ADVERTISEMENT

‘ಸದಾನಂದ ಪಿಳ್ಳಿ ಜನಾನುರಾಗಿ ವ್ಯಕ್ತಿ’

‘ಸಾರ್ಥಕ ಬದುಕಿನ ಸದಾನಂದ’ ಸಂಸ್ಮರಣಾ ಗ್ರಂಥ ಲೋಕಾರ್ಪಣೆ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2021, 6:00 IST
Last Updated 15 ಫೆಬ್ರುವರಿ 2021, 6:00 IST
ಗದುಗಿನ ಬಸವೇಶ್ವರ ನಗರದಲ್ಲಿ ಭಾನುವಾರ ದಿ. ಸದಾನಂದ ಪಿಳ್ಳಿ ಅವರ ಅಭಿಮಾನಿಗಳ ಬಳಗ ಆಯೋಜಿಸಿದ್ದ ‘ಸದಾನಂದ ಪಿಳ್ಳಿ ಸಂಸ್ಮರಣಾ ಸಮಾರಂಭ’ದಲ್ಲಿ ಸಚಿವ ಸಿ.ಸಿ.ಪಾಟೀಲ ಮಾತನಾಡಿದರು
ಗದುಗಿನ ಬಸವೇಶ್ವರ ನಗರದಲ್ಲಿ ಭಾನುವಾರ ದಿ. ಸದಾನಂದ ಪಿಳ್ಳಿ ಅವರ ಅಭಿಮಾನಿಗಳ ಬಳಗ ಆಯೋಜಿಸಿದ್ದ ‘ಸದಾನಂದ ಪಿಳ್ಳಿ ಸಂಸ್ಮರಣಾ ಸಮಾರಂಭ’ದಲ್ಲಿ ಸಚಿವ ಸಿ.ಸಿ.ಪಾಟೀಲ ಮಾತನಾಡಿದರು   

ಗದಗ: ‘ಅವಿಭಕ್ತ ಕುಟಂಬ ಹೊಂದಿದ್ದರೂ ಕುಟುಂಬದ ಬಗ್ಗೆ ಎಳ್ಳಷ್ಟು ಚಿಂತಿಸದೇ ತಮ್ಮ ಜೀವನವನ್ನು ಸಮಾಜ ಸೇವೆಗೆ ಮೀಸಲಿಟ್ಟವರು ಸದಾನಂದ ಪಿಳ್ಳಿ’ ಎಂದು ‘ಸಾರ್ಥಕ ಬದುಕಿನ ಸದಾನಂದ’ ಕೃತಿಯ ಸಂಪಾದಕ ಹಾಗೂ ಹಿರಿಯ ಸಾಹಿತಿ ಪ್ರೊ. ಚಂದ್ರಶೇಖರ ವಸ್ತ್ರದ ಅಭಿಪ್ರಾಯಪಟ್ಟರು.

ಬಸವೇಶ್ವರ ನಗರದಲ್ಲಿ ಭಾನುವಾರ ದಿ. ಸದಾನಂದ ಪಿಳ್ಳಿ ಅವರ ಅಭಿಮಾನಿಗಳ ಬಳಗ ಆಯೋಜಿಸಿದ್ದ ‘ಸದಾನಂದ ಪಿಳ್ಳಿ ಸಂಸ್ಮರಣಾ ಸಮಾರಂಭ’ದಲ್ಲಿ ಅವರು ಮಾತನಾಡಿದರು.

‘ಕಡು ಕಷ್ಟದ ದಿನಗಳಲ್ಲಿಯೂ ಅವರು ಸೇವಾಮನೋಭಾವ ಬಿಡಲಿಲ್ಲ. ಮಾಜಿ ಸಚಿವ ಎಸ್.ಎಸ್.ಪಾಟೀಲ ಅವರ ನೆರವಿನಿಂದ ದೊರೆತ ₹5 ಲಕ್ಷ ಸಾಲದಿಂದ ಆರಂಭಿಸಿದ ವ್ಯವಹಾರದಿಂದ ಅವರ ಕುಟುಂಬ ಆರ್ಥಿಕವಾಗಿ ಸಬಲವಾಯಿತು. ಹೀಗಾಗಿ ಸದಾನಂದ ಪಿಳ್ಳಿ ಅವರಿಗೆ ಸೇವೆ ಮಾಡಲು ಮತ್ತಷ್ಟು ಅವಕಾಶ ದೊರೆಯಿತು’ ಎಂದು ಪಿಳ್ಳಿ ಅವರೊಂದಿಗಿನ ಒಡನಾಟವನ್ನು ಸ್ಮರಿಸಿದರು.

ADVERTISEMENT

‘ಸದಾನಂದ ಪಿಳ್ಳಿ ನಾಲ್ಕು ಬಾರಿ ನಗರಸಭೆ ಸದಸ್ಯರಾಗಿ ಆಯ್ಕೆಯಾಗಿದ್ದು ಸಾಮಾನ್ಯ ಮಾತಲ್ಲ. ನಗರಸಭೆಯಲ್ಲಿ ಅವರ ವಾದಮಂಡನೆ ಮೆಚ್ಚುವಂತವಾಗಿತ್ತು. ಸ್ನೇಹಜೀವಿಯಾಗಿದ್ದ ಪಿಳ್ಳಿ ಅವರಿಗೆ ಇನ್ನಷ್ಟು ರಾಜಕೀಯ ಅವಕಾಶಗಳು ಸಿಗಬೇಕಿತ್ತು ಎನ್ನುವ ನೋವು ಕಾಡುತ್ತಿದೆ. ಪಿಳ್ಳಿ ಅವರ ಶ್ರೀಮತಿ ಸುರೇಖಾ ಅವರಿಗೆ ರಾಜಕೀಯ ಜೀವನದ ಇಚ್ಛೆ ಇದ್ದರೆ, ಪಕ್ಷದಿಂದ ಎಲ್ಲ ರೀತಿಯ ನೆರವು ನೀಡಲಾಗುವುದು’ ಎಂದು ಹೇಳಿದರು.

ವಿಧಾನ ಪರಿಷತ್‌ ಸದಸ್ಯ ಎಸ್‌.ವಿ.ಸಂಕನೂರ, ‘ಸದಾನಂದ ಪಿಳ್ಳಿ ಅವರು ಬದುಕಿನ ಅವಧಿಯಲ್ಲಿ ಗದಗ ಬೆಟಗೇರಿ ಅಭಿವೃದ್ಧಿ ಮಾಡಿದ್ದಾರೆ. ಪ್ರತಿಯೊಬ್ಬರ ಸಮಸ್ಯೆಗೂ ತಕ್ಷಣ ಪರಿಹಾರ ಒದಗಿಸುತ್ತಿದ್ದರು.
ಜನಾನುರಾಗಿಯಾಗಿದ್ದ ಅವರು ಬಡವರ ಕಣ್ಣೀರು ಒರೆಸುವ ಕೆಲಸವನ್ನು ಬದುಕಿನುದ್ದಕ್ಕೂ ಮಾಡಿದ್ದಾರೆ’ ಎಂದು ಹೇಳಿದರು.

ಬಳಗಾನೂರ ಚಿಕೇನಕೊಪ್ಪದ ಶಿವಶಾಂತವೀರ ಶರಣರು, ಮುಂಡರಗಿ ತೋಂಟದಾರ್ಯ ಶಾಖಾ ಮಠದ ನಿಜಗುಣಾನಂದ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು.

ಶಾಸಕ ಕಳಕಪ್ಪ ಬಂಡಿ, ಮಾಜಿ ಸಚಿವ ಎಸ್.ಎಸ್.ಪಾಟೀಲ, ಮಾಜಿ ಶಾಸಕ ಡಿ.ಆರ್.ಪಾಟೀಲ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಮೋಹನ ಮಾಳಶೆಟ್ಟಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಂಗಮೇಶ ದುಂದೂರ, ಬಿಜೆಪಿ ಮುಖಂಡ ಎಂ.ಎಸ್.ಕರಿಗೌಡರ, ದ್ರಾಕ್ಷಾರಸ ಮಂಡಳಿ ಅಧ್ಯಕ್ಷ ಕಾಂತಿಲಾಲ್ ಬನ್ಸಾಲಿ, ಶಿವಣ್ಣ ಮುಳಗುಂದ, ಜ್ಯೋತಿ ಹಾನಗಲ್ ಇದ್ದರು.

ಗಂಗಿಮಡಿ ರಸ್ತೆಗೆ ಪಿಳ್ಳಿ ಹೆಸರು ನಾಮಕರಣ

‘ಸದಾನಂದ ಪಿಳ್ಳಿ ಅವರ ಸ್ಮರಣಾರ್ಥ ಗಂಗಿಮಡಿ ಪ್ರದೇಶದ ರಸ್ತೆಯೊಂದಕ್ಕೆ ಅವರ ಹೆಸರು ನಾಮಕರಣ ಮಾಡಲಾಗುವುದು’ ಎಂದು ಗದಗ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ಹೇಳಿದರು.

‘ನಗರಸಭೆ ಸದಸ್ಯರಾಗಿದ್ದ ಪಿಳ್ಳಿ ಅವರು ಸಮಾಜಸೇವೆಗಾಗಿಯೇ ತಮ್ಮ ಜೀವನ ಮುಡಿಪಾಗಿಟ್ಟಿದ್ದರು. ರಸ್ತೆಗೆ ನಾಮಕರಣ ಮಾಡುವ ಕುರಿತು ಸರ್ಕಾರದಿಂದ ಅಧಿಕೃತ ಆದೇಶ ಬಂದಿದ್ದು, ಮಾರ್ಚ್ 7ರಂದು ನಡೆಯುವ ಪುಣ್ಯತಿಥಿ ದಿನದಂದೇ ನಾಮಕರಣ ಮಾಡಲಾಗುವುದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.