ADVERTISEMENT

ಮಾನವೀಯತೆ ಮರೆಯದಿರಿ, ಅಧಿಕಾರಿಗಳಿಗೆ ಸಿಸಿ ಪಾಟೀಲ್ ಸೂಚನೆ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2022, 5:10 IST
Last Updated 9 ಮಾರ್ಚ್ 2022, 5:10 IST
ಸಿ.ಸಿ.ಪಾಟೀಲ
ಸಿ.ಸಿ.ಪಾಟೀಲ   

ಗದಗ: ‘ಅರಣ್ಯ ಒತ್ತುವರಿ ತೆರವು ಕಾರ್ಯಾಚರಣೆ ಪ್ರಸಂಗಗಳಲ್ಲಿ ಅಧಿಕಾರಿಗಳು ಮಾನವೀಯ ದೃಷ್ಟಿಯಿಂದ ನಡೆದುಕೊಳ್ಳುವಂತೆ ಸೂಚಿಸಲಾಗಿದೆ’ ಎಂದು ಸಚಿವ ಸಿ.ಸಿ.ಪಾಟೀಲ ತಿಳಿಸಿದ್ದಾರೆ.

ಜಿಲ್ಲೆಯ ಮುಂಡರಗಿ ತಾಲ್ಲೂಕಿನಕೆಲೂರ ಗ್ರಾಮದಲ್ಲಿ ಸೋಮವಾರ ನಡೆದ ಅರಣ್ಯ ಒತ್ತುವರಿ ತೆರವು ಕಾರ್ಯಾಚರಣೆ ಸಂದರ್ಭದಲ್ಲಿ ಉದ್ವೇಗಕ್ಕೆ ಒಳಗಾಗಿ ಇಬ್ಬರು ಮಹಿಳೆಯರು ವಿಷ ಸೇವಿಸಿದ್ದು, ಅವರಲ್ಲಿ ಒಬ್ಬರು ಮೃತಪಟ್ಟಿರುವುದು ಅತ್ಯಂತ ದುಃಖದ ಸಂಗತಿ ಎಂದು ಅವರು ವಿಷಾದ ವ್ಯಕ್ತಪಡಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಜತೆಗೆ ಮಾತನಾಡಲಾಗಿದ್ದು, ಈ ರೀತಿಯ ಅವಘಡಗಳು ಮರುಕಳಿಸದಂತೆ ಎಚ್ಚರ ವಹಿಸಬೇಕು ಮತ್ತು ಅರಣ್ಯ ಒತ್ತುವರಿ ತೆರವು ಕಾರ್ಯಾಚರಣೆ ಮಾಡುವಾಗ ಯಾರಿಗೂ ಅನ್ಯಾಯವಾಗದಂತೆ ಕ್ರಮ ಕೈಗೊಳ್ಳುವಂತೆ ಅರಣ್ಯ ಅಧಿಕಾರಿಗಳಿಗೆ ಸಚಿವರು ತಾಕೀತು ಮಾಡಿದರು.

ADVERTISEMENT

ವಿಷ ಸೇವಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸರೋಜಾ ಪಾಟೀಲ ಅವರಿಗೆ ಅಗತ್ಯವಿರುವ ಚಿಕಿತ್ಸೆ ನೀಡಲು ಸೂಕ್ತ ಕ್ರಮ ಕೈಗೊಳ್ಳುವಂತೆ ಸಚಿವರು ಜಿಲ್ಲಾಡಳಿತಕ್ಕೆ ನಿರ್ದೇಶಿಸಿದ್ದಾರೆ.

ಮೃತ ನಿರ್ಮಲಾ ಪಾಟೀಲ ಅವರ ಕುಟುಂಬದ ಸದಸ್ಯರನ್ನು ಜಿಲ್ಲಾಧಿಕಾರಿ ಭೇಟಿಯಾಗಿದ್ದಾರೆ. ಸದ್ಯದಲ್ಲೇ ಅಲ್ಲಿಗೆ ತೆರಳಿ ಅವರನ್ನು ಭೇಟಿಯಾಗಿ ಸಾಂತ್ವನ ಹೇಳುವುದಾಗಿ ಅವರು ತಿಳಿಸಿದ್ದಾರೆ.

₹5 ಲಕ್ಷ ಪರಿಹಾರ: ಈ ವಿಚಾರವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಚರ್ಚಿಸಿದ್ದು, ಮಹಿಳೆಯ ಕುಟುಂಬದವರಿಗೆ ₹5 ಲಕ್ಷ ಪರಿಹಾರ ಘೋಷಿಸುವಂತೆ ತಿಳಿಸಿದ್ದಾರೆ. ಆ ಪ್ರಕಾರ ಅವರ ಕುಟುಂಬದವರಿಗೆ ಪರಿಹಾರ ತಲುಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.