ಗದಗ: ಅವಳಿ ನಗರ ಗದಗ-ಬೆಟಗೇರಿಯಲ್ಲಿ ಭಾನುವಾರ ಸಂಜೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಗಣವೇಷಧಾರಿಗಳು ಆಕರ್ಷಕ ಪಥ ಸಂಚಲನ ನಡೆಸಿದರು. ಪಥ ಸಂಚಲನ ಹಿನ್ನಲೆಯಲ್ಲಿ ನಗರದಲ್ಲಿ ಸ್ವಾಗತ ಕಮಾನು, ಕಟೌಟ್‌ಗಳು ರಾರಾಜಿಸಿದವು. ಬೀದಿಗಳನ್ನು ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತಮಾನೋತ್ಸವದ ಅಂಗವಾಗಿ ನಗರದ ಪ್ರಮುಖ ರಸ್ತೆಗಳಲ್ಲಿ ಭಾನುವಾರ ಸುಮಾರು 1,500ಕ್ಕೂ ಅಧಿಕ ಗಣವೇಷಧಾರಿಗಳು ಪಾಲ್ಗೊಂಡು, ಶಿಸ್ತಿನಿಂದ ಹೆಜ್ಜೆ ಹಾಕಿದರು.
ಮಾರ್ಗ ಮಧ್ಯೆದಲ್ಲಿ ಬಾಲಕ ಬಾಲಕಿಯರು ವಿವಿಧ ವೇಷಭೂಷಣ ತೊಟ್ಟು ಸ್ವಾಗತಿಸಿದರು. ಪಥಸಂಚಲನ ನಡೆಯುವ ಪ್ರಮುಖ ರಸ್ತೆಗಳಲ್ಲಿ ರಸ್ತೆ ಬದಿ ನಿಂತಿದ್ದ ಮಹಿಳೆಯರು, ಸಾರ್ವಜನಿಕರು, ಯುವಕರು ಪಥಸಂಚಲನದ ಮೇಲೆ ಪುಷ್ಪವೃಷ್ಟಿ ಮಾಡಿದರು. ನಗರದ ಉದ್ದಕ್ಕೂ ರಸ್ತೆಗಳಲ್ಲಿ ಆಕರ್ಷಕ ರಂಗೋಲಿ ಚಿತ್ತಾರ ಬಿಡಿಸಿ, ಪುಷ್ಪಗಳಿಂದ ಶೃಂಗರಿಸಿದ ರಸ್ತೆಗಳಲ್ಲಿ ಪಥಸಂಚಲನಕ್ಕೆ ಭವ್ಯವಾಗಿ ಸ್ವಾಗತಿಸಲಾಯಿತು. ರಸ್ತೆಯುದ್ದಕ್ಕೂ ಸಾವಿರಾರೂ ಜನರು ನೆರೆದಿದ್ದರು.
ನಗರದ ವೀರಶೈವ ಜನರಲ್ ಲೈಬ್ರರಿಯಿಂದ ಗಣವೇಷಧಾರಿ ಸ್ವಯಂ ಸೇವಕರ ಪಥ ಸಂಚಲನಕ್ಕೆ ಚಾಲನೆ ನೀಡಲಾಯಿತು. ಪಥ ಸಂಚಲನವು ವೀರಶೈವ ಲೈಬ್ರರಿ ಆರಂಭವಾಗಿ ಪಂ.ಪುಟ್ಟರಾಜ ಬಸ್ ನಿಲ್ದಾಣ, ಗ್ರೇನ್ ಮಾರುಕಟ್ಟೆ ರಸ್ತೆ, ಕಂಬಾರ ಸಾಲು, ನಾಮಜೋಶಿ ರಸ್ತೆ, ಬಸವೇಶ್ವರ ಸರ್ಕಲ್, ಪಟೇಲ್ ರಸ್ತೆ, ಅಂಬಾಭವಾನಿ ದೇವಸ್ಥಾನ ರಸ್ತೆ, ಸರಾಫ್ ಬಜಾರ ರಸ್ತೆ, ಹುಯಿಲಗೋಳ ನಾರಾಯಣರಾವ್ ವೃತ್ತ, ಮಹೇಂದ್ರಕರ್ ಸರ್ಕಲ್, ಡಿಸಿ ಮಿಲ್ ರಸ್ತೆ, ಕಾಮನಕಟ್ಟಿ ರಸ್ತೆ, ಶಂಕರಲಿಂಗ ದೇವಸ್ಥಾನ ರಸ್ತೆ, ಕರ್ನಾಟಕ ಚಿತ್ರಮಂದಿರ, ಗಾಂಧಿ ಸರ್ಕಲ್ ಮುನ್ಸಿಪಲ್ ಹೈಸ್ಕೂಲ್ ಮೈದಾನದಲ್ಲಿ ಮುಕ್ತಾಯವಾಯಿತು.
ಪಥ ಸಂಚಲನ ಹಿನ್ನಲೆಯಲ್ಲಿ ನಗರದಲ್ಲಿ ಪೊಲೀಸ್ ಭದ್ರತೆ ಹೆಚ್ಚಿಸಲಾಗಿತ್ತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್ ಮಾರ್ಗದರ್ಶನದಲ್ಲಿ ಎಎಸ್‌ಪಿ, ಡಿವೈಎಸ್‌ಪಿ, ಸಿಪಿಐ, ಪಿಎಸ್‌ಐ, ಎಎಸ್‌ಐ, ಪೊಲೀಸ್ ಕಾನ್‌ಸ್ಟೆಬಲ್‌ಗಳು, ಗೃಹರಕ್ಷಕ ದಳ ಸಿಬ್ಬಂದಿ, ಡಿಎಆರ್ ಸಿಬ್ಬಂದಿ ಬಂದೋಬಸ್ತ್‌ನಲ್ಲಿ ಭಾಗಿಯಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.