ರೋಣ: ‘ದಿನನಿತ್ಯ ಪಟ್ಟಣವನ್ನು ಶುಚಿಗೊಳಿಸುವ ಮೂಲಕ ಜನರ ಆರೋಗ್ಯ ಕಾಪಾಡುವಲ್ಲಿ ಪೌರಕಾರ್ಮಿಕರು ಅಪರಿಮಿತ ಸೇವೆ ನೀಡುತ್ತಿರುವ ಕಾರ್ಯ ಶ್ಲಾಘನೀಯ’ ಎಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು.
ಪಟ್ಟಣದ ಪುರಸಭೆಯ ಆವರಣದಲ್ಲಿ ಮಂಗಳವಾರ ನಡೆದ ಪೌರಕಾರ್ಮಿಕರ ದಿನಾಚರಣೆ ಉದ್ದೇಶಿಸಿ ಮಾತನಾಡಿದ ಅವರು, ‘ಪಟ್ಟಣ ವ್ಯಾಪ್ತಿಯಲ್ಲಿ ಒಳಚರಂಡಿ ವ್ಯವಸ್ಥೆ ಕಲ್ಪಿಸಲು ಯೋಜಿಸಲಾಗಿದ್ದು, ಒಳಚರಂಡಿ ನಿರ್ಮಾಣ ಕಾಮಗಾರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಶೀಘ್ರದಲ್ಲಿ ಒಳಚರಂಡಿ ನಿರ್ಮಿಸುವ ಮೂಲಕ ಪೌರ ಕಾರ್ಮಿಕರ ಹೊರೆ ತಪ್ಪಿಸಲಾಗುವುದು’ ಎಂದರು.
ಪೌರ ಕಾರ್ಮಿಕರ ಮಕ್ಕಳಿಗೂ ಉತ್ತಮ ಶಿಕ್ಷಣ ಕಲ್ಪಿಸುವ ಉದ್ದೇಶದಿಂದ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದು, ಕಾರ್ಮಿಕರು ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕು’ ಎಂದರು.
ಪುರಸಭೆ ಉಪಾಧ್ಯಕ್ಷ ಹನುಮಂತ ತಳ್ಳಿಕೇರಿ ಮಾತನಾಡಿ, ‘ಪೌರಕಾರ್ಮಿಕರಿಗೆ ಆರೋಗ್ಯ ವಿಮೆ ನೀಡಲಾಗಿದ್ದು, ಮೊತ್ತವನ್ನು ಸರಕಾರ ಹೆಚ್ಚಿಸಬೇಕು. ದಿನಗೂಲಿ ಹಾಗೂ ತಾತ್ಕಾಲಿಕ ಸೇವೆಯಲ್ಲಿರುವ ಪೌರ ಕಾರ್ಮಿಕರನ್ನು ಖಾಯಂಗೊಳಿಸಬೇಕು. ಪೌರ ಕಾರ್ಮಿಕರ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಸರ್ಕಾರಗಳು ಮತ್ತಷ್ಟು ಯೋಜನೆ ರೂಪಿಸಬೇಕು’ ಎಂದರು.
ಪೌರ ಕಾರ್ಮಿಕರನ್ನು ಸನ್ಮಾನಿಸಲಾಯಿತು. ಪುರಸಭೆ ಅಧ್ಯಕ್ಷೆ ಬಸಮ್ಮ ಕೊಪ್ಪದ, ರೋಣ ತಹಶೀಲ್ದಾರ್ ನಾಗರಾಜ.ಕೆ, ಸದಸ್ಯರಾದ ಮುತ್ತಣ್ಣ ಗಡಗಿ, ಮಲ್ಲಯ್ಯ ಮಹಾಪುರುಷಮಠ, ಸಂತೋಷ ಕಡಿವಾಲ, ಮೌನೇಶ ಹಾದಿಮನಿ, ಮುಖಂಡರಾದ ಯೂಸುಫ್ ಇಟಗಿ, ಶಫೀಕ್ ಮೂಗನೂರ, ಸಂಗಪ್ಪ ಜಿಡ್ಡಿಬಾಗಿಲ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.