ADVERTISEMENT

ಮುಂಡರಗಿ | ಈರಣ್ಣನಗುಡ್ಡಕ್ಕೆ ಮೆರಗು ನೀಡಿದ ರಾಕ್ ಗಾರ್ಡನ್

​ಪ್ರಜಾವಾಣಿ ವಾರ್ತೆ
Published 18 ಜನವರಿ 2024, 4:26 IST
Last Updated 18 ಜನವರಿ 2024, 4:26 IST
ಮುಂಡರಗಿ ತಾಲ್ಲೂಕಿನ ಈರಣ್ಣನ ಗುಡ್ಡದ ರಾಕ್ ಗಾರ್ಡನ್‌ನಲ್ಲಿ ನಿರ್ಮಿಸಿದ ಹಳ್ಳಿಯ ಸಂದರ್ಭ
ಮುಂಡರಗಿ ತಾಲ್ಲೂಕಿನ ಈರಣ್ಣನ ಗುಡ್ಡದ ರಾಕ್ ಗಾರ್ಡನ್‌ನಲ್ಲಿ ನಿರ್ಮಿಸಿದ ಹಳ್ಳಿಯ ಸಂದರ್ಭ   

ಮುಂಡರಗಿ: ತಾಲ್ಲೂಕಿನ ಶಿಂಗಟಾಲೂರ ಗ್ರಾಮದ ಈರಣ್ಣನ ಗುಡ್ಡದಲ್ಲಿರುವ ವೀರಭದ್ರೇಶ್ವರ ರಾಕ್ ಗಾರ್ಡನ್‌ನಲ್ಲಿ ನಿರ್ಮಾಣಗೊಂಡ 300 ಸಾಂದರ್ಭಿಕ ಮೂರ್ತಿಗಳು ಕಣ್ಮನ ಸೆಳೆಯುತ್ತಿವೆ.

ಸುಮಾರು ಎರಡು ಎಕರೆ ಪ್ರದೇಶದಲ್ಲಿ ₹ 2 ಕೋಟಿ ವೆಚ್ಚದಲ್ಲಿ ವಿವಿಧ ಸಂದರ್ಭಗಳನ್ನು ಆಧರಿಸಿ, ಮೂರ್ತಿಗಳನ್ನು ನಿರ್ಮಾಣ ಮಾಡಲಾಗಿದೆ. ಇದರಿಂದ ವೀರಭದ್ರೇಶ್ವರ ದೇವಸ್ಥಾನಕ್ಕೂ ವಿಶೇಷ ಮೆರುಗು ಬಂದಿದೆ.

ಗುಡ್ಡದ ಮೇಲಿರುವ ವೀರಭದ್ರೇಶ್ವರ ದೇವಸ್ಥಾನದ ಮುಂದಿನ ಗುಡ್ಡದ ಇಳಿಜಾರು ಪ್ರದೇಶದಲ್ಲಿ ಎರಡು ದಶಕಗಳ ಹಿಂದೆ ರಾಕ್ ಗಾರ್ಡನ್ ನಿರ್ಮಾಣವಾಗಿತ್ತು. ಕಲಾವಿದ ದಿ.ಟಿ.ಬಿ. ಸೊಲಬಕ್ಕನವರ ಹಾಗೂ ತಂಡದವರು ಮೂರ್ತಿಗಳ ನಿರ್ಮಾಣ ಕಾರ್ಯ ಆರಂಭಿಸಿದ್ದರು.  ಈ ಕಾರ್ಯ ಪೂರ್ಣಗೊಳ್ಳುವ ಹಂತದಲ್ಲಿದ್ದಾಗ ವೀರಭದ್ರೇಶ್ವರ ದೇವಸ್ಥಾನದ ಬೃಹತ್ ಕಾಂಪೌಂಡ್ ಗಾರ್ಡನ್ ಮೇಲೆ ಕುಸಿದಿತ್ತು. ಇದರಿಂದ ಗಾರ್ಡನ್ ಭಾಗಶಃ ನಾಶವಾಗಿತ್ತು.

ADVERTISEMENT

ಮೂರು ವರ್ಷಗಳ ಹಿಂದೆ ವೀರಭದ್ರೇಶ್ವರ ಟ್ರಸ್ಟ್‌ ಕಮಿಟಿ ಅಧ್ಯಕ್ಷ ಕೆ.ವಿ. ಹಂಚಿನಾಳ ಹಾಗೂ ಸರ್ವ ಸದಸ್ಯರು ರಾಕ್ ಗಾರ್ಡನ್ ಪುನಶ್ಚೇತನ ಕಾರ್ಯಕ್ಕೆ ಕೈಹಾಕಿದರು. ಸೊಲಬಕ್ಕನವರ ಶಿಷ್ಯ, ಸ್ಥಳೀಯ ಕಲಾವಿದ ಮೌನೇಶ ಬಡಿಗೇರ ನೇತೃತ್ವದಲ್ಲಿ ಕಲಾವಿದರಾದ ಅಶೋಕ ತಳವಾರ, ಮಂಜುನಾಥ, ದುರುಗೇಶ, ಸೋಮು ಹಾಗೂ ಮತ್ತಿತರರು ಮೂರ್ತಿ ತಯಾರಿಕೆ ಆರಂಭಿಸಿದರು. ಟ್ರಸ್ಟ್‌ ಕಮಿಟಿ ಮಾರ್ಗದರ್ಶನದಲ್ಲಿ ಗಾರ್ಡನ್ ಈಗ ಪೂರ್ಣಗೊಂಡಿದೆ.

ಸಿಮೆಂಟ್‌ನಿಂದ ತಯಾರಿಸಿದ ಮೂರ್ತಿಗಳ ಕೆಳಗೆ ನೈಸರ್ಗಿಕವಾಗಿ ಹುಲ್ಲು ಹಾಗೂ ಮತ್ತಿತರ ಆಕರ್ಷಕ ಗಿಡಗಳನ್ನು ಬೆಳೆಯಲಾಗಿದ್ದು, ಗಾರ್ಡನ್ ಹಚ್ಚ ಹಸುರಿನಿಂದ ಕಂಗೊಳಿಸುತ್ತಿದೆ. ಆಕರ್ಷಕ ಬಣ್ಣಗಳಿಂದ ಮೂರ್ತಿಗಲ್ಲಿ ಸಹಜ ಸೌಂದರ್ಯ ಎದ್ದುಕಾಣುತ್ತಿದೆ.

ಈರಣ್ಣನ ಗುಡ್ಡದ ಮುಂದೆ ಹರಿಯುವ ತುಂಗಭದ್ರಾ ನದಿ, ಕಪ್ಪತಗುಡ್ಡದ ಹಸಿರಿ ಸಿರಿ ಪ್ರೇಕ್ಷಣೀಯ ಕೇಂದ್ರಗಳಾಗಿವೆ. ವೀರಭದ್ರೇಶ್ವರ ರಾಕ್ ಗಾರ್ಡನ್ ಜಿಲ್ಲೆಯ ಸುಪ್ರಸಿದ್ಧ ಪ್ರೇಕ್ಷಣೀಯ ಸ್ಥಳಗಳ ಪಟ್ಟಿಗೆ ಸೇರಲಿದೆ. ಈರಣ್ಣನ ಗುಡ್ಡದ ಅಂದವನ್ನು ನೂರ್ಮಡಿಗೊಳಿಸಲಿದೆ ಎಂಬುದು ಟ್ರಸ್ಟ್‌ ಕಮಿಟಿಯವರ ಅಭಿಮತ.

ಮೂರ್ತಿಗಳಿಗೆ ಜೀವಕಳೆ

ಗ್ರಾಮೀಣ ಭಾಗದ ಜನ ಜೀವನ ವೀರಭದ್ರೇಶ್ವರರು ಈರಣ್ಣನಗುಡ್ಡದಲ್ಲಿ ನೆಲೆ ನಿಂತ ಬಗೆ ಹಳ್ಳಿ ಪಂಚಾಯ್ತಿ ಕಟ್ಟೆ ಕಿರಾಣಿ ಅಂಗಡಿ ಸಾಮೂಹಿಕ ಸ್ನಾನಘಟ್ಟ ಈರಣ್ಣ ಗುಗ್ಗಳ ಗೌಡರ ಮನೆ ಲಂಬಾಣಿಗಳ ಹಟ್ಟಿ ಕುರಿಗಾಹಿಗಳ ಮನೆ ಶಾಲೆ ಹಸು ಕರು ಕುರಿ ಮೇಕೆ ಮೊದಲಾದವುಗಳು ಗಾರ್ಡನ್‌ನಲ್ಲಿ ರೂಪ ತಳೆದಿವೆ. ಸುಮಾರು 300 ಮೀಟರ್‌ ಉದ್ದದ ಗುಹೆ ನಿರ್ಮಿಸಲಾಗಿದ್ದು ಸಾಧು–ಸಂತರು 24 ಯೋಗ ಭಂಗಿಗಳಲ್ಲಿ ಮಗ್ನರಾಗಿರುವ ಮೂರ್ತಿಗಳು ಸುಂದರವಾಗಿದೆ. ವೀರಭದ್ರ ದಕ್ಷನನ್ನು ಸಂಹರಿಸಿದ್ದು ದಕ್ಷನಿಗೆ ಕುರಿಯ ತಲೆಯನ್ನಿಟ್ಟಿದ್ದು ಆಂಜನೇಯನಿಗೆ ಲಿಂಗದೀಕ್ಷೆ ನೀಡಿದ್ದು ಪಾರ್ವತಿ ಕಲ್ಯಾಣ ಮೊದಲಾದವುಗಳು ಪೌರಾಣಿಕ ಸನ್ನಿವೇಶಗಳನ್ನು ಕಣ್ಮುಂದೆ ತರುತ್ತವೆ.

ಜ.29ರಂದು ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ ಹಾಗೂ ಮತ್ತಿತರ ಗಣ್ಯರು ರಾಕ್‌ ಗಾರ್ಡನ್‌ ಲೋಕಾರ್ಪಣೆ ಮಾಡಲಿದ್ದಾರೆ
ಕೆ.ವಿ. ಹಂಚಿನಾಳ, ಅಧ್ಯಕ್ಷ, ವೀರಭದ್ರೇಶ್ವರ ಟ್ರಸ್ಟ್‌ ಕಮಿಟಿ

ಮುಂಡರಗಿ ತಾಲ್ಲೂಕಿನ ಈರಣ್ಣನಗುಡ್ಡದ ರಾಕ್ ಗಾರ್ಡನ್‌ಲ್ಲಿ ನಿರ್ಮಿಸಿದ ಕಿರಾಣಿ ಅಂಗಡಿ ದೃಶ್ಯ

ಮುಂಡರಗಿ ತಾಲ್ಲೂಕಿನ ಈರಣ್ಣನ ಗುಡ್ಡದ ರಾಕ್ ಗಾರ್ಡನ್‌ನಲ್ಲಿ ಪಾರ್ವತಿ ಕಲ್ಯಾಣದ ಪ್ರಸಂಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.