ಗದಗ: ನಗರದ ಎಸ್‌ಪಿ ಕಚೇರಿಯಿಂದ ಎಪಿಎಂಸಿ ಮುಖ್ಯ ರಸ್ತೆವರೆಗಿನ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ ಭೂಮಿಪೂಜೆ ನೆರವೇರಿಸಿದರು.
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿರುವ ಹೂವು, ಹಣ್ಣು, ತರಕಾರಿ ಮಾರುಕಟ್ಟೆಗೆ ನಿತ್ಯ ನೂರಾರು ಮಂದಿ ರೈತರು ಬರುತ್ತಾರೆ. ಆದರೆ, ಗದಗ ಹೊಸ್ ಬಸ್ ನಿಲ್ದಾಣ, ಎಸ್‌ಪಿ ಕಚೇರಿ ಮುಂಭಾಗದಿಂದ ಎಪಿಎಂಸಿ ದಕ್ಷಿಣ ಭಾಗದಲ್ಲಿರುವ ಗೇಟ್‌ವರೆಗೆ ಹಾದು ಹೋಗಿರುವ ರಸ್ತೆ ತೀವ್ರ ಹದಗೆಟ್ಟಿತ್ತು.
ಈ ಬಗ್ಗೆ ‘ಪ್ರಜಾವಾಣಿ’ಯಲ್ಲಿ ಆಗಸ್ಟ್ 31ರಂದು ‘ಹದಗೆಟ್ಟ ರಸ್ತೆ ದುರಸ್ತಿಗೆ ಆಗ್ರಹ’ ವರದಿ ಪ್ರಕಟಗೊಂಡಿತ್ತು.
‘ಈ ದಾರಿಯಲ್ಲಿ ಶಾಲಾ ಮಕ್ಕಳು, ವೃದ್ಧರು ಸಾವಿರಾರು ಸಂಖ್ಯೆಯಲ್ಲಿ ಅಡ್ಡಾಡುತ್ತಾರೆ. ಜಿಲ್ಲಾಡಳಿತ, ಗದಗ– ಬೆಟಗೇರಿ ನಗರಸಭೆ ಅಧಿಕಾರಿಗಳು ಶೀಘ್ರ ಗಮನಹರಿಸಿ ರಸ್ತೆ ನಿರ್ಮಾಣ ಮಾಡಬೇಕು’ ಎಂದು ನಿವೃತ್ತ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಸುರೇಶ ವಿ. ಕುಂಬಾರ ಆಗ್ರಹಿಸಿದ್ದರು.
ವರದಿಗೆ ಸ್ಪಂದಿಸಿ, ರಸ್ತೆ ನಿರ್ಮಾಣಕ್ಕೆ ಕ್ರಮವಹಿಸಿದ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ ಅವರಿಗೆ ಸುರೇಶ ವಿ.ಕುಂಬಾರ ಅವರು ಶಾಲು ಹೊದಿಸಿ, ಮೈಸೂರು ಪೇಟ ತೊಡಿಸಿ, ಗಿಡ ಕೊಟ್ಟು ಅಭಿನಂದಿಸಿದರು. ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರ್ ಸಾಬ ಬಬರ್ಚಿ,ಬಿ ಬಿ ಅಸೂಟಿ,ಎಸ್ ಎನ್ ಬಳ್ಳಾರಿ, ಸಿದ್ದು ಪಾಟೀಲ, ಅಶೋಕ ಮಂದಾಲಿ ಇದ್ದರು.
Highlights -
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.