ADVERTISEMENT

ರೋಣ: ಅಗ್ನಿಶಾಮಕ ಸಿಬ್ಬಂದಿಯ ಕರ್ತವ್ಯ ಪ್ರಜ್ಞೆ, ತಪ್ಪಿದ ಬಾರಿ ಅನಾಹುತ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2026, 5:39 IST
Last Updated 19 ಫೆಬ್ರುವರಿ 2026, 5:39 IST
ಕೊತಬಾಳ ಗ್ರಾಮದ ಚಹಾದ ಅಂಗಡಿಯಲ್ಲಿ ಹೊತ್ತಿ ಉರಿಯುತ್ತಿದ್ದ ಗ್ಯಾಸ್ ಸಿಲಿಂಡರನ್ನು ಅಗ್ನಿಶಾಮಕ ಸಿಬ್ಬಂದಿ ಪ್ರವೀಣ ಹೊಸಕೋಟೆ ನಂದಿಸಿದರು.
ಕೊತಬಾಳ ಗ್ರಾಮದ ಚಹಾದ ಅಂಗಡಿಯಲ್ಲಿ ಹೊತ್ತಿ ಉರಿಯುತ್ತಿದ್ದ ಗ್ಯಾಸ್ ಸಿಲಿಂಡರನ್ನು ಅಗ್ನಿಶಾಮಕ ಸಿಬ್ಬಂದಿ ಪ್ರವೀಣ ಹೊಸಕೋಟೆ ನಂದಿಸಿದರು.   

ರೋಣ: ತಾಲ್ಲೂಕಿನ ಕೊತಬಾಳ ಗ್ರಾಮದಲ್ಲಿ ಬುಧವಾರ ಸಂಜೆ ಸಂಭವಿಸಬಹುದಾದ ಅಗ್ನಿ ಅವಘಡ ಅಗ್ನಿಶಾಮಕ ಸಿಬ್ಬಂದಿಯ ಕರ್ತವ್ಯ ಪ್ರಜ್ಞೆಯಿಂದ ತಪ್ಪಿದ್ದು ಸಿಬ್ಬಂದಿಯ ಕರ್ತವ್ಯ ಪ್ರಜ್ಞೆಯನ್ನು ಗ್ರಾಮಸ್ಥರು ಶ್ಲಾಘಿಸಿದ್ದಾರೆ.

ರೋಣ ಅಗ್ನಿಶಾಮಕ ಠಾಣೆಯ ಸಿಬ್ಬಂದಿ ಪ್ರವೀಣ ಹೊಸಕೋಟೆ ಕರ್ತವ್ಯಕ್ಕೆ ಹಾಜರಾಗಲೆಂದು ರೋಣ ಅಗ್ನಿಶಾಮಕ ಠಾಣೆಗೆ ಆಗಮಿಸುತ್ತಿರುವಾಗ ಮಾರ್ಗ ಮಧ್ಯೆ ಕೊತಬಾಳ ಗ್ರಾಮದ ಚಹಾದ ಅಂಗಡಿಯಲ್ಲಿ ಗ್ಯಾಸ್ ಸಿಲಿಂಡರ್ ಸೋರಿಕೆಯಾಗಿ ಬೆಂಕಿ ಹತ್ತಿಕೊಂಡಿತ್ತು. ಸ್ಥಳೀಯರು ಕೂಗಾಡುತ್ತಿದ್ದನ್ನು ಗಮನಿಸಿದ ಪ್ರವೀಣ ತಕ್ಷಣ ತಮ್ಮ ದ್ವಿಚಕ್ರ ವಾಹನ ನಿಲ್ಲಿಸಿ ಚಹಾದ ಅಂಗಡಿ ಬಳಿ ಹೋಗಿ ನೋಡಿದಾಗ ಗ್ಯಾಸ್ ಸಿಲಿಂಡರ್ ಮತ್ತು ಒಲೆ ಹೊತ್ತಿ ಉರಿಯುತ್ತಿದ್ದುದನ್ನು ಗಮನಿಸಿ ತಕ್ಷಣವೇ ನೀರಿನಲ್ಲಿ ನೆನೆಸಿದ ಗೋಣಿಚೀಲವನ್ನು ಸಿಲಿಂಡರ್ ಮೇಲೆ ಹಾಕುವ ಮೂಲಕ ಬೆಂಕಿ ನಂದಿಸಿದರು.

ಚಹಾದ ಅಂಗಡಿಗೆ ಅಂಟಿಕೊಂಡಂತೆ ಪಕ್ಕದಲ್ಲಿ ಸರತಿ ಸಾಲಿನಂತೆ ಹಲವು ಅಂಗಡಿ ಮುಂಗಟ್ಟುಗಳಿದ್ದು ಒಂದು ವೇಳೆ ಬೆಂಕಿ ವ್ಯಾಪಿಸಿದ್ದಲ್ಲಿ ಹಲವು ಅಂಗಡಿಗಳು ಆಹುತಿಯಾಗುತ್ತಿದ್ದವು. ಆದರೆ ಪ್ರವೀಣ ಅವರ ಸಮಯೋಚಿತ ಕರ್ತವ್ಯ ಪ್ರಜ್ಞೆ ಮೆರೆದು ಘಟನೆಯಲ್ಲಿ ಆಗಬಹುದಾಗಿದ್ದ ಭಾರಿ ಪ್ರಮಾಣದ ಹಾನಿಯನ್ನು ತಪ್ಪಿಸುವ ಜೊತೆಗೆ ಅನೇಕರ ಜೀವ ಉಳಿಸಿದರು.

ADVERTISEMENT

ಘಟನೆ ಸಂಭವಿಸಿದ ಕೆಲ ಸಮಯದ ಬಳಿಕ ಸ್ಥಳಕ್ಕೆ ರೋಣ ಅಗ್ನಿಶಾಮಕ ಠಾಣೆಯ ಬೆಂಕಿ ನಂದಿಸುವ ವಾಹನ ಹಾಗೂ ಸಿಬ್ಬಂದಿ ಬಂದಿದ್ದು ಈ ವೇಳೆ ಪ್ರವೀಣ ಅವರ ಕಾರ್ಯಕ್ಕೆ ಗ್ರಾಮಸ್ಥರು ಹಾಗೂ ಅಗ್ನಿಶಾಮಕ ಇಲಾಖೆಯ ಅಧಿಕಾರಿ ಮಂಜುನಾಥ ಮೇಲ್ಮನೆ ಹಾಗೂ ಸಿಬ್ಬಂದಿಗಳಾದ ಮುತ್ತಣ್ಣ ಪ್ರಧಾನಿ, ಅಶೋಕ ಹದಲಿ, ಮಲ್ಲಿಕಾರ್ಜುನ ಚಂದರಗಿ, ಯಮನಪ್ಪ ಹಳಗೇರಿ, ಮೇಘರಾಜ ಮಾಳವಾಡ ಸೇರಿದಂತೆ ಇತರರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.