ADVERTISEMENT

ನದಿ ತೀರ: ಎಚ್ಚರ ವಹಿಸಲು ಸೂಚನೆ

ಮಲಪ್ರಭಾ ನದಿ, ಕಾಲುವೆಗೆ 12 ಸಾವಿರ ಕ್ಯುಸೆkf ನೀರು: ಕೊಣ್ಣೂರಿಗೆ ಶಾಸಕ ಸಿ.ಸಿ. ಪಾಟೀಲ ಭೇಟಿ

​ಪ್ರಜಾವಾಣಿ ವಾರ್ತೆ
Published 31 ಜುಲೈ 2024, 14:09 IST
Last Updated 31 ಜುಲೈ 2024, 14:09 IST
ಮಲಪ್ರಭಾ ಪ್ರವಾಹಕ್ಕೆ ಒಳಗಾಗುವ ನರಗುಂದ ತಾಲ್ಲೂಕಿನ ಲಕಮಾಪುರ ಗ್ರಾಮಕ್ಕೆ ಶಾಸಕ ಸಿ.ಸಿ‌.ಪಾಟೀಲ ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಚರ್ಚಿಸಿದರು
ಮಲಪ್ರಭಾ ಪ್ರವಾಹಕ್ಕೆ ಒಳಗಾಗುವ ನರಗುಂದ ತಾಲ್ಲೂಕಿನ ಲಕಮಾಪುರ ಗ್ರಾಮಕ್ಕೆ ಶಾಸಕ ಸಿ.ಸಿ‌.ಪಾಟೀಲ ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಚರ್ಚಿಸಿದರು   

ನರಗುಂದ: ‘ಮಲಪ್ರಭಾ ನದಿ ಮೇಲ್ಭಾಗದ ಕಣಕುಂಬಿ, ಜಾಂಬೋಟಿ ಮತ್ತು ಸುತ್ತಲಿನ ಪ್ರದೇಶದಲ್ಲಿ ನಿರಂತರ ಮಳೆ ಸುರಿಯುತ್ತಿದೆ. 20 ಸಾವಿರ ಕ್ಯುಸೆಕ್‌ಗೂ ಹೆಚ್ಚು ನೀರು ಜಲಾಶಯಕ್ಕೆ ನಿತ್ಯ ಬರುತ್ತಿದೆ. ಈಗಾಗಲೇ ನವಿಲುತೀರ್ಥ ಜಲಾಶಯದಲ್ಲಿ 2,076 ಅಡಿ ನೀರು ಸಂಗ್ರಹವಾಗಿದೆ’ ಎಂದು ಶಾಸಕ ಸಿ.ಸಿ. ಪಾಟೀಲ ಹೇಳಿದರು.

ತಾಲ್ಲೂಕಿನ ಮಲಪ್ರಭಾ ನದಿ ದಡದಲ್ಲಿನ ಲಕಮಾಪೂರ, ಕೊಣ್ಣೂರ ಗ್ರಾಮಗಳಿಗೆ ಬುಧವಾರ ಭೇಟಿ ನೀಡಿದ ನಂತರ ಕೊಣ್ಣೂರ ಗ್ರಾಮ ಪಂಚಾಯಿತಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ‘ಮಲಪ್ರಭಾ ನದಿ, ಹೊಳೆ ಪಾತ್ರದ ಜನರು ಸುರಕ್ಷಿತವಾಗಿರಬೇಕು’ ಎಂದರು.

‘ಜಲಾಶಯದಿಂದ 12 ಸಾವಿರ ಕ್ಯುಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. ನದಿ ದಡದಲ್ಲಿನ ಗ್ರಾಮಗಳ ಜನರು ಮುಂಜಾಗ್ರತಾ ಕ್ರಮಗಳನ್ನು ವಹಿಸಬೇಕು. ನದಿ ದಡದಲ್ಲಿ ಕೃಷಿ ಉಪಕರಣಗಳು, ಜಾನುವಾರುಗಳು ಇದ್ದರೆ ತೆಗೆದುಕೊಳ್ಳಬೇಕು’ ಎಂದು ತಿಳಿಸಿದರು.

ADVERTISEMENT

‘ಲಕಮಾಪೂರ, ಮೆಣಸಗಿ, ಹೊಳೆಆಲೂರ ಹಾಗೂ ಆಚಾರಕೊಪ್ಪ ಗ್ರಾಮಗಳಿಗೆ ತೆರಳಿ ಸುರಕ್ಷಿತವಾಗಿರುವಂತೆ ತಿಳಿಸಲಾಗಿದೆ. ಮಂಗಳವಾರ ಬೆಳಗಾವಿಯಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಹಾಗೂ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ, ಮಲಪ್ರಭಾ ನದಿಯ ಒಳಹರಿವು ನೋಡಿಕೊಂಡು ಹಂತ ಹಂತವಾಗಿ ನೀರನ್ನು ಹೊರಗೆ ಬಿಡಬೇಕೆಂದು ತಿಳಿಸಿದ್ದೇನೆ. ಆದ್ದರಿಂದ ಪ್ರವಾಹದ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲು ತಾಲ್ಲೂಕು ಆಡಳಿತ ಗಮನಹರಿಸಬೇಕು’ ಎಂದು ಶಾಸಕ ಸಿ.ಸಿ‌.ಪಾಟೀಲ ಹೇಳಿದರು.

ಆರೋಪ: ಕೊಣ್ಣೂರ ಹಳೇ ಬಸ್ ನಿಲ್ದಾಣದ ಹತ್ತಿರದ ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಕೆಟ್ಟುಹೋಗಿದ್ದಲ್ಲದೇ ಅಪಘಾತ ವಲಯ ಆಗಿದೆ ಎಂದು ಸಾರ್ವಜನಿಕರಿಂದ ಆರೋಪಗಳು ಕೇಳಿಬಂದವು. ತಕ್ಷಣ ಅಧಿಕಾರಿಗಳಿಗೆ ಕರೆ ಮಾಡಿದ ಶಾಸಕರು, ರಸ್ತೆ ಸರಿಪಡಿಸುವಂತೆ ಸೂಚಿಸಿದರು.

ಮನವಿ: ಕೊಣ್ಣೂರ ಬಸ್ ನಿಲ್ದಾಣದಲ್ಲಿ ಕುಡಿಯುವ ನೀರು, ಶೌಚಾಲಯ ಸೇರಿದಂತೆ ಯಾವುದೇ ಮೂಲಸೌಕರ್ಯಗಳಿಲ್ಲದೇ ಹಾಳು ಬಿದ್ದಿದೆ. ಪ್ರವಾಹ ಬಂದರೆ ಬಸ್ ನಿಲ್ದಾಣದಲ್ಲಿ ಆಳೆತ್ತರದ ನೀರು ನಿಲ್ಲುತ್ತದೆ. ಇಂತಹ ಅವ್ಯವಸ್ಥೆಯನ್ನು ಸರಿಪಡಿಸಬೇಕು’ ಎಂದು ಗ್ರಾಮ ಪಂಚಾಯಿತಿ ಸದಸ್ಯರು ಶಾಸಕರಲ್ಲಿ ಮನವಿ ಮಾಡಿದರು.

ಸೂಚನೆ: ತಹಶೀಲ್ದಾರ್ ಶ್ರೀಶೈಲ ತಳವಾರ ಮಾತನಾಡಿ, ‘ತಾಲ್ಲೂಕಿನ ಮಲಪ್ರಭಾ ಹಾಗೂ ಬೆಣ್ಣಿಹಳ್ಳದ ದಡದಲ್ಲಿನ ಭೂಮಿಗಳಲ್ಲಿ ರೈತರು ಬಿತ್ತನೆ ಮಾಡಿರುವ ಹೆಸರು, ಸೂರ್ಯಕಾಂತಿ, ಹತ್ತಿ, ಮೆಕ್ಕೆಜೋಳ, ಈರುಳ್ಳಿ ಸೇರಿದಂತೆ ಈಗ ಬೆಳೆದು ನಿಂತಿರುವ ಬೆಳೆಗಳನ್ನು ತಾಲ್ಲೂಕು ಮಟ್ಟದ ಅಧಿಕಾರಿಗಳು ಡ್ರೋನ್ ಕ್ಯಾಮೆರಾ ಮೂಲಕ ಸಮೀಕ್ಷೆ ಮಾಡಬೇಕು’ ಎಂದು ಸೂಚಿಸಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸಿದ್ದವ್ವ ಕಳಸನ್ನವರ, ಉಮೇಶಗೌಡ ಪಾಟೀಲ, ಕೊಟ್ರೇಶ ಕೊಟ್ರಶೆಟ್ಟರ, ನಿಂಗಪ್ಪ ಸೋಮಾಪೂರ, ಬಿ.ಬಿ. ಐನಾಪೂರ, ನೇತಾಜಿಗೌಡ ಕೆಂಪನಗೌಡ್ರ, ಸಾಲಿಗೌಡ್ರ, ಪರಪ್ಪ ಸಾಹುಕಾರ, ಶಿವಾನಂದ ಮುತ್ತವಾಡ, ತಾಲ್ಲೂಕ ಪಂಚಾಯಿತಿ ಇಒ ಎಸ್.ಕೆ. ಇನಾಮದಾರ, ಸಂತೋಷ ಹಂಚಿನಾಳ, ಸಿದ್ದೇಶ ಹೂಗಾರ ಇದ್ದರು.

ಮಲಪ್ರಭಾ ಪ್ರವಾಹಕ್ಕೆ ಒಳಗಾಗುವ ನರಗುಂದ ತಾಲ್ಲೂಕಿನ ಕೊಣ್ಣೂರ ಗ್ರಾಮ ಪಂಚಾಯಿತಿ ಸದಸ್ಯರೊಂದಿಗೆ ಶಾಸಕ ಸಿ.ಸಿ‌.ಪಾಟೀಲ ಚರ್ಚಿಸಿದರು
ಮಲಪ್ರಭಾ ಪ್ರವಾಹಕ್ಕೆ ಒಳಗಾಗುವ ನರಗುಂದ ತಾಲ್ಲೂಕಿನ ಕೊಣ್ಣೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಶಾಸಕ ಸಿ.ಸಿ‌.ಪಾಟೀಲ ಪರಿಶೀಲನೆ ನಡೆಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.