ADVERTISEMENT

ರೋಣ | ಕುಡಿಯುವ ನೀರಿನ ಯೋಜನೆಗೆ ₹ 74.58 ಕೋಟಿ: ಜಿ.ಎಸ್‌.ಪಾಟೀಲ

ಗಜೇಂದ್ರಗಡ–ರೋಣ ತಾಲ್ಲೂಕಿಗೆ ನೀರು ಪೂರೈಕೆ ಯೋಜನೆ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2025, 5:24 IST
Last Updated 20 ಸೆಪ್ಟೆಂಬರ್ 2025, 5:24 IST
ರೋಣದಲ್ಲಿ ಶುಕ್ರವಾರ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ತಾಲ್ಲೂಕು ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕಿನ 2024–25ನೇ ಸಾಲಿನ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಶಾಸಕ ಜಿ.ಎಸ್‌.ಪಾಟೀಲ ಮಾತನಾಡಿದರು
ರೋಣದಲ್ಲಿ ಶುಕ್ರವಾರ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ತಾಲ್ಲೂಕು ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕಿನ 2024–25ನೇ ಸಾಲಿನ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಶಾಸಕ ಜಿ.ಎಸ್‌.ಪಾಟೀಲ ಮಾತನಾಡಿದರು   

ರೋಣ: ನೀರಿನ ಸಮಸ್ಯೆ ನಿವಾರಣೆಗಾಗಿ ರೋಣ ಮತಕ್ಷೇತ್ರಕ್ಕೆ ₹ 74.58 ಕೋಟಿಗೂ ಅಧಿಕ ಅನುದಾನಕ್ಕೆ ಮುಖ್ಯಮಂತ್ರಿ ಅನುಮೋದನೆ ನೀಡಿದ್ದಾರೆ ಎಂದು ಶಾಸಕ ಜಿ.ಎಸ್.ಪಾಟೀಲ ಹೇಳಿದರು.

ಪಟ್ಟಣದ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ತಾಲ್ಲೂಕು ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕಿನ 2024–25ನೇ ಸಾಲಿನ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಶುಕ್ರವಾರ ಮಾತನಾಡಿದ ಅವರು, ಇಂದು ನಡೆದ ಸಚಿವ ಸಂಪುಟದ ಸಭೆಯಲ್ಲಿ ರೋಣ–ಗಜೇಂದ್ರಗಡ ತಾಲ್ಲೂಕಿನ ಕುಡಿಯುವ ನೀರಿಗೆ ವಿವಿಧ ಯೋಜನೆ ಮಂಜೂರು ಮಾಡಿ, ಅನುದಾನಕ್ಕೆ ಒಪ್ಪಿಗೆ ನೀಡಿದ್ದಾರೆ ಎಂದರು.

ತಾಲ್ಲೂಕಿನ 9 ಸಣ್ಣ ನೀರಾವರಿ, ಜಿಲ್ಲಾ ಪಂಚಾಯಿತಿ ಕೆರೆಗಳಿಗೆ ಮಲಪ್ರಭಾ ಬಲದಂಡೆ ಕಾಲುವೆಯ  ಮೂಲಕ 196 ಕಿ.ಮೀ ನೀರನ್ನು ಎತ್ತಿ ತುಂಬಿಸುವ ಯೋಜನೆಗೆ ₹ 43.50 ಕೋಟಿ ಹಾಗೂ ರೋಣ ವಿಭಾಗದಲ್ಲಿ ಬರುವ ಮಲಪ್ರಭೆ ಬಲದಂಡೆ ಕಾಲುವೆಯ 56ಎ 56ಬಿ 56ಸಿ 57 ಇಟಗಿ ವಿತರಣಾ ಕಾಲುವೆಗಳಿಗೆ ಮೊದಲನೇ ಹಂತದ ಆಧುನೀಕರಣ ಕಾಲುವೆ ನಿರ್ಮಾಣ ಮಾಡಲು ₹ 31.08 ಕೋಟಿ ಸೇರಿ ಒಟ್ಟು ₹ 74.58 ಕೋಟಿಗೂ ಅಧಿಕ ಹಣ ಬಿಡುಗಡೆ ಮಾಡಿದ್ದಾರೆ ಎಂದರು.

ADVERTISEMENT

ಕೃಷ್ಣ ಬಿ.ಸ್ಕೀಂನಲ್ಲಿ ಗಜೇಂದ್ರಗಡ ತಾಲ್ಲೂಕಿನ ಭಾಗದ 19 ಕೆರೆ ತುಂಬಿಸಲು ₹ 115 ಕೋಟಿ ನೀಡಲು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗಿದ್ದು, ಆ ಯೋಜನೆಗೂ ಕೂಡ ಸದ್ಯದಲ್ಲೇ ಮಂಜೂರಾತಿ ಸಿಗಲಿದೆ ಎಂದರು.

ಇನ್ನು ಈ ಭಾಗದ ರೈತರ ಬಹುದಿನಗಳ ಬೇಡಿಕೆಯಾಗಿದ್ದ ಕೋಲ್ಡ್ ಸ್ಟೋರೇಜ್ ಕನಸು ಕೂಡ ಸದ್ಯದಲ್ಲಿ ನನಸಾಗಲಿದ್ದು, ₹6 ಕೋಟಿ ವೆಚ್ಚದಲ್ಲಿ ಒಂದೂವರೆ ಟನ್ ಸಾಮರ್ಥ್ಯದ ಕೋಲ್ಡ್ ಸ್ಟೋರೇಜ್ ನಿರ್ಮಾಣವಾಗಲಿದೆ ಎಂದರು.

ಪಿ.ಎಲ್.ಡಿ ಬ್ಯಾಂಕ್ ರಾಜ್ಯ ಉಪಾಧ್ಯಕ್ಷ ಉಳವಪ್ಪ ದಾಸನೂರ, ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ವಿ.ಆರ್.ಗುಡಿಸಾಗರ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಮಿಥುನ್.ಜಿ.ಪಾಟೀಲ, ವೀರಣ್ಣ ಶೆಟ್ಟರ, ಪಿ.ಬಿ.ಅಳಗವಾಡಿ ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ರಮೇಶ ಪಲ್ಲೇದ ಉಪಾಧ್ಯಕ್ಷ ಯಚ್ಚರಗೌಡ ಗೋವಿಂದಗೌಡ್ರ, ಮಾಜಿ ಅಧ್ಯಕ್ಷ ಬಸವರಾಜ ನವಲಗುಂದ, ವಿ.ಬಿ.ಸೋಮನಕಟ್ಟಿಮಠ, ರೂಪಾ ಅಂಗಡಿ, ಬಸವರಾಜ ಕರಿಗೌಡ್ರ, ಬಸನಗೌಡ ಪೊಲೀಸ್‌ ಪಾಟೀಲ, ರವಿ ಸಂಗನಬಶೆಟ್ಟರ, ಯೂಸೂಫ್ ಇಟಗಿ ಮುಂತಾದವರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.