ನಲೆಗೆ ಬಂದಿದೆ. ಕಾಂಗ್ರೆಸ್ ಪಕ್ಷಕ್ಕೆ ಈ ಹಿಂದೆ ದಲಿತರು ಈ ಹಿಂದೆ ನೆನಪಿಗೆ ಬರಲಿಲ್ಲವೇ’ ಎಂದು ಪ್ರಶ್ನಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.