
ಕೃಷ್ಣಾಪುರ ಗ್ರಾಮದ ಜನವಸತಿ ಪ್ರದೇಶಗಳಿಗೆ ನುಗ್ಗಿರುವ ಚರಂಡಿ ನೀರು
ರೋಣ: ರೋಣ ಪುರಸಭೆ ವ್ಯಾಪ್ತಿಗೆ ಒಳಪಟ್ಟ ಮಜರೇ ಗ್ರಾಮ ಕೃಷ್ಣಾಪುರ ಮೂಲಸೌಲಭ್ಯಗಳಿಂದ ವಂಚಿತವಾಗಿದೆ. ಪುರಸಭೆ ವ್ಯಾಪ್ತಿಗೆ ಒಳಪಟ್ಟರೂ ಅಭಿವೃದ್ಧಿ ದೃಷ್ಟಿಯಿಂದ ತೀರಾ ಹಿಂದುಳಿದಿದ್ದು, ಸಾರ್ವಜನಿಕರು ವ್ಯವಸ್ಥೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗ್ರಾಮದಲ್ಲಿರುವ ಚರಂಡಿಗಳು ಸಂಪೂರ್ಣ ಹದಗೆಟ್ಟಿವೆ. ಚರಂಡಿಗಳು ಕಟ್ಟಿಕೊಂಡು ದುರ್ನಾತ ಬೀರುತ್ತಿವೆ. ಮೊದಲೇ ಇಕ್ಕಟ್ಟಾದ ರಸ್ತೆಗಳಿಂದ ಕೂಡಿರುವ ಗ್ರಾಮದಲ್ಲಿ ಚರಂಡಿ ಪಕ್ಕದಲ್ಲಿರುವ ಮನೆಗಳಲ್ಲಿ ವಾಸಿಸುವ ಸಾರ್ವಜನಿಕರು ಅನೈರ್ಮಲ್ಯದ ವಾತಾವರಣದಲ್ಲಿ ಜೀವಿಸುವಂತಾಗಿದೆ. ಕೆಲವು ಕಡೆ ಚರಂಡಿ ನೀರು ಮನೆಗಳಿಗೆ ನುಗ್ಗುತ್ತಿದೆ. ಮತ್ತೆ ಕೆಲವೆಡೆ ಚರಂಡಿ ಪಕ್ಕದಲ್ಲಿರುವ ಹಳೆಯ ಮನೆಗಳ ಗೋಡೆಗಳ ಬಳಿ ಚರಂಡಿ ನೀರು ಇಂಗುತ್ತಿದ್ದು ಮನೆಯ ಗೋಡೆಗಳು ಶಿಥಿಲಾವಸ್ತೆಗೆ ತಲುಪುವಂತಾಗಿದೆ. ಆದರೆ ಸಂಬಂಧಿಸಿದ ಪುರಸಭೆ ಆಡಳಿತ ಮಾತ್ರ ಇತ್ತ ಕಡೆ ಗಮನಹರಿಸುತ್ತಿಲ್ಲ ಎಂದು ಸಾರ್ವಜನಿಕರು ಕಿಡಿಕಾರಿದ್ದಾರೆ.
ಗ್ರಾಮದಲ್ಲಿ ಬಯಲು ಬಹಿರ್ದೆಸೆ ಸಾಮಾನ್ಯ ಎಂಬಂತಾಗಿದೆ. ಇಲ್ಲಿನ ಶಾಲೆಯ ಮುಂದಿನ ರಸ್ತೆಯ ಇಕ್ಕೆಲಗಳು ಬಹಿರ್ದೆಸೆಯ ತಾಣವಾಗಿದ್ದು, ವಿದ್ಯಾರ್ಥಿಗಳು ನಿತ್ಯ ಕಿರಿಕಿರಿ ಅನುಭವಿಸುವಂತಾಗಿದೆ. ಸಂಪೂರ್ಣ ಗ್ರಾಮ ಪುರಸಭೆಯ ಒಂದು ವಾರ್ಡ್ ಆಗಿದ್ದರೂ ಪುರಸಭೆ ಸಾರ್ವಜನಿಕ ಶೌಚಾಲಯ ನಿರ್ಮಿಸುವ ಗೋಜಿಗೆ ಹೋಗಿಲ್ಲ. ಅಂಗನವಾಡಿಯ ಆವರಣದಲ್ಲಿ ಮಕ್ಕಳಿಗಾಗಿ ಈಚೆಗೆ ಕಟ್ಟಿದ ಶೌಚಾಲಯ ಕೂಡ ಬಾಗಿಲು ಕಿತ್ತು ಹೋಗಿ ನಿರುಪಯುಕ್ತವಾಗಿದೆ. ಅಂಗನವಾಡಿಯ ಮಕ್ಕಳು ಕೂಡ ಮಲಮೂತ್ರ ವಿಸರ್ಜನೆಗಾಗಿ ಬಯಲನ್ನೇ ಅವಲಂಬಿಸುವಂತಾಗಿದೆ.
ತಾಲ್ಲೂಕು ಕೇಂದ್ರ ವಾದ ರೋಣದಿಂದ 2 ಕಿ.ಮೀ. ದೂರದಲ್ಲಿರುವ ಕೃಷ್ಣಾಪುರ ಗ್ರಾಮಕ್ಕೆ ನೇರ ಬಸ್ ಸಂಪರ್ಕ ಇಲ್ಲ. ಜಕ್ಕಲಿ, ನರೇಗಲ್, ಹಾಲಕೇರಿ ಗ್ರಾಮಗಳಿಗೆ ತೆರಳುವ ಬಸ್‌ಗಳು ಕೃಷ್ಣಾಪುರ ಗ್ರಾಮದ ಹೊರವಲಯದಲ್ಲಿಯ ಮುಖ್ಯರಸ್ತೆಯ ಮೂಲಕ ಹಾಯ್ದು ಹೋಗುವುದರಿಂದ ಗ್ರಾಮಸ್ಥರಿಗೆ ಅದೇ ಬಸ್ ನಿಲ್ದಾಣವಾಗಿದೆ. ಗ್ರಾಮದಿಂದ ರೋಣ ಮತ್ತು ನರೇಗಲ್ ಪಟ್ಟಣಗಳ ಶಿಕ್ಷಣ ಸಂಸ್ಥೆಗಳಲ್ಲಿ ಅಧ್ಯಯನಕ್ಕೆ ತೆರಳುವ ವಿದ್ಯಾರ್ಥಿಗಳು ಗ್ರಾಮದ ಹೊರ ವಲಯದ ಮುಖ್ಯರಸ್ತೆಗೆ ಹೋಗಿ ಅಲ್ಲಿಂದ ಬಸ್ ಹಿಡಿದು ಪ್ರಯಾಣಿಸಬೇಕಿದೆ.
ಒಟ್ಟಿನಲ್ಲಿ ಕೃಷ್ಣಾಪುರ ಗ್ರಾಮವು ಪುರಸಭೆ ವ್ಯಾಪ್ತಿಗೆ ಒಳಪಟ್ಟರೂ ರೋಣ ಪುರಸಭೆಯ ಇತರ ವಾರ್ಡ್‌ಗಳು ಪಡೆದಷ್ಟು ಮೂಲ ಸೌಕರ್ಯಗಳನ್ನು ಪಡೆಯದೇ, ಅಭಿವೃದ್ಧಿ ದೃಷ್ಟಿಯಿಂದ ತೀರಾ ಹಿಂದುಳಿದಿದೆ. ಇತ್ತ ಗ್ರಾಮ ಪಂಚಾಯಿತಿಯ ಸೌಲಭ್ಯಗಳು ಇಲ್ಲದೇ ಅತ್ತ ಪುರಸಭೆಯಿಂದಲೂ ಸೌಲಭ್ಯ ಸಿಗದೇ ತ್ರಿಶಂಕು ಸ್ಥಿತಿಗೆ ತಳ್ಳಲ್ಪಟ್ಟಿದ್ದು, ಗ್ರಾಮಸ್ಥರಲ್ಲಿ ಬೇಸರ ಮಡುಗಟ್ಟುವಂತೆ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.