ADVERTISEMENT

ಕೃಷಿ ಡಿಪ್ಲೊಮಾ ಕಾಲೇಜ್ ಪುನರಾರಂಭಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2020, 4:05 IST
Last Updated 21 ಅಕ್ಟೋಬರ್ 2020, 4:05 IST

ನರಗುಂದ:ತಾಲ್ಲೂಕಿನ ಬೆಳ್ಳೇರಿಯಲ್ಲಿ ₹4 ಕೋಟಿ ವೆಚ್ಚದಲ್ಲಿ ಆರಂಭಿಸಲಾಗಿದ್ದ ಕೃಷಿ ಡಿಪ್ಲೊಮಾ ಕಾಲೇಜನ್ನು ಸರ್ಕಾರ ಹಾಗೂ ಕೃಷಿ ವಿಶ್ವವಿದ್ಯಾಲಯ ದಿಢೀರ್‌ ಎಂದು ಬಂದ್ ಮಾಡಿ ಧಾರವಾಡದ ಕೃಷಿ ವಿಶ್ವವಿದ್ಯಾಲಯೊಂದಿಗೆ ವಿಲೀನಗೊಳಿಸುತ್ತಿರುವುದು ಸರಿಯಲ್ಲ. ಇದನ್ನು ಮತ್ತೆ ಬೆಳ್ಳೇರಿಯಲ್ಲಿ ಪುನರಾರಂಭಿಸಲು ಸರ್ಕಾರ ಕ್ರಮ ತೆಗೆದುಕೊಳ್ಳಬೇಕು ಎಂದು ಮಾಜಿ ಶಾಸಕ ಬಿ.ಆರ್.ಯಾವಗಲ್ ಆಗ್ರಹಿಸಿದರು.

ಪಟ್ಟಣದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸಲುವಾಗಿ ಮುಖ್ಯಮಂತ್ರಿಗಳಿಗೆ, ಕೃಷಿ ಸಚಿವರಿಗೆ ಹಾಗೂ ಕೃಷಿ ವಿಶ್ವವಿದ್ಯಾಲಯಕ್ಕೆ ಪತ್ರ ಬರೆಯಲಾಗಿದೆ. ಇದರ ಬಗ್ಗೆ ಸಂಬಂಧಿಸಿದ ಇಲಾಖೆ ಹಾಗೂ ಸಚಿವರು ಗಮನಹರಿಸಬೇಕು. ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲರು ಪುನರಾರಂಭಕ್ಕೆ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

ಗದಗ ಜಿಲ್ಲೆ ಸೇರಿದಂತೆ ಉತ್ತರ ಕರ್ನಾಟಕದ ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ತಮ್ಮ ಅಧಿಕಾರಾವಧಿಯಲ್ಲಿ ಇದನ್ನು ಆರಂಭಿಸಲಾಗಿತ್ತು ಎಂದು ಹೇಳಿದ ಅವರು, ಬಜೆಟ್ ಕೊರತೆ ಕಾರಣ ನೀಡಿ ವಿಲೀನಗೊಳಿಸುವುದು ಸರಿಯಲ್ಲ. ಈಗಾಗಲೇ ನಾಲ್ಕು ವರ್ಷದಿಂದ ನಾಲ್ಕು ಬ್ಯಾಚ್‍ಗಳು ಪದವಿ ಗಳಿಸಿ ತೆರಳಿದ್ದಾರೆ. ಸುಸಜ್ಜಿತ ಕಟ್ಟಡವಿದೆ. ಹಾಸ್ಟೆಲ್ ಇದೆ. ಇಂತಹ ಸುವ್ಯವಸ್ಥಿತ ಕಾಲೇಜನ್ನು ಸ್ಥಳಾಂತರಿಸಿದ ನಿರ್ಣಯ ವಾಪಸ್‌ ಪಡೆಯಬೇಕು. ಇಲ್ಲವಾದರೆ ಇದರ ಆರಂಭಕ್ಕೆ ಕಾಂಗ್ರೆಸ್ ಹೋರಾಟ ನಡೆಸುವುದು ಅನಿವಾರ್ಯವಾಗುತ್ತದೆ ಎಂದು ಯಾವಗಲ್ ಎಚ್ಚರಿಸಿದರು.

ADVERTISEMENT

ಜಿಟಿಟಿಸಿ ಯಾವ ಹಂತಕ್ಕಿದೆ? : ನಾನು ಶಾಸಕನಾಗಿದ್ದಾಗ ನರಗುಂದಕ್ಕೆ ಜಿಟಿಟಿಸಿ ತಾಂತ್ರಿಕ ಡಿಪ್ಲೋಮಾ ತರಬೇತಿ ಕೇಂದ್ರ ಬಿಡುಗಡೆಯಾಗಿತ್ತು. ಅದಕ್ಕೆ 3 ಕೋಟಿ ಹಣವು ಬಿಡುಗಡೆಯಾಗಿತ್ತು. ಆದರೆ ಅದು ಇನ್ನು ಅರಂಭವಾಗಿಲ್ಲ. ಈಗ ಯಾವ ಹಂತದಲ್ಲಿದೆ ? ಎಂಬು ದನ್ನು ಸಂಬಂಧಿಸಿದ ಇಲಾಖೆ, ಜಿಲ್ಲಾಡಳಿತ ಸ್ಪಷ್ಟಪಡಿಸಬೇಕೆಂದು ಯಾವಗಲ್ ಒತ್ತಾಯಿಸಿದರು. ₹110 ಕೋಟಿ ಆಶ್ರಯ ಯೋಜನೆ ನನೆಗುದಿಗೆ ಬಿದ್ದಿದೆ. ಅದು ಶೀಘ್ರ ಕಾರ್ಯರೂಪಕ್ಕೆ ಬರಬೇಕು ಎಂದು ಅವರು ಆಗ್ರಹಿಸಿದರು.

ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ರಾಜು ಗೌಡ ಕೆಂಚನಗೌಡ್ರ, ತಾ.ಪಂಚಾಯ್ತಿ ಅಧ್ಯಕ್ಷ ವಿಠಲರಡ್ಡಿ ತಿಮ್ಮರಡ್ಡಿ, ಪ್ರವೀಣ ಯಾವಗಲ್, ಪಂಚಪ್ಪ ಮಲ್ಲಾಡದ, ಹೊಸಮನಿ, ರಾಜು ಕಲಾಲ, ಟಿ.ಬಿ.ಶಿರಿಯಪ್ಪಗೌಡ್ರ, ಪ್ರಭುಲಿಂಗ ಯಲಿಗಾರ, ವಿವೇಕ ಯಾವಗಲ್ ಹಾಗೂ ಕಾಂಗ್ರೆಸ್ ಮುಖಂಡರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.