ADVERTISEMENT

ಬಾಲಕಿಯ ಕವಿತೆಗಳು ಮಕ್ಕಳಿಗೆ ಪ್ರೇರಣೆಯಾಗಲಿ: ಸಾಹಿತಿ ಚಂದ್ರಶೇಖರ ವಸ್ತ್ರದ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2025, 4:48 IST
Last Updated 6 ಸೆಪ್ಟೆಂಬರ್ 2025, 4:48 IST
ನರೇಗಲ್ ಪಟ್ಟಣದ ಅನ್ನದಾನೇಶ್ವರ ಶಿವಾನುಭವ ಮಂಟಪದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಸವೇಶ್ವರ ಸಿಬಿಎಸ್‌ಸಿ ಶಾಲೆಯಲ್ಲಿ ಎರಡನೆ ತರಗತಿಯಲ್ಲಿ ಓದುತ್ತಿರುವ ಬಾಲಕಿ ಸಾಕ್ಷಿ ರವಿ ದೇವರಡ್ಡಿ ಅವರ ʼಸಾಕ್ಷಿ ಮಾತುಕತೆʼ ಏಂಬ ಎರಡನೇ ಪುಸ್ತಕವನ್ನು ಗಣ್ಯರು ಲೋಕಾರ್ಪಣೆ ಮಾಡಿದರು
ನರೇಗಲ್ ಪಟ್ಟಣದ ಅನ್ನದಾನೇಶ್ವರ ಶಿವಾನುಭವ ಮಂಟಪದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಸವೇಶ್ವರ ಸಿಬಿಎಸ್‌ಸಿ ಶಾಲೆಯಲ್ಲಿ ಎರಡನೆ ತರಗತಿಯಲ್ಲಿ ಓದುತ್ತಿರುವ ಬಾಲಕಿ ಸಾಕ್ಷಿ ರವಿ ದೇವರಡ್ಡಿ ಅವರ ʼಸಾಕ್ಷಿ ಮಾತುಕತೆʼ ಏಂಬ ಎರಡನೇ ಪುಸ್ತಕವನ್ನು ಗಣ್ಯರು ಲೋಕಾರ್ಪಣೆ ಮಾಡಿದರು   

ನರೇಗಲ್: ಪುಟ್ಟ ಬಾಲಕಿ ಸಾಕ್ಷಿ ಬರೆದಿರುವ ’ಸಾಕ್ಷಿ ಮಾತುಕತೆʼ ಎಂಬ ಪುಸ್ತಕದಲ್ಲಿನ ಕವನಗಳು ಲಯಬದ್ಧವಾಗಿದ್ದು, ಅವು ಮಕ್ಕಳಿಗೆ ಪ್ರೇರಕವಾಗಿವೆ. ನಿಮ್ಮ ಸಹಪಾಠಿ ಬರೆದಿರುವ ಪುಸ್ತಕವನ್ನು ಓದಿ ನೀವುಗಳೂ ಸಹ ಲೇಖನ. ಕವನ, ಕಥೆಗಳನ್ನು ಬರೆಯಲು ಮುಂದಾಗಬೇಕೆಂದು ಸಾಹಿತಿ ಚಂದ್ರಶೇಖರ ವಸ್ತ್ರದ ಮಕ್ಕಳಿಗೆ ಸಲಹೆ ನೀಡಿದರು.

ನರೇಗಲ್ ಪಟ್ಟಣದ ಬಸವೇಶ್ವರ ಸಿಬಿಎಸ್‌ಸಿ ಶಾಲೆಯಲ್ಲಿ ಎರಡನೆ ತರಗತಿಯಲ್ಲಿ ಓದುತ್ತಿರುವ ಬಾಲಕಿ ಸಾಕ್ಷಿ ರವಿ ದೇವರಡ್ಡಿ ಅವರ ಎರಡನೇ ಪುಸ್ತಕ ʼಸಾಕ್ಷಿ ಮಾತುಕತೆʼ ಸೆ. ಬುಧವಾರ ಸ್ಥಳೀಯ ಅನ್ನದಾನೇಶ್ವರ ಶಿವಾನುಭವ ಮಂಟಪದಲ್ಲಿ ನಡೆದ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

’ಸಾಕ್ಷಿ ಸಮಾಜ ಮತ್ತು ಜಾನಪದದಿಂದ ಪ್ರೇರಿತಳಾಗಿದ್ದಾಳೆ. ತಾನು ಏನನ್ನು ಕಾಣುತ್ತಾಳೋ ಅದರ ಬಗ್ಗೆ ಕುತೂಹಲಿಯಾಗಿದ್ದಾಳೆ. ಇದರಿಂದ ಅವಳಲ್ಲಿ ಪ್ರಶ್ನೆಗಳು ಹುಟ್ಟಿ ಅವು ಕವನ, ಲೇಖನ, ಕಥೆಗಳ ರೂಪದಲ್ಲಿ ಮೂಡಿ ಬಂದಿರುವುದೇ ಸಾಕ್ಷಿ ಮಾತುಕತೆ ಪುಸ್ತಕದ ಹೂರಣವಾಗಿದೆ. ಅವಳ ಈ ಗುಣವನ್ನು ನೀವೆಲ್ಲರೂ ಬಳಸಿಕೊಂಡರೆ ಖಂಡಿತ ನೀವುಗಳೂ ಸಹ ಉತ್ತಮ ಲೇಖಕರಾಗಬಹುದು ಎಂದರು. ಮೊಬೈಲ್‌ನಲ್ಲಿ ಮುಳುಗಿರುವ ಇಂದಿನ ಮಕ್ಕಳು ಇನ್ನಾದರೂ ಮೊಬೈಲ್ ಗೀಳಿನಿಂದ ಹೊರಬಂದು ಉತ್ತಮ ಲೇಖಕರಾಗಲಿ ಎಂದರು.

ಪುಸ್ತಕ ಪರಿಚಯ ನೀಡಿದ ಲೇಖಕಿ ಮಮತಾ ಅರಸಿಕೇರಿ ಕವಿತೆಗಳನ್ನು ಧ್ವನಿಪೂರ್ಣವಾಗಿ ಮತ್ತು ಭಾವಪೂರ್ಣವಾಗಿ ಓದುವುದನ್ನು ರೂಢಿಸಿಕೊಳ್ಳಬೇಕು ಎಂದರು.

ಸಾನಿಧ್ಯ ವಹಿಸಿದ್ದ ಹಾಲಕೆರೆ ಅನ್ನದಾನೇಶ್ವರ ಸಂಸ್ಥಾನ ಮಠದ ಮುಪ್ಪಿನ ಬಸವಲಿಂಗ ಸ್ವಾಮೀಜಿ, ಮಕ್ಕಳು ಪ್ರಶ್ನಿಸುವ ಗುಣವನ್ನು ತಮ್ಮಲ್ಲಿ ಬೆಳೆಸಿಕೊಳ್ಳಬೇಕು. ಚೈತನ್ಯ ಹೊಂದಿರುವ ಪ್ರತಿಯೊಬ್ಬರಲ್ಲಿಯೂ ಒಂದಲ್ಲ ಒಂದು ಕಲೆ ಇದ್ದೇ ಇರುತ್ತದೆ. ಮಕ್ಕಳಲ್ಲಿರುವ ಅಭಿರುಚಿಯನ್ನು ಕಲೆಯನ್ನಾಗಿ ಮಾರ್ಪಡಿಸಲು ಮನೆಯಲ್ಲಿ ಪಾಲಕರು, ಶಾಲೆಯಲ್ಲಿ ಶಿಕ್ಷಕರು ಪ್ರೇರಣೆ ನೀಡಬೇಕು ಎಂದರು.

ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ರವೀಂದ್ರನಾಥ ದೊಡ್ಡಮೇಟಿ, ಸದಸ್ಯರಾದ ವೈದ್ಯ ಡಾ. ಜಿ. ಕೆ. ಕಾಳೆ, ವಿ. ಬಿ. ಸೋಮನಕಟ್ಟಿಮಠ, ಕಸಾಪ ಹೋಬಳಿ ಅಧ್ಯಕ್ಷ ಎಂ. ವಿ. ವೀರಾಪುರ, ಚಿಂತಕ ಚೇಗರೆಡ್ಡಿ, ಸಾಹಿತಿ ಎ. ಎಸ್. ಮಕಾನದಾರ, ಮುಖ್ಯ ಶಿಕ್ಷಕ ಎಸ್. ಎನ್. ಹೂಲಗೇರಿ, ಪ್ರಾಚಾರ್ಯ ಬಿ. ಎಚ್. ಬಂಡಿಹಾಳ, ರವಿ ದೇವರಡ್ಡಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.