
ಶಿರಹಟ್ಟಿ: ಹಲವು ಸಂಘಟನೆಗಳ ಹೋರಾಟದ ಫಲವಾಗಿ ತಾಲ್ಲೂಕು ಕೇಂದ್ರಕ್ಕೆ ಸಾರಿಗೆ ಬಸ್ ಡಿಪೋ ದೊರೆತಿದೆ. ಆದರೆ, ಅಧಿಕಾರಿಗಳ ನಿರ್ಲಕ್ಷ್ಯದಿಂದ ಬಸ್ ನಿಲ್ದಾಣ ಮಾತ್ರ ಮೂಲಸೌಕರ್ಯಗಳಿಂದ ವಂಚಿತವಾಗಿದೆ.
ಸ್ಥಳೀಯ ಬಸ್ ನಿಲ್ದಾಣದಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಉತ್ತಮ ಶೌಚಾಲಯವಿಲ್ಲ. ಸ್ವಚ್ಛತೆ ಎನ್ನುವುದು ಇಲ್ಲಿ ಮರೀಚಿಕೆಯಾಗಿದೆ. ಬಸ್‌ಗಾಗಿ ಕಾಯ್ದು ನಿಲ್ದಾಣದಿಂದ ಪ್ರಯಾಣಿಸುವ ಬಸ್‌ಗಳು ಮಾರ್ಗ ಮಧ್ಯದಲ್ಲಿ ಕೆಟ್ಟು ನಿಲ್ಲುತ್ತಿವೆ. ಇದರಿಂದ ಸಮರ್ಪಕ ಸೇವೆ ದೊರೆಯದೇ ಪ್ರಯಾಣಿಕರ ಪರದಾಡುತ್ತಿದ್ದಾರೆ. ಅಲ್ಲದೇ ಬಸ್‌ನಿಲ್ದಾಣದಲ್ಲಿ ಮೂಲಸೌಕರ್ಯವಿಲ್ಲದೇ ಪ್ರಯಾಣಿಕರು, ಸ್ಥಳೀಯ ಜನಪ್ರತಿನಿಧಿಗಳಿಗೆ ಹಾಗೂ ನಿಲ್ದಾಣದ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಗ್ರಾಮೀಣ ಪ್ರದೇಶದಂತಿರುವ ತಾಲ್ಲೂಕು ಕೇಂದ್ರದ ಚಿಕ್ಕ ಬಸ್ ನಿಲ್ದಾಣ ಕೂಡ ಸ್ವಚ್ಛತೆಯ ವಿಚಾರದಲ್ಲಿ ಹಿಂದೆ ಬಿದ್ದಿದೆ. ನಿಯಮಿತವಾಗಿ ಸ್ವಚ್ಛ ಮಾಡದ ಕಾರಣ ಶೌಚಾಲಯಗಳು ಗಬ್ಬು ವಾಸನೆ ಬೀರುತ್ತಿವೆ. ಇದರಿಂದಾಗಿ, ಪ್ರಯಾಣಿಕರು ನಿಲ್ದಾಣದ ಕಾಂಪೌಂಡ್ ಬಳಿ ನಿಂತು ಮೂತ್ರ ವಿಸರ್ಜಿಸುತ್ತಾರೆ. ಇದರಿಂದಾಗಿ ಇಡೀ ಬಸ್ ನಿಲ್ದಾಣ ಹಾಗೂ ಸುತ್ತಲಿನ ಪ್ರದೇಶ ಅಸಹನೀಯವಾಗಿದೆ.
ತಾಲ್ಲೂಕು ಕೇಂದ್ರದ ಬಸ್ ನಿಲ್ದಾಣವಾದರೂ ಬಸ್‌ಗಳು ಯಾವ ಊರಿಗೆ ಹೊರಡುತ್ತವೆ ಎಂಬುದರ ಬಗ್ಗೆ ಸರಿಯಾದ ಮಾಹಿತಿಯ ಫಲಕಗಳಿಲ್ಲ. ಹೀಗಾಗಿ, ಗ್ರಾಮೀಣ ಭಾಗದ ಜನರು ತಮ್ಮ ಊರಿನ ಬಸ್ ಕೇಳಿಯೇ ಹತ್ತಬೇಕು.
ದೂರದ ಊರಿನಿಂದ ಬಂದ ಪ್ರಯಾಣಿಕರಿಗೆ ದಾಹ ನೀಗಿಸಲು ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಇರುವ ನಲ್ಲಿಗಳಿಗೂ ನೀರಿನ ಸಂಪರ್ಕ ನೀಡಿಲ್ಲ. ಇದರಿಂದ ವಿದ್ಯಾರ್ಥಿಗಳು, ವಯೋವೃದ್ದರು ಸೇರಿದಂತೆ ಜನರು ನೀರಿನ ಬಾಟಲ್ ಖರೀದಿಸಿ ಕುಡಿಯುವ ಅನಿವಾರ್ಯತೆ ಎದುರಾಗಿದೆ. ನಿಲ್ದಾಣದಲ್ಲಿ ಬೆರಳೆಣಿಕೆಯಷ್ಟು ವಿದ್ಯುತ್ ದೀಪಗಳನ್ನು ಅಳವಡಿಸಲಾಗಿದ್ದು, ಬಹುತೇಕ ಭಾಗ ಕತ್ತಲೆಯಿಂದ ಕೂಡಿರುತ್ತದೆ. ಸಂಜೆಯಾಗುತ್ತಿದ್ದಂತೆ ಕೆಲವು ಪುಡಾರಿಗಳು ನಿಲ್ದಾಣಕ್ಕೆ ಜಮಾಯಿಸುತ್ತಿದ್ದು, ತಡವಾಗಿ ಬಂದ ವಿದ್ಯಾರ್ಥಿನಿಯರಿಗೆ ಹಾಗೂ ಮಹಿಳೆಯರನ್ನು ಕಾಡುತ್ತಾರೆ. ಇದರಿಂದಾಗಿ ಮಹಿಳೆಯರು ರಾತ್ರಿ ವೇಳೆ ಸುರಕ್ಷತೆ ಇಲ್ಲದೆ ಭಯದಲ್ಲಿಯೇ ಬಸ್ ಕಾಯುವ ಪರಿಸ್ಥಿತಿ ಎದುರಾಗಿದೆ.
ಶಕ್ತಿ ಯೋಜನೆಯಿಂದ ಪ್ರಯಾಣಿಕರ ಸಂಖ್ಯೆ ದುಪ್ಪಟ್ಟಾಗಿದ್ದು, 52 ಆಸನ ಇರುವ ಬಸ್‌ನಲ್ಲಿ 100ಕ್ಕೂ ಹೆಚ್ಚು ಜನ ಪ್ರಯಾಣ ಮಾಡುತ್ತಿರುವುದರಿಂದ ಬಸ್‌ಗಳು ಹಾಳಾಗುತ್ತಿವೆ. ಇನ್ನೊಂದೆಡೆ ಶಾಲಾ ಮಕ್ಕಳಿಗೆ ತೊಂದರೆಯಾಗುತ್ತಿದೆ.
ತಾಲ್ಲೂಕಿನ ಬಹುತೇಕ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ಸಂಪೂರ್ಣ ಹದಗೆಟ್ಟಿದ್ದು, ಇದರಿಂದ ಬಸ್‌ಗಳು ಬೇಗ ಹಾಳಾಗುತ್ತಿವೆ. ರಸ್ತೆ ದುರಸ್ತಿ ಇಲ್ಲವೇ ಹೊಸ ರಸ್ತೆ ನಿರ್ಮಾಣ ಮಾಡಿ ಸುಗಮ ಸಂಚಾರಕ್ಕೆ ಜನಪ್ರತಿನಿಧಿಗಳು ಅವಕಾಶ ಕಲ್ಪಿಸಿ ಕೊಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ನೂತನವಾಗಿ ವಿಭಾಗೀಯ ನಿಯಂತ್ರಣಾಧಿಕಾರಿಯಾಗಿ ನೇಮಕಗೊಂಡಿದ್ದೇನೆ. ಇಲಾಖೆಯಿಂದ ಈಗಾಗಲೇ ಸಿಬ್ಬಂದಿ ನಿಯೋಜನೆ ಮಾಡಲಾಗಿದ್ದು ಜ.31ರೊಳಗೆ ಶಿರಹಟ್ಟಿ ಘಟಕಕ್ಕೆ ಹಾಜರಾಗುತ್ತಾರೆ. ಹಂತ ಹಂತವಾಗಿ ಸಾರಿಗೆ ಸಮಸ್ಯೆ ಬಗೆಹರಿಸಲಾಗುವುದು –ಪರಶುರಾಮ ಗಡಾದ ಸಾರಿಗೆ ವಿಭಾಗೀಯ ನಿಯಂತ್ರಣಾಧಿಕಾರಿ ಗದಗ
ನೂತನವಾಗಿ ವಿಭಾಗೀಯ ನಿಯಂತ್ರಣಾಧಿಕಾರಿಯಾಗಿ ನೇಮಕಗೊಂಡಿದ್ದೇನೆ. ಇಲಾಖೆಯಿಂದ ಈಗಾಗಲೇ ಸಿಬ್ಬಂದಿ ನಿಯೋಜನೆ ಮಾಡಲಾಗಿದ್ದು ಜ.31ರೊಳಗೆ ಶಿರಹಟ್ಟಿ ಘಟಕಕ್ಕೆ ಹಾಜರಾಗುತ್ತಾರೆ. ಹಂತ ಹಂತವಾಗಿ ಸಾರಿಗೆ ಸಮಸ್ಯೆ ಬಗೆಹರಿಸಲಾಗುವುದುಪರಶುರಾಮ ಗಡಾದ, ಸಾರಿಗೆ ವಿಭಾಗೀಯ ನಿಯಂತ್ರಣಾಧಿಕಾರಿ ಗದಗ
ಸಾರಿಗೆ ಸಮಸ್ಯೆ ಕುರಿತು ಹಲವು ಬಾರಿ ವಿಭಾಗಿಯ ನಿಯಂತ್ರಣ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಸರ್ಕಾರ ಶಿರಹಟ್ಟಿ ಘಟಕಕ್ಕೆ ಮಲತಾಯಿ ಧೋರಣೆ ತೋರುತ್ತಿರುವುದು ಸರಿಯಲ್ಲರಫೀಕ್ ಕೆರಿಮನಿ, ಕರವೇ ಜಿಲ್ಲಾ ಮುಖಂಡ
ಶೆಡ್ಯೂಲ್ ಪ್ರಕಾರ ಓಡದ ಬಸ್‌ಗಳು
ಸಾರಿಗೆ ಅಧಿಕಾರಿಗಳ ಮಾಹಿತಿ ಪ್ರಕಾರ 2022ರಲ್ಲಿ ಪ್ರಾರಂಭವಾದ ಸ್ಥಳೀಯ ಬಸ್ ಡಿಪೋಗೆ ಸದ್ಯ 33 ಶೆಡ್ಯೂಲ್‌ಗಳಿದ್ದು 32 ಬಸ್‌ಗಳನ್ನು ಓಡಿಸಲಾಗುತ್ತಿದೆ. 10 ಹೊಸ ಬಿಎಸ್ 6 ಬಸ್‌ಗಳನ್ನು ನೀಡಲಾಗಿದೆ. ಶಿರಹಟ್ಟಿ ಡಿಪೋಗೆ ಬೇಕಾಗುವ ಒಟ್ಟು 108 ಚಾಲನಾ ಸಿಬ್ಬಂದಿ ಪೈಕಿ 95 ಜನ ಸದ್ಯ ಕಾರ್ಯನಿರ್ವಹಿಸುತ್ತಿದ್ದರೂ ಪ್ರಯಾಣಿಕರ ಪರದಾಟ ತಪ್ಪುತ್ತಿಲ್ಲ. ಇಷ್ಟು ಬಸ್‌ಗಳನ್ನು ನೀಡಿದರೂ ಅಧಿಕಾರಿಗಳು ನಿರ್ಲಕ್ಷ್ಯದಿಂದಾಗಿ ಶೆಡ್ಯೂಲ್ ಪ್ರಕಾರ ಬಸ್‌ಗಳು ಓಡುತ್ತಿಲ್ಲ ಎಂದು ಪ್ರಯಾಣಿಕರು ಆರೋಪ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.