ADVERTISEMENT

ಕಾಂಗ್ರೆಸ್‌ ಸರ್ಕಾರದ್ದು ಶೂನ್ಯ ಸಾಧನೆ: ಸಂಕನೂರ

ವಿಧಾನ ಪರಿಷತ್‌ ಸದಸ್ಯ ಎಸ್‌.ವಿ.ಸಂಕನೂರ ಟೀಕೆ

​ಪ್ರಜಾವಾಣಿ ವಾರ್ತೆ
Published 20 ಮೇ 2025, 15:47 IST
Last Updated 20 ಮೇ 2025, 15:47 IST
ಎಸ್‌.ವಿ.ಸಂಕನೂರ
ಎಸ್‌.ವಿ.ಸಂಕನೂರ   

ಗದಗ: ‘ಎರಡು ವರ್ಷಗಳ ಹಿಂದೆ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಉತ್ತಮ ಆಡಳಿತ ನೀಡುವಲ್ಲಿ ವಿಫಲವಾಗಿದೆ. ಆದರೂ, ಯಾವ ಕಾರಣಕ್ಕಾಗಿ ಸಾಧನಾ ಸಮಾವೇಶ ಮಾಡಿದ್ದಾರೋ ಗೊತ್ತಿಲ್ಲ’ ಎಂದು ವಿಧಾನ ಪರಿಷತ್‌ ಸದಸ್ಯ ಎಸ್‌.ವಿ.ಸಂಕನೂರ ಟೀಕಿಸಿದರು.

‘ಪಂಚ ಗ್ಯಾರಂಟಿಗಳನ್ನು ಜನರಿಗೆ ನೀಡಿದ್ದೇ ದೊಡ್ಡ ಸಾಧನೆಯೇ? ಅದನ್ನು ಹೊರತು ಪಡಿಸಿ ಸಿ.ಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ರಾಜ್ಯದ ಅಭಿವೃದ್ಧಿಗಾಗಿ ಯಾವ ಕೆಲಸಗಳನ್ನು ಮಾಡಿದ್ದಾರೆ’ ಎಂದು ಮಂಗಳವಾರ ಪ್ರಶ್ನಿಸಿದರು.

‘ರಾಜ್ಯದಲ್ಲಿ ಈ ಹಿಂದೆ ಮುಖ್ಯಮಂತ್ರಿ ಆಗಿರುವ ಯಾರೊಬ್ಬ ಸಿ.ಎಂ ಕೂಡ ಇಷ್ಟು ದೊಡ್ಡ ಪ್ರಮಾಣದಲ್ಲಿ ಸಾಲ ಮಾಡಿರಲಿಲ್ಲ. ಸಿ.ಎಂ ಸಿದ್ದರಾಮಯ್ಯ ಅವರು ₹2.30 ಲಕ್ಷ ಕೋಟಿ ಸಾಲ ಮಾಡಿದ್ದಾರೆ. ಇದು ಅವರ ಸಾಧನೆಯೇ’ ಎಂದು ಟೀಕಿಸಿದರು.

ADVERTISEMENT

‘ಈ ಹಿಂದಿನ ಮುಖ್ಯಮಂತ್ರಿಗಳಾರೂ ಕೊರತೆ ಬಜೆಟ್‌ ಮಂಡಿಸಿಲ್ಲ. ಸಿದ್ದರಾಮಯ್ಯ ಅದನ್ನು ಮಾಡಿದ್ದಾರೆ. ಅಲ್ಲದೇ ಒಟ್ಟು ಬಜೆಟ್‌ನಲ್ಲಿ ರಾಜ್ಯದ ಮೂಲಸೌಕರ್ಯ ಅಭಿವೃದ್ಧಿಗೆ ಶೇ 25 ಹಣ ಮೀಸಲಿಡಬೇಕು. ಆದರೆ, ಕಾಂಗ್ರೆಸ್‌ನವರು ಶೇ 10ರಷ್ಟು ಮಾತ್ರ ಇಟ್ಟಿದ್ದಾರೆ. ಇದು ಸಾಧನೆಯೇ’ ಎಂದು ದೂರಿದರು.

‘ಕಾಂಗ್ರೆಸ್‌ ಪಕ್ಷದ ಶಾಸಕರೇ ರಾಜ್ಯ ಸರ್ಕಾರದಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ ಎಂದು ಬಹಿರಂಗ ಹೇಳಿಕೆ ನೀಡುತ್ತಾರೆ. ಎಲ್ಲ ಹುದ್ದೆಗಳಿಗೂ ರೇಟ್‌ ಕಾರ್ಡ್‌ ನಿಗದಿ ಮಾಡಿದ್ದಾರೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ ಮೀಸಲಿದ್ದ ₹39 ಸಾವಿರ ಕೋಟಿ ಹಣವನ್ನು ಅನ್ಯ ಕಾರ್ಯಕ್ಕೆ ಬಳಕೆ ಮಾಡಿಕೊಂಡಿದ್ದಾರೆ. 46 ದಿನಬಳಕೆ ವಸ್ತು, ಸೇವೆಗಳ ದರ ದುಪ್ಪಟ್ಟಾಗಿದೆ. ಜನರು ಬೆಲೆ ಏರಿಕೆಯಿಂದ ತತ್ತರಿಸಿದ್ದಾರೆ. ಇವೇ ಅವರ ಸಾಧನೆ’ ಎಂದು ಹರಿಹಾಯ್ದರು.

‘ಜಾತಿ ಜನಗಣತಿ ಬಿಡುಗಡೆ ಮಾಡದಂತೆ ಎಲ್ಲ ಪಕ್ಷಗಳವರು ಒತ್ತಾಯಿಸಿದ್ದರು. ಅವರ ವಿರೋಧದ ನಡುವೆಯೂ ಬಿಡುಗಡೆ ಮಾಡಿ ಜಾತಿ ಜಾತಿಗಳ ನಡುವೆ ಬೆಂಕಿ ಹಚ್ಚುವ ಕೆಲಸ ಮಾಡಿದ್ದು ಕಾಂಗ್ರೆಸ್‌ನ ಸಾಧನೆಯಾಗಿದೆ’ ಎಂದು ಆರೋಪ ಮಾಡಿದರು.

‘ಇಡೀ ದೇಶದಲ್ಲಿ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ನಮ್ಮ ರಾಜ್ಯ ಕೊನೆ ಸ್ಥಾನದಲ್ಲಿದೆ. ಶಿಕ್ಷಕರ ಹುದ್ದೆಗಳು ಶೇ 50ಕ್ಕಿಂತಲೂ ಹೆಚ್ಚು ಖಾಲಿ ಉಳಿದಿವೆ. ವಿಶ್ವವಿದ್ಯಾಲಯಗಳಲ್ಲಿ ಪ್ರಾಧ್ಯಾಪಕರೇ ಇಲ್ಲ. ನಮ್ಮ ರಾಜ್ಯದ ಶೈಕ್ಷಣಿಕ ವ್ಯವಸ್ಥೆ ಹಾಳು ಮಾಡಿದ್ದಕ್ಕಾಗಿ ಸಮಾವೇಶ ಮಾಡುತ್ತಿದ್ದಾರೆಯೇ’ ಎಂದು ನಿಂದಿಸಿದರು.

‘ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಸಾವಿರಾರು ಮಂದಿ ರೌಡಿಶೀಟರ್‌ಗಳು ಬಿಡುಗಡೆ ಆಗಿದ್ದಾರೆ. ರಾಜ್ಯದ ಮೂಲಸೌಕರ್ಯ ಅಭಿವೃದ್ಧಿ ಕನಸಾಗಿದೆ. ಜನರಿಗೆ ಕಾಂಗ್ರೆಸ್‌ನ ಹಣೆಬರಹ ಗೊತ್ತಾಗಿದೆ. ಹಾಗಾಗಿ, ಇವರಿಗೆ ಜನರೇ ಮುಂದೆ ತಕ್ಕ ಪಾಠ ಕಲಿಸುತ್ತಾರೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.