ಗದಗ: ‘ಸೆ.22ರಿಂದ ಆರಂಭಗೊಂಡಿರುವ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ವೇಳೆ ಹೇಮರಡ್ಡಿ ಮಲ್ಲಮ್ಮನ ಆರಾಧಕರಾದ ವೀರಶೈವ-ಲಿಂಗಾಯತ ರಡ್ಡಿ ಸಮಾಜದವರು ಧರ್ಮದ ಕಾಲಂನಲ್ಲಿ ವೀರಶೈವ ಲಿಂಗಾಯತ ಎಂದೂ, ಜಾತಿ ಕಾಲಂನಲ್ಲಿ ರಡ್ಡಿ ಲಿಂಗಾಯತ ಎಂದು ನಮೂದಿಸಬೇಕು’ ಎಂದು ಶಾಸಕ ಹಾಗೂ ಕರ್ನಾಟಕ ರಾಜ್ಯ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ವೀರಶೈವ-ಲಿಂಗಾಯತ ರಡ್ಡಿ ಸಮಾಜದ ಗೌರವಾಧ್ಯಕ್ಷ ಜಿ.ಎಸ್. ಪಾಟೀಲ ಮನವಿ ಮಾಡಿದರು.
‘ರಡ್ಡಿ ಸಮುದಾಯವು ಪ್ರಾಚೀನ ಕಾಲದಿಂದಲೂ ವೀರಶೈವ ಸಂಸ್ಕೃತಿ ಆಚರಣೆ, ಇಷ್ಟಲಿಂಗ ಪೂಜೆ ಮಾಡುತ್ತ ಬಂದಿದೆ. ಆದರೆ, ಈಚೆಗೆ ಸಮಾಜದ ಕೆಲವರು ನಮ್ಮ ಭಾವನೆಗಳಿಗೆ ಧಕ್ಕೆ ತರುವ ರೀತಿಯಲ್ಲಿ ಧರ್ಮದ ಕಾಲಂನಲ್ಲಿ ಹಿಂದೂ ಎಂತಲೂ ಹಾಗೂ ಜಾತಿ ಉಪಜಾತಿ ಕಾಲಂನಲ್ಲಿ ರಡ್ಡಿ ಎಂತಲೂ ನಮೂದಿಸಬೇಕು ಎಂದು ಹೇಳುತ್ತಿದ್ದು, ಇದಕ್ಕೆ ಯಾರೂ ಕಿವಿಗೊಡಬಾರದು’ ಎಂದು ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ಸರ್ಕಾರದ ಸೌಲಭ್ಯಕ್ಕೆ ಕೈ ಒಡ್ಡದ ರೀತಿ ಹೇಮರಡ್ಡಿ ಮಲ್ಲಮ್ಮ ನಮ್ಮ ಸಮುದಾಯಕ್ಕೆ ಆಶೀರ್ವಾದ ಮಾಡಿದ್ದಾಳೆ. ಇದರ ಮಧ್ಯೆಯೂ ಸರ್ಕಾರ ನಮ್ಮ ಸಮುದಾಯಕ್ಕೆ 3ಎ ಜಾತಿ ಪ್ರಮಾಣ ಪತ್ರ ನೀಡುತ್ತಿದೆ. ನಾವೆಲ್ಲರೂ ನಮ್ಮತನ ಬಿಟ್ಟುಕೊಡಬಾರದು’ ಎಂದು ಮನವಿ ಮಾಡಿದರು.
ಸರ್ಕಾರದಿಂದ ಆಚರಿಸಲಾಗುವ ಹೇಮರಡ್ಡಿ ಮಲ್ಲಮ್ಮ ಜಯಂತಿಗೆ ಇಷ್ಟಲಿಂಗ ಪೂಜೆ ಮಾಡುವ ಭಾವಚಿತ್ರ ಬಳಸಲಾಗುತ್ತಿದೆ. ಎಲ್ಲ ಕಡೆ ಇದೇ ಅಧಿಕೃತವಾಗಿದ್ದರೂ ವೈಷ್ಣವ ಪಂಥದ ರೆಡ್ಡಿ ಸಮುದಾಯ, ರೆಡ್ಡಿ ಜನಸಂಘ ಮತ್ತು ಅದರ ಅಂಗ ಸಂಘಟನೆಗಳು ಅನಧಿಕೃತ ಭಾವಚಿತ್ರ ಬಳಸುತ್ತಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
‘ಹಿಂದೂ ರೆಡ್ಡಿ ಎಂದು ಬರೆಯಿಸಿ ಎನ್ನುವ ಗುಂಪು ಅವರ ಭಿತ್ತಿಪತ್ರದಲ್ಲಿ ಬಳಸಿರುವ ಭಾವಚಿತ್ರದಲ್ಲಿ ಹೇಮರಡ್ಡಿ ಮಲ್ಲಮ್ಮಳಿಗೆ ಅವಮಾನ ಮಾಡುವ ರೀತಿಯಲ್ಲಿ ಸ್ಥಾವರಲಿಂಗಕ್ಕೆ ಕೈ ಮುಗಿಯುವ ಭಾವಚಿತ್ರವನ್ನು ಬಳಸಿದ್ದಾರೆ. ಅವರಿಗೆ ಮೂಲ ಹಾಗೂ ಅಧಿಕೃತ ಭಾವಚಿತ್ರವನ್ನೂ ಬಳಸಲು ಹಿಂಜರಿಯುತ್ತಿದ್ದಾರೆ. ಕೊನೆ ಪಕ್ಷ ಅವರಿಗೆ ಗೌರವಿಸುವ ರೀತಿ ‘ಇಷ್ಟಲಿಂಗ ಪೂಜೆ ಮಾಡುವ ಭಾವಚಿತ್ರವನ್ನು ಬಳಸುವಂತೆ ಆಗ್ರಹಿಸಿದರು.
ಸಮಾಜದ ಗದಗ ಜಿಲ್ಲಾ ಘಟಕದ ಅಧ್ಯಕ್ಷ ಕುಮಾರ ಗಡಗಿ, ಕಾರ್ಯಾಧ್ಯಕ್ಷ ಸುರೇಶ ಶಿರೋಳ, ಯುವ ಘಟಕದ ರಾಜ್ಯಾಧ್ಯಕ್ಷ ಅನೀಲಕುಮಾರ ತೆಗ್ಗಿನಕೇರಿ, ಮುಖಂಡರಾದ ಮಂಜುನಾಥ ಭಾಗವತಿ, ಸಿದ್ದಣ್ಣ ಕವಲೂರ, ಭೀಮರಡ್ಡೆಪ್ಪ ರಡ್ಡೇರ, ಮಹೇಶ ಗಡಗಿ, ಜಗದೀಶ ಅವರಡ್ಡಿ, ಶರಣಗೌಡ ಪಾಟೀಲ, ನಾಗರಾಜ ಚನ್ನಳ್ಳಿ, ಎಸ್.ಎಸ್.ಪಾಟೀಲ, ಹನಮಂತ ಗಡಗಿ ಇದ್ದರು.
Quote - ರೆಡ್ಡಿ ಸಮುದಾಯ ಸಮೀಕ್ಷೆಯಲ್ಲಿ ಹಿಂದೂ ರೆಡ್ಡಿ ಎಂದು ಬರೆಯಿಸಬೇಕು ಇಲ್ಲದಿದ್ದರೆ 3ಎ ಮೀಸಲು ಹೋಗುತ್ತದೆ ಎಂದು ಸುಳ್ಳು ಹೇಳಿ ಸಮುದಾಯವನ್ನು ಪುಸಲಾಯಿಸುತ್ತ ಸಂಖ್ಯೆ ಹೆಚ್ಚಿಸಿಕೊಳ್ಳುವ ದುರುದ್ದೇಶದಿಂದ ವೀರಶೈವ ಲಿಂಗಾಯತ ರಡ್ಡಿ ಸಮುದಾಯವನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ ಜಿ.ಎಸ್. ಪಾಟೀಲ ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.