ADVERTISEMENT

ಸೇನಾ ರ್‍ಯಾಲಿಗೆ 24 ಸಾವಿರ ಯುವಕರ ನೋಂದಣಿ

ಬಿಸಿಲಿನ ತಾಪ‍; ಬೆಳಗಿನ ಜಾವ 2 ಗಂಟೆಯಿಂದಲೇ ದಾಖಲಾತಿ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 28 ಮೇ 2019, 11:25 IST
Last Updated 28 ಮೇ 2019, 11:25 IST
ಗದುಗಿನ ಕೆ.ಎಚ್. ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಸೇನಾ ಭರ್ತಿ ರ್‍ಯಾಲಿ ಮಂಗಳವಾರ ಆರಂಭವಾಯಿತು
ಗದುಗಿನ ಕೆ.ಎಚ್. ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಸೇನಾ ಭರ್ತಿ ರ್‍ಯಾಲಿ ಮಂಗಳವಾರ ಆರಂಭವಾಯಿತು   

ಗದಗ: ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ 10 ದಿನಗಳ ಸೇನಾ ನೇಮಕಾತಿ ರ್‍ಯಾಲಿ ನಡೆಯುತ್ತಿದ್ದು, ಇಲ್ಲಿನ ಇಲ್ಲಿನ ಕೆ.ಎಚ್. ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಮಂಗಳವಾರ ನಸುಕಿನಲ್ಲಿ ರ್‍ಯಾಲಿಗೆ ಚಾಲನೆ ಲಭಿಸಿತು.

ನೇಮಕಾತಿ ರ್‍ಯಾಲಿಯಲ್ಲಿ ಭಾಗವಹಿಸಲು ಬಾಗಲಕೋಟೆ, ವಿಜಯಪುರ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ದಾವಣಗೆರೆ, ಹಾವೇರಿ, ಚಿಕ್ಕಮಗಳೂರು, ಬೆಳಗಾವಿ,ಗದಗ ಸೇರಿದಂತೆ 11 ಜಿಲ್ಲೆಗಳ 24 ಸಾವಿರಕ್ಕೂ ಹೆಚ್ಚು ಯುವಕರು ಆನ್‍ಲೈನ್ ಮೂಲಕ ನೋಂದಣಿ ಮಾಡಿಕೊಂಡಿದ್ದಾರೆ. ಪ್ರತಿ ದಿನ ಸರಾಸರಿ 3 ಸಾವಿರ ಅಭ್ಯರ್ಥಿಗಳು ರ್‍ಯಾಲಿಯಲ್ಲಿ ಭಾಗವಹಿಸಲಿದ್ದಾರೆ. ಮೊದಲ ದಿನ ಧಾರವಾಡ ಜಿಲ್ಲೆಯ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.

‘ಹಗಲು ಬಿಸಿಲಿನ ತಾಪ ಹೆಚ್ಚಿರುವುದರಿಂದ ರ್‍ಯಾಲಿಯಲ್ಲಿ ಭಾಗವಹಿಸಲು ಬಂದಿರುವ ಅಭ್ಯರ್ಥಿಗಳಿಗೆ ಬೆಳಗಿನ ಜಾವ 2 ಗಂಟೆಯಿಂದಲೇ ದಾಖಲಾತಿ ಪರಿಶೀಲನೆ ಕಾರ್ಯ ಪ್ರಾರಂಭಿಸುತ್ತೇವೆ. ಬೆಳಿಗ್ಗೆ 5 ಗಂಟೆಗೆ ಮೊದಲ ಸುತ್ತಿನ 1.6 ಕಿ.ಮೀ. ಓಟ ನಡೆಯುತ್ತದೆ. ಅಭ್ಯರ್ಥಿ 5 ನಿಮಿಷ 30 ಸೆಕೆಂಡ್‌ನಲ್ಲಿ ಇದನ್ನು ಪೂರ್ಣಗೊಳಿಸಬೇಕು. ಇದರಲ್ಲಿ ಆಯ್ಕೆಯಾದರೆ 2ನೇ ಸುತ್ತಿಗೆ ಆಯ್ಕೆಯಾಗುತ್ತಾನೆ. ಬಳಿಕ ಬಯೋಮೆಟ್ರಿಕ್ ನೋಂದಣಿ ಮಾಡಿಕೊಳ್ಳುತ್ತೇವೆ’ ಎಂದು ಭೂಸೇನಾ ನೇಮಕಾತಿಯ ಮಂಗಳೂರು ಕೇಂದ್ರದ ನಿರ್ದೇಶಕ ಕರ್ನಲ್ ಎಂ.ಎ. ರಾಜಮನ್ನಾರ ಮಾಹಿತಿ ನೀಡಿದರು.

ADVERTISEMENT

‘ದೈಹಿಕ ಆರೋಗ್ಯ, ಉದ್ದ ಜಿಗಿತ, ಅಡೆತಡೆ ಓಟ, ದೇಹ ಸಮತೋಲನ ಕಾಯ್ದುಕೊಳ್ಳುವುದು ಸೇರಿದಂತೆ ಹಲವು ಹಂತದ ಪರೀಕ್ಷೆಗಳಲ್ಲಿ ಉತ್ತೀರ್ಣರಾದವರಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗುತ್ತದೆ. ನಂತರ ಅಂತಿಮವಾಗಿ ಲಿಖಿತ ಪರೀಕ್ಷೆಗೆ ಆಹ್ವಾನಿಸಲಾಗುತ್ತದೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.