ADVERTISEMENT

ಲಕ್ಷ್ಮೇಶ್ವರ: ಜನಮನ ಸೆಳೆದ ಗಣವೇಷಧಾರಿಗಳ ಸಂಚಲನ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2025, 4:04 IST
Last Updated 13 ಅಕ್ಟೋಬರ್ 2025, 4:04 IST
ರಾಷ್ಟ್ರೀಯ ಸ್ವಯಂ ಸಂಘದ ಶತಮಾನೋತ್ಸವದ ಅಂಗವಾಗಿ ಲಕ್ಷ್ಮೇಶ್ವರದಲ್ಲಿ ಭಾನುವಾರ ಗಣವೇಷಧಾರಿಗಳಿಂದ ಪಥ ಸಂಚಲನ ಅದ್ದೂರಿಯಾಗಿ ಜರುಗಿತು
ರಾಷ್ಟ್ರೀಯ ಸ್ವಯಂ ಸಂಘದ ಶತಮಾನೋತ್ಸವದ ಅಂಗವಾಗಿ ಲಕ್ಷ್ಮೇಶ್ವರದಲ್ಲಿ ಭಾನುವಾರ ಗಣವೇಷಧಾರಿಗಳಿಂದ ಪಥ ಸಂಚಲನ ಅದ್ದೂರಿಯಾಗಿ ಜರುಗಿತು   

ಲಕ್ಷ್ಮೇಶ್ವರ: ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ ನೂರು ವರ್ಷ ತುಂಬಿದ ಹಿನ್ನೆಲೆಯಲ್ಲಿ ಭಾನುವಾರ ಲಕ್ಷ್ಮೇಶ್ವರದಲ್ಲಿ ಗಣವೇಷಧಾರಿಗಳ ಬೃಹತ್ ಪಥ ಸಂಚಲನ ಅದ್ದೂರಿಯಾಗಿ ಜರುಗಿತು.

ಆರ್‌ಎಸ್‍ಎಸ್ ಪ್ರಾರ್ಥನಾ ಗೀತೆಯೊಂದಿಗೆ ಪಟ್ಟಣದ ಮಹಾಕವಿ ಪಂಪ ವರ್ತುಲದಿಂದ ಗಣವೇಷಧಾರಿಗಳ ಪಥ ಸಂಚಲನ ಆರಂಭಗೊಂಡಿತು.

ಶಾಸಕ ಡಾ.ಚಂದ್ರು ಲಮಾಣಿ ಸೇರಿದಂತೆ ಅನೇಕ ಗಣ್ಯರು ಗಣವೇಷಧಾರಿ ಧರಿಸಿ ಪಥ ಸಂಚಲನದಲ್ಲಿ ಭಾಗವಹಿಸಿದ್ದರು.

ADVERTISEMENT

ಬಸ್ತಿಬಣ, ವಿದ್ಯಾರಣ್ಯ ವರ್ತುಲ, ಕುಂಬಾರ ಓಣಿ, ಹಳೇ ಪೊಲೀಸ್ ಠಾಣೆ, ತಹಶೀಲ್ದಾರ ಕಚೇರಿ, ದೂದಪೀರಾಂ ದರ್ಗಾ, ಬಜಾರ, ಸೋಮೇಶ್ವರ ಪಾದಗಟ್ಟಿ, ಪುರಸಭೆ, ಶಿಗ್ಲಿ ಕ್ರಾಸ್, ಹೊಸ ಬಸ್ ನಿಲ್ದಾಣ, ಸರ್ಕಾರಿ ಆಸ್ಪತ್ರೆ, ಪರ್ವತ ಮಲ್ಲಯ್ಯನ ದೇವಸ್ಥಾನ, ಹಳೇ ಬಸ್ ನಿಲ್ದಾಣದ ಮೂಲಕ ಸಂಚರಿಸಿ ತೋಂಟದ್ದೇವರಮಠಕ್ಕೆ ಆಗಮಿಸಿ ಸಮಾಪ್ತಿಗೊಂಡಿತು.

ಹೂವಿನ ಸುರಿಮಳೆ: ಗಣವೇಷಧಾರಿಗಳ ಪಥ ಸಂಚಲನಕ್ಕೂ ಮುನ್ನ ಎಲ್ಲರ ಮನೆ ಮುಂದೆ ನೀರು ಚಿಮುಕಿಸಿ ರಂಗೋಲಿ ಬಿಡಿಸಲಾಗಿತ್ತು. ಪಥ ಸಂಚಲನ ಬರುತ್ತಿದ್ದಂತೆ ಸಾರ್ವಜನಿಕರು ಪುಷ್ಪವೃಷ್ಟಿ ಮಾಡುವ ಮೂಲಕ ಹಿಂದುತ್ವ ಮೆರೆದರು. ಪಥ ಸಂಚಲನದ ಉದ್ದಕ್ಕೂ ಜೈ ಭಾರತ ಮಾತಾಕೀ ಜೈ ಎಂಬ ಘೋಷಣೆ ಮುಗಿಲು ಮುಟ್ಟಿತ್ತು. ಜೋಡೆತ್ತಿನ ಚಕ್ಕಡಿಯಲ್ಲಿ ಗಣವೇಷಧಾರಿ ಸಣ್ಣ ಮಕ್ಕಳು ಕುಳಿತುಕೊಂಡಿದ್ದು ಗಮನ ಸೆಳೆಯಿತು.

ಗಮನ ಸೆಳೆದ ಗಣವೇಷಧಾರಿ ಮಕ್ಕಳು: ಸಣ್ಣ ಸಣ್ಣ ಮಕ್ಕಳು ಗಣವೇಷಧಾರಿಗಳಾಗಿ ಗಮನ ಸೆಳೆದರು. ಒಂಭತ್ತು ತಿಂಗಳ ಪುಟ್ಟ ಮಗುವೊಂದು ಗಣವೇಷ ಧರಿಸಿದ್ದು ವಿಶೇಷವಾಗಿತ್ತು. ಅದರಂತೆ ಕೆಲ ಮಕ್ಕಳು ರಾಮ ಲಕ್ಷ್ಮಣ, ಸೀತೆ ಮತ್ತು ಹನುಮಂತರ ವೇಷ ಧರಿಸಿದ್ದರು.

ಪಥ ಸಂಚಲನ ಜರುಗುವ ಹಿನ್ನೆಲೆಯಲ್ಲಿ ಇಡೀ ಪಟ್ಟಣದ ತುಂಬ ಹಸಿರು ಬಂಟಿಂಗ್ಸ್‍ಗಳನ್ನು ಕಟ್ಟಲಾಗಿತ್ತು. ಅದರೊಂದಿಗೆ ಬ್ಯಾನರ್ ಅಳವಡಿಸಲಾಗಿತ್ತು. ಇಡೀ ಲಕ್ಷ್ಮೇಶ್ವರ ಕೇಸರಿಮಯವಾಗಿತ್ತು.

ಲಕ್ಷ್ಮೇಶ್ವರದಲ್ಲಿ ಭಾನುವಾರ ಜರುಗಿದ ಗಣವೇಷಧಾರಿಗಳ ಪಥ ಸಂಚಲನದಲ್ಲಿ ರಾಮ ಲಕ್ಷ್ಮಣರ ವೇಷ ಧರಿಸಿದ್ದ ಮಕ್ಕಳು

ವಿವಿಧತೆಯಲ್ಲಿ ಏಕತೆಯೇ ಭಾರತದ ಹಿರಿಮೆ’

ಲಕ್ಷ್ಮೇಶ್ವರ: ‘ಭಾರತ ವಿವಿಧತೆಯಲ್ಲಿ ಏಕತೆ ಹೊಂದಿದ ಸುಸಂಸ್ಕೃತ, ಮೌಲ್ಯಾಧಾರಿತ ದೇಶ. ಈ ಪುಣ್ಯ, ಪವಿತ್ರ ಭೂಮಿಯಲ್ಲಿ ಜನಿಸಿದ ಪ್ರತಿಯೊಬ್ಬ ಭಾರತೀಯನೂ ದೇಶಾಭಿಮಾನಿಯಾಗಿರಬೇಕು. ಈ ನಿಟ್ಟಿನಲ್ಲಿ ರಾಷ್ಟ್ರಕ್ಕಾಗಿ ಸರ್ವತ್ಯಾಗ ಸಮರ್ಪಣಾ ಮನೋಭಾವ ಜಾಗೃತಗೊಳಿಸುವ ಕಾರ್ಯವನ್ನು ಆರ್‌ಎಸ್‍ಎಸ್ ಮಾಡುತ್ತಿದೆ’ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಧಾರವಾಡ ವಿಭಾಗದ ಪ್ರಮುಖ ಗುರುರಾಜ ಕುಲಕರ್ಣಿ ಹೇಳಿದರು.

ರಾಷ್ಟ್ರೀಯ ಸ್ವಯಂ ಸೇವಕ ಸಂಘದಿಂದ ಭಾನುವಾರ ಆರ್‌ಎಸ್‍ಎಸ್ ಶತಮಾನೋತ್ಸವದ ಅಂಗವಾಗಿ ಲಕ್ಷ್ಮೇಶ್ವರದಲ್ಲಿ ನಡೆದ ಪಥ ಸಂಚಲನ ಕಾರ್ಯಕ್ರಮದ ನಂತರ ನಡೆದ ಸ್ವಯಂ ಸೇವಕರ ಸಭೆ ಉದ್ಧೇಶಿಸಿ ಅವರು ಮಾತನಾಡಿದರು.

ಡಾ.ಕೇಶವ ಬಲಿರಾಂ ಹೆಗಡೆವಾರ್ ಅವರು ಹಿಂದೂಗಳನ್ನು ಮತ್ತು ಹಿಂದೂ ರಾಷ್ಟ್ರದ ಪರಿಕಲ್ಪನೆಯನ್ನು ಜಾಗೃತಗೊ ಳಿಸುವ ಮತ್ತು ದೇಶವನ್ನು ವೈಭವದತ್ತ ಕೊಂಡೊಯ್ಯುವ ಗುರಿಯೊಂದಿಗೆ ಸಂಘ ಹುಟ್ಟು ಹಾಕಿದ್ದಾರೆ. ಆರ್‌ಎಸ್‍ಎಸ್ ಸಂಘಟನೆ ಯುವಕರನ್ನು ಶಾರೀರಿಕ, ಬೌದ್ಧಿಕ ಮತ್ತು ಮಾನಸಿಕ ಸದೃಢರನ್ನಾಗಿಸುವತ್ತ ಕಾರ್ಯನಿರ್ವಹಿಸುತ್ತದೆ. ಜಾತೀಯತೆ ಹೆಚ್ಚುತ್ತಿರುವುದರಿಂದ ಸಮಾಜದಲ್ಲಿ ಒಡಕು ಉಂಟಾಗಿದೆ. ದೇಶದಲ್ಲಿ ಹಿಂದೂ ಮಠ, ಮಂದಿರಗಳ ಮೇಲೆ ಅವ್ಯಾಹತವಾಗಿ ಪಿತೂರಿ ನಡೆಯುತ್ತಿರುವುದನ್ನು ಈಚಿನ ಅನೇಕ ಘಟನೆಗಳಿಂದ ಸಾಬೀತಾಗಿದೆ. ಹಿಂದೂಗಳಾದ ನಾವು ನಮ್ಮ ವಿರುದ್ಧ ನಡೆಯುತ್ತಿರುವ ಪಿತೂರಿ ವಿರುದ್ಧ ಸಿಡಿದೇಳಬೇಕು’ ಎಂದು ತಿಳಿಸಿದರು.

ಸಾನ್ನಿಧ್ಯ ವಹಿಸಿದ್ದ ಗಂಜಿಗಟ್ಟಿಯ ಡಾ.ವೈಜನಾಥ ಶಿವಲಿಂಗೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ‘ಸಂಸ್ಕಾರ, ಧರ್ಮ, ಸಂಪ್ರದಾಯ, ಸಂಸ್ಕೃತಿ ಇರುವ ಭಾರತ ರಾಷ್ಟ್ರ ನಿರ್ಮಾಣಕ್ಕಾಗಿ ಎಲ್ಲರೂ ತನು, ಮನ, ಧನಗಳಿಂದ ದುಡಿಯಬೇಕಾದ ಅಗತ್ಯ ಇದೆ’ ಎಂದರು.

ಗೋಗಿ ಇದ್ದರು. ಗಜಾನನ ಹೆಗಡೆ, ಮಲ್ಲಿಕಾರ್ಜುನ ಹೂಗಾರ, ಚಂದ್ರು ಹಂಪಣ್ಣವರ ನಿರೂಪಿಸಿದರು.

ಸ್ವಯಂ ಸೇವಕರ ಮೇಲೆ ಪುಷ್ಪವೃಷ್ಟಿ

ಮುಂಡರಗಿ: ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಶತಮಾನೋತ್ಸವದ ಅಂಗವಾಗಿ ಸಂಘದ ಕಾರ್ಯಕರ್ತರು ಶನಿವಾರ ಪಟ್ಟಣದಲ್ಲಿ ಪಥ ಸಂಚಲನ ನಡೆಸಿದರು.

ಪಟ್ಟಣದ ಜಗದ್ಗುರು ಅನ್ನದಾನೀಶ್ವರ ಮಠದಲ್ಲಿ ಅನ್ನದಾನೀಶ್ವರ ಸ್ವಾಮೀಜಿ ಭಗವಾಧ್ವಜಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಗಣವೇಷಧಾರಿಗಳು ಪಥ ಸಂಚಲನಕ್ಕೆ ಚಾಲನೆ ನೀಡಿದರು.

ಅನ್ನದಾನೀಶ್ವರ ಮಠದಿಂದ ಹೊರಟ ಗಣವೇಷಧಾರಿಗಳ ಪಥ ಸಂಚಲನವು ಪಟ್ಟಣದ ಗಾಂಧೀ ವೃತ್ತ, ಕಡ್ಲಿಪೇಟೆ, ಕನ್ನಿಕಾ ಪರಮೇಶ್ವರಿ ದೇವಸ್ಥಾನ, ಅಂಬಾ ಭವಾನಿ ನಗರ, ಕೇಂದ್ರ ಬಸ್ ನಿಲ್ದಾಣ, ಬೃಂದಾವನ ವೃತ್ತ, ಭಜಂತ್ರಿ ಓಣಿ, ಕೊಪ್ಪಳ ವೃತ್ತ, ಕಿತ್ತೂರು ಚನ್ನಮ್ಮ ವೃತ್ತ, ಸರ್ ಸಿದ್ದಪ್ಪ ಕಂಬಳಿ ವೃತ್ತ, ಜಾಗೃತ ವೃತ್ತ ಮಾರ್ಗವಾಗಿ ಜಗದ್ಗುರು ಅನ್ನದಾನೀಶ್ವರ ಕಾಲೇಜು ಮೈದಾನಕ್ಕೆ ಆಗಮಿಸಿತು.

ಪಥ ಸಂಚಲನದ ಅಂಗವಾಗಿ ಪಟ್ಟಣದ ಪ್ರಮುಖ ರಸ್ತೆಗಳು ತಳಿರು, ತೋರಣಗಳಿಂದ ಅಲಕೃತಗೊಂಡಿದ್ದವು. ರಸ್ತೆಗಳ ಉದ್ದಕ್ಕೂ ಮಹಿಳೆಯರು ಬಣ್ಣ, ಬಣ್ಣದ ರಂಗೋಲಿ ಬಿಡಿಸಿ, ರಸ್ತೆಗಳ ಅಂದವನ್ನು ಹೆಚ್ಚಿಸಿದ್ದರು. ಪಟ್ಟಣದ ಮುಖ್ಯ ರಸ್ತೆಗಳು ಕೇಸರಿಮಯವಾಗಿದ್ದವು.

ಪಥ ಸಂಚಲನ ಸಾಗುವ ರಸ್ತೆಗಳ ಉದ್ದಕ್ಕೂ ಜನರು ಗಣವೇಷಧಾರಿಗಳ ಮೇಲೆ ಹೂಮಳೆ ಗರೆದರು. ಛತ್ರಪತಿ ಶಿವಾಜಿ, ಭಾರತ ಮಾತೆ ಮೊದಲಾದ ರಾಷ್ಟ್ರ ಭಕ್ತರ ವೇಷ, ಭೂಷಣ ದರಿಸಿದ್ದ ಮಕ್ಕಳು ಗಣ ವೇಷಧಾರಿಗಳೊಂದಿಗೆ ಮೆರವಣಿಗೆಯ ಉದ್ದಕ್ಕೂ ಹೆಜ್ಜೆ ಹಾಕಿದರು. ಪಥ ಸಂಚಲನದಲ್ಲಿ ಭಾರತ ಮಾತಾ ಕಿ ಜೈ ಘೋಷಣೆ ಎಂಬ ಘೋಷಣೆ ಮುಗಿಲು ಮುಟ್ಟಿತ್ತು.

ಪೊಲೀಸರು ಶಾಂತಿ ಸುವ್ಯವಸ್ಥೆ ಕಾಪಾಡಿದರು. ಮಶಾಸಕ ಡಾ.ಚಂದ್ರು ಲಮಾಣಿ, ಆರ್.ಎಸ್.ಎಸ್. ಕಾರ್ಯಕರ್ತರಾದ ಮಂಜುನಾಥ ಇಟಗಿ, ಶ್ರೀನಿವಾಸ ಕಟ್ಟಿಮನಿ, ಶೇಖರಗೌಡ ಪಾಟೀಲ, ಪ್ರವೀಣ ಅರ್ಕಸಾಲಿ, ನಾರಾಯಣ ಮಹೇಂದ್ರಕರ್, ಅನಂತ ಚಿತ್ರಗಾರ, ಹನುಮಂತ ಅರ್ಕಸಾಲಿ, ಚಂದ್ರು ಹಿರೇಮಠ, ಸುರೇಶ ರಾಮೇನಹಳ್ಳಿ, ಶ್ರೀಕಾಂತ ಬಡಿಗೇರ, ಮಂಜು ಮುಧೋಳ, ರಾಮು ಡೊಣ್ಣಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.