
ಶಿರಹಟ್ಟಿ: ಮಣ್ಣು ನಂಬಿ ಬಂಡವಾಳ ಹಾಕಿದರೆ ಭೂತಾಯಿ ಎಂದಿಗೂ ಕೈಬಿಡುವುದಿಲ್ಲ ಎಂಬ ದೃಢ ನಂಬಿಕೆಯಿಂದ ಶ್ರಮವಹಿಸಿ ದುಡಿದು ಯಶಸ್ವಿಯಾದ ಕುರಿಗಾಹಿ ರೈತರಾದ ಮುದಕಪ್ಪ ಘಂಟಿ, ಶಿವಪ್ಪ ಘಂಟಿ, ರೇವಣಸಿದ್ದಪ್ಪ ಘಂಟಿ ರೇಷ್ಮೆ ಬೆಳೆಯಲ್ಲಿ ಅತ್ಯಧಿಕ ಲಾಭ ಗಳಿಸುವುದರೊಂದಿಗೆ ತಾಲ್ಲೂಕಿನಲ್ಲಿಯೇ ಮಾದರಿ ರೈತ ಸಹೋದರರು ಎನಿಸಿಕೊಂಡಿದ್ದಾರೆ.
ತಾಲ್ಲೂಕಿನ ವರವಿ ತಾಂಡಾದ ನಿವಾಸಿಗಳಾದ ಇವರು ವರವಿ ಗ್ರಾಮದ ಸುತ್ತಲೂ 7 ಎಕರೆ ನೀರಾವರಿ ಜಮೀನು ಹೊಂದಿದ್ದು, 5 ಎಕರೆಯಲ್ಲಿ ರೇಷ್ಮೆ ಬೆಳೆಯುತ್ತಿದ್ದಾರೆ. ಅಲ್ಲದೇ 25 ಎಕರೆ ಒಣ ಬೇಸಾಯದ ಜಮೀನು ಹೊಂದಿದ್ದಾರೆ. ತೋಟದಲ್ಲಿ 3 ಕೊಳವೆಬಾವಿ ಇದ್ದು, ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡು ನೀರಿನ ಸದ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ನೀರಿನ ನಿರ್ವಹಣೆಯಿಂದಲೇ ಅವರಿಗೆ ಉತ್ತಮ ಇಳುವರಿ ಮತ್ತು ಆದಾಯ ಬರುತ್ತಿದೆ.
ರೇಷ್ಮೆಯನ್ನು ಮುಖ್ಯ ಬೆಳೆಯನ್ನಾಗಿಸಿಕೊಂಡ ಅವರು, ಇಡೀ ವರ್ಷ ರೇಷ್ಮೆ ಬೆಳೆ ಬರುವ ಹಾಗೆ ಯೋಜನೆ ರೂಪಿಸಿ ಐದು ಎಕರೆಯಲ್ಲಿ ಪ್ರತ್ಯೇಕ ಫ್ಲಾಟ್ ಮಾಡಿಕೊಂಡಿದ್ದು, ವರ್ಷ ಪೂರ್ತಿ ತೋಟದಲ್ಲಿ ರೇಷ್ಮೆ ಗೂಡುಗಳ ಉತ್ಪಾದನೆ ಇರುತ್ತದೆ. ರೇಷ್ಮೆ ಬೆಳೆಗೆ ವರ್ಷಕ್ಕೆ ಸುಮಾರು 20 ಗಾಡಿ ಸಗಣಿ ಗೊಬ್ಬರ ಹಾಕುತ್ತಿದ್ದು, 10 ಗಾಡಿ ಗೊಬ್ಬರ ತಮ್ಮ ಜಾನುವಾರುಗಳಿಂದ ಉತ್ಪಾದನೆಯಾಗುತ್ತಿದೆ. ಉಳಿದ 10 ಗಾಡಿ ಗೊಬ್ಬರವನ್ನು ಇತರೆ ರೈತರಿಂದ ಖರೀದಿ ಮಾಡುತ್ತಿದ್ದಾರೆ. ಸುಮಾರು 5 ವರ್ಷಗಳಿಂದ ರೇಷ್ಮೆ ಕೃಷಿ ಮಾಡಿಕೊಂಡು ಬರುತ್ತಿರುವ ಅವರು ಪ್ರತಿ ಬಾರಿ 2 ಕ್ವಿಂಟಲ್ ಇಳುವರಿ ಪಡೆಯುತ್ತಾರೆ. ಪಟ್ಟಣದಲ್ಲಿ ರೇಷ್ಮೆ ವಹಿವಾಟು ನಡೆಯುವುದರಿಂದ ಹೆಚ್ಚಿನ ಲಾಭ ಕೈಸೇರುತ್ತಿದೆ.
ಹಿಪ್ಪುನೇರಳೆ ಬೆಳೆಗೆ ಒತ್ತು ನೀಡುತ್ತಿರುವ ಅವರು ಹೆಚ್ಚು ಹಸಿರೆಲೆ ಗೊಬ್ಬರ, ತಿಪ್ಪೆ ಗೊಬ್ಬರ ಬಳಸಿ ತೋಟದ ನಿರ್ವಹಣೆ ಮಾಡುತ್ತಿದ್ದಾರೆ. ಹುಳು ಸಾಕಣೆ ಘಟಕದಲ್ಲಿ ಸದಾ ಗಾಳಿಯಾಡುವಂತೆ ವ್ಯವಸ್ಥೆ ಮಾಡಿದ್ದು, ಸೊಳ್ಳೆ ಅಥವಾ ನೊಣ ಸುಳಿಯದ ರೀತಿಯಲ್ಲಿ ಪರದೆ ಕಟ್ಟಿದ್ದಾರೆ. ಘಟಕವನ್ನು ಹೆಚ್ಚು ಸ್ವಚ್ಛವಾಗಿಟ್ಟುಕೊಂಡರೆ ಉತ್ತಮ ಹಾಗೂ ಬೇಗ ಇಳುವರಿ ಪಡೆಯಬಹುದು ಎಂಬುದು ಅವರ ಅನುಭವದ ಮಾತು.
ನಾವು ಅಣ್ಣಾತಮ್ಮಾ ಎಲ್ಲಾರೂ ಕೂಡೆ ಇರ್ತಿವಿ. ನಾವೆಲ್ಲಾರೂ ಹೊಲ್ದಾಗ ಕೆಲ್ಸಾ ಮಾಡೋದ್ರಿಂದ ನಮ್ಗ ಆಳಿಂದ ಅವಶ್ಯಕತಿ ಇಲ್ಲ. ನಮ್ಮ ಕೆಲ್ಸಾ ನಾವಾ ಮಾಡ್ಕೊತಿವ್ರಿ.ಶಿವಪ್ಪ ಘಂಟಿ, ರೈತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.