
ಶಿರಹಟ್ಟಿ: ರೇಷ್ಮೆ ಇಲಾಖೆ ಅಧಿಕಾರಿ ಲಂಚ ಪಡೆದು ರೈತರಿಗೆ ಸಹಾಯಧನ ನೀಡುತ್ತಿದ್ದು, ಶಿರಹಟ್ಟಿ ಹಾಗೂ ಲಕ್ಷ್ಮೇಶ್ವರ ತಾಲ್ಲೂಕಿನ ರೈತರಿಗೆ ಮಾಡುತ್ತಿರುವ ಅನ್ಯಾಯ ಖಂಡಿಸಿ ಎರಡು ದಿನಗಳಿಂದ ಸ್ಥಳೀಯ ರೇಷ್ಮೆ ಇಲಾಖೆ ಕಚೇರಿ ಎದುರು ಧರಣಿ ನಡೆಸಿದ ರೈತರು ಮಂಗಳವಾರ ತಹಶೀಲ್ದಾರರಿಗೆ ಮನವಿ ನೀಡಿ ಪ್ರತಿಭಟನೆ ಹಿಂಪಡೆದರು.
ರೈತ ಮುಖಂಡರು ಮಾತನಾಡಿ, ‘ಲಂಚ ಪಡೆದ ಇಲಾಖೆ ಅಧಿಕಾರಿಗಳನ್ನು ಬೇರೆಡೆಗೆ ವರ್ಗಾವಣೆ ಮಾಡಬೇಕು. ಶಿರಹಟ್ಟಿ ಹಾಗೂ ಲಕ್ಷ್ಮೇಶ್ವರ ತಾಲ್ಲೂಕಿಗೆ ತಲಾ ಒಂದು ಡಿ ಗ್ರೂಪ್ ಹೊರಗುತ್ತಿಗೆ ಸಿಬ್ಬಂದಿ, ರೇಷ್ಮೆ ನಾಟಿ ಸಹಾಯಧನ ಬಿಡುಗಡೆ, ರೈತರಿಗೆ ರೇಷ್ಮೆ ಸಲಕರಣೆ ವಿತರಣೆ ಸೇರಿದಂತೆ ವಿವಧ ಬೇಡಿಕೆ ಹಾಗೂ ರೇಷ್ಮೆ ಗೂಡು ಮಾರುಕಟ್ಟೆಯಲ್ಲಿ ಕೋಳಿ ಸಾಗಾಣಿಕೆಗೆ ಅವಕಾಶ ನೀಡಿರುವ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ತಹಶೀಲ್ದಾರ್ ಕೆ. ರಾಘವೇಂದ್ರ ರಾವ್ ಮಾತನಾಡಿ, ‘ರೈತರ ಸಮಸ್ಯೆ ಧರಣಿ ಉದ್ದೇಶವನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗಿದೆ. ರೈತರಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸಿ, ಬೇಡಿಕೆ ಮನವಿ ಸ್ವೀಕರಿಸಲು ಜಿಲ್ಲಾಧಿಕಾರಿ ಸೂಚಿಸಿದ್ದಾರೆ. ಲಂಚ ಪಡೆದ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲು ಸೂಚಿಸಿದ್ದಾರೆ’ ಎಂದು ತಿಳಿಸಿದರು.
ಕೆಪಿಸಿಸಿ ಕಾರ್ಯದರ್ಶಿ ಸುಜಾತಾ ದೊಡ್ಡಮನಿ, ‘ರೈತರ ಬೇಡಿಕೆ ಈಡೇರಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು.
ಸಿಪಿಐ ಬಿ.ವಿ. ನ್ಯಾಮಗೌಡ, ಪಿಎಸ್‌ಐ ಈರಪ್ಪ ರಿತ್ತಿ, ಎ. ಸೂರಪುರ, ಹುಮಾಯೂನ್ ಮಾಗಡಿ, ಎಂ.ಕೆ. ಲಮಾಣಿ, ಮಾಬುಸಾಬ ಲಕ್ಷ್ಮೇಶ್ವರ, ಬಸವರಡ್ಡಿ ಹನುಮರಡ್ಡಿ, ಹನುಮಂತಪ್ಪ ಕೇಳಲರ, ಮಲ್ಲಿಕಾರ್ಜುನ ದೊಡ್ಡಮನಿ, ಸಣ್ಣ ಮುದಕಪ್ಪ ತಿರಕಣ್ಣವರ, ನಿಂಗಪ್ಪ ಮಲ್ಲೂರ, ಚಂದ್ರಶೇಖರ ಬಂಡಿ, ದೇವರಾಜ ರಡ್ಡೆರ, ರವಿ ಚೆನ್ನಪೂರಮಠ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.