ADVERTISEMENT

ಬಳಗಾನೂರ: ರಾಯಣ್ಣ ಮೂರ್ತಿ ತೆರವಿಗೆ ವಿರೋಧ, ಡಿವೈಎಸ್‍ಪಿ ಕಾರಿಗೆ ಕಲ್ಲು ತೂರಾಟ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2020, 17:07 IST
Last Updated 17 ಅಕ್ಟೋಬರ್ 2020, 17:07 IST

ಗದಗ: ಸಂಗೊಳ್ಳಿ ರಾಯಣ್ಣ ಮೂರ್ತಿ ತೆರವುಗೊಳಿಸಿದ್ದಕ್ಕೆ ಸಂಬಂಧಿಸಿದಂತೆ ಆಕ್ರೋಶಗೊಂಡ ಕೆಲವು ಕಿಡಿಗೇಡಿಗಳು, ಸ್ಥಳದಲ್ಲಿದ್ದ ಉಪ ವಿಭಾಗಾಧಿಕಾರಿ ಹಾಗೂ ಡಿವೈಎಸ್‍ಪಿ ವಾಹನಕ್ಕೆ ಕಲ್ಲು ತೂರಿದ ಘಟನೆ ತಾಲ್ಲೂಕಿನ ಬಳಗಾನೂರಲ್ಲಿ ಶನಿವಾರ ನಡೆದಿದೆ.

ಬಳಗಾನೂರಿನ ಬಸ್ ನಿಲ್ದಾಣ ಬಳಿ ರಾಯಣ್ಣ ಮೂರ್ತಿ ಸ್ಥಾಪನೆಗೆ ಅವರ ಅಭಿಮಾನಿಗಳು ಕೆಲವು ತಿಂಗಳ ಹಿಂದೆ ನಿರ್ಣಯಿಸಿದ್ದರು. ಆದರೆ, ಅದಕ್ಕೆ ಸ್ಥಳೀಯ ಗ್ರಾಮ ಪಂಚಾಯ್ತಿ ಅನುಮತಿ ನೀಡಿರಲಿಲ್ಲ. ಈ ಮಧ್ಯೆ ರಾಯಣ್ಣ ಅಭಿಮಾನಿಗಳು ತಾವು ಗುರುತಿಸಿದ್ದ ಸ್ಥಳದಲ್ಲಿ ಮೂರ್ತಿ ಸ್ಥಾಪನೆಗೆ ಸಿದ್ಧತೆ ಮಾಡಿಕೊಂಡಿದ್ದರು. ಇದೇ ವೇಳೆ ಮತ್ತೊಂದು ಗುಂಪು ಕಿತ್ತೂರ ಚನ್ನಮ್ಮ ಫಲಕ ಹಾಕಿತ್ತು. ಯಾವ ಮೂರ್ತಿಗೂ ಅವಕಾಶ ಬೇಡ ಎಂದು ಫಲಕ ತೆರವು ಮತ್ತು ಪ್ರತಿಮೆ ಸ್ಥಾಪನೆಗೆ ತಡೆ ಒಡ್ಡಲಾಗಿತ್ತು.

ಆದರೆ, ಶುಕ್ರವಾರ ರಾತ್ರಿ ರಾಯಣ್ಣ ಅಭಿಮಾನಿಗಳು, ನಿಗದಿತ ಜಾಗದಲ್ಲಿ ಮೂರ್ತಿ ಪ್ರತಿಷ್ಠಾಪಿಸಿದ್ದರು ಎನ್ನಲಾಗಿದೆ. ಈ ಸುದ್ದಿ ತಿಳಿಯುತ್ತಿದ್ದಂತೆ ಕೆಲವರು ಪೊಲೀಸರು ಹಾಗೂ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿದ್ದು, ಗ್ರಾಮಕ್ಕೆ ಉಪ ವಿಭಾಗಾಧಿಕಾರಿ ಹಾಗೂ ಡಿವೈಎಸ್‍ಪಿ ನೇತೃತ್ವದ ತಂಡ ಬಂದಿದೆ.

ADVERTISEMENT

ಈ ವೇಳೆ ಅಧಿಕಾರಿಗಳು ಗ್ರಾಮದ ದೇವಸ್ಥಾನವೊಂದರಲ್ಲಿ ಸಂಧಾನ ಸಭೆ, ಮೂರ್ತಿ ಸ್ಥಾಪನೆಗೆ ಅವಕಾಶ ಇಲ್ಲದಿರುವ ಬಗ್ಗೆ ತಿಳಿವಳಿಕೆ ಹೇಳುತ್ತಿದ್ದ ವೇಳೆಯೇ ಇತ್ತ ಪೊಲೀಸರು ಮೂರ್ತಿ ತೆರವುಗೊಳಿಸಿದ್ದಾರೆ ಎನ್ನಲಾಗಿದೆ.

ಸ್ಥಳದಲ್ಲಿದ್ದ ರಾಯಣ್ಣ ಅಭಿಮಾನಿಗಳು ತೆರವಿಗೆ ಅಡ್ಡಿಪಡಿಸುತ್ತಿದ್ದಂತೆ ಪೊಲೀಸರ ಮಧ್ಯೆ ವಾಗ್ವಾದ ನಡೆದಿದೆ. ಈ ವೇಳೆ ಕೆಲವು ಕಿಡಿಗೇಡಿಗಳು ಉಪ ವಿಭಾಗಾಧಿಕಾರಿ ಹಾಗೂ ಡಿವೈಎಸ್‍ಪಿ ವಾಹನಕ್ಕೆ ಕಲ್ಲು ತೂರಿದ್ದಾರೆ. ಇದರಿಂದಾಗಿ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ, ಗುಂಪು ಚದುರಿಸಿದ್ದಾರೆ.

‘ಸಂಧಾನ ಸಭೆ ನಡೆಯುತ್ತಿದ್ದಾಗಲೇ ಕೆಲವರು ಪ್ರಚೋದನೆಗೆ ಒಳಗಾಗಿ ಗಲಾಟೆ ಮಾಡಿ, ಗಾಡಿಗೆ ಕಲ್ಲು ತೂರಿದ್ದಾರೆ. ಹೆಚ್ಚುವರಿ ಸಿಬ್ಬಂದಿ ಕರೆಸಲಾಗಿದ್ದು, ಗ್ರಾಮದಲ್ಲಿ ಇದೀಗ ಪರಿಸ್ಥಿತಿ ತಿಳಿಯಾಗಿದೆ’ ಎಂದು ಉಪ ವಿಭಾಗಾಧಿಕಾರಿ ರಾಯಪ್ಪ ತಿಳಿಸಿದ್ದಾರೆ.

‘ಸರ್ಕಾರಿ ಜಾಗಯಲ್ಲಿ ಅನುಮತಿ ಇಲ್ಲದೇ ಮೂರ್ತಿ ಪ್ರತಿಷ್ಠಾಪಿಸಿದ್ದ ಬಗ್ಗೆ ಪಂಚಾಯ್ತಿಯವರು ಹೇಳಿದ್ದರು. ತೆರವುಗೊಳಿಸಲು ಮುಂದಾದಾಗ ಪೊಲೀಸ್‌ ಹಾಗೂ ಉಪ ವಿಭಾಗಾಧಿಕಾರಿ ಗಾಡಿಗೆ ಕಲ್ಲು ತೂರಿದ್ದರಿಂದ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದಾರೆ’ ಎಂದು ಡಿಎಸ್‌ಪಿ ಪ್ರಹ್ಲಾದ ಎಸ್.ಕೆ. ತಿಳಿಸಿದ್ದಾರೆ.

ರಾಯಣ್ಣ ಪ್ರತಿಮೆ ತೆರವಿನ ಬಳಿಕ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಡಿವೈಎಸ್‍ಪಿ ನೇತೃತ್ವದಲ್ಲಿ ನಾಲ್ವರು ಸಿಪಿಐ, 10 ಮಂದಿ ಪಿಎಸ್‍ಐ, 4 ಡಿಎಆರ್ ತುಕುಡಿ, ಸಿವಿಲ್ ಪೊಲೀಸರು ಸೇರಿದಂತೆ ನೂರಾರು ಪೊಲೀಸರು ಬೀಡು ಬಿಟ್ಟಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಕೆಲವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.