ಶಿರಹಟ್ಟಿಯ ಕರ್ತೃ ಫಕೀರೇಶ್ವರರ ಗದ್ದುಗೆ
ಶಿರಹಟ್ಟಿ: ‘ದ್ವೇಷ ಬಿಡು ಪ್ರೀತಿ ಮಾಡು’ ಎಂಬ ವಾಕ್ಯವನ್ನು ಜಗಕ್ಕೆ ಸಾರಿದ, ಫಕೀರ-ಈಶ್ವರ ಎಂಬ ಉಭಯ ಧರ್ಮಿಯರ ನಾಮಾಂಕಿತದಿಂದ ಕರೆಯಿಸಿಕೊಳ್ಳುವ ಇತಿಹಾಸ ಪ್ರಸಿದ್ಧ ಫಕೀರೇಶ್ವರರ ಜಾತ್ರಾ ಮಹೋತ್ಸವಕ್ಕೆ ಸೋಮವಾರ ಅದ್ಧೂರಿ ಚಾಲನೆ ಸಿಗಲಿದೆ.
ಶಿರಹಟ್ಟಿ ಎಂದಾಕ್ಷಣ ಎಲ್ಲರ ಕಣ್ಣು ಮುಂದೆ ಬರುವುದು ಇಲ್ಲಿಯ ಫಕ್ಕೀರೇಶ್ವರ ಸಂಸ್ಥಾನ ಮಠ. ಇದು ಕೋಮು ಸೌಹಾರ್ದ ಪೀಠ, ಜಾತ್ಯಾತೀತ ಮಠವೆಂದು ಪ್ರಸಿದ್ದಿ ಪಡೆದಿದೆ. ಫಕೀರೇಶ್ವರರ ಮಠವು ಸರ್ವಧರ್ಮದ ಸಾಮರಸ್ಯದ ಸಂಕೇತವಾಗಿದೆ.
ಸಮಾಜದಲ್ಲಿನ ಎಲ್ಲಾ ಮತ ಧರ್ಮಗಳ ಜನರ ನಡುವೆ ಶಾಂತಿ, ಸಹಬಾಳ್ವೆ, ಸೌಹಾರ್ದ ಮೂಡಿಸಲು ಬಯಸುತ್ತಿದ್ದ ಫಕ್ಕೀರೇಶ್ವರರು, ತಮ್ಮ ಜೀವಿತದ ಕೊನೆಯ ಕ್ಷಣದಲ್ಲಿ ಡೊಂಬರ ಜಾತಿಯ ಯುವಕನಿಗೆ ಸಂಸ್ಕಾರ ನೀಡಿ, ಧರ್ಮದ ಉತ್ತರಾಧಿಕಾರಿಯಾಗಿ ನೇಮಿಸಿದ ಬಳಿಕ ಸಜೀವ ಸಮಾಧಿ ಹೊಂದಿದರು. ಈ ಮಹಾಮಹಿಮರ ಗದ್ದುಗೆಯ ಮೇಲೆ ಕಟ್ಟಿದ ಭಾವೈಕ್ಯ ಸಾರುವ ಮಠವೇ ಫಕ್ಕೀರೇಶ್ವರ ಮಠ. ಇದರ ವಾಸ್ತುಶಿಲ್ಪ, ಮಠದ ಸಂಪ್ರದಾಯ, ಉಡುಗೆ ತೊಡುಗೆ, ಆಹಾರ ಇತ್ಯಾದಿಗಳಲ್ಲಿ ಅನೇಕ ಧರ್ಮಗಳ ಸಾಮರಸ್ಯ ಅಡಗಿದೆ. ಮಠದ ಉತ್ಸವಗಳಲ್ಲಿ ಹಿಂದೂ ಧರ್ಮಧ ಸಂಕೇತವಾಗಿ ಆನೆ, ಮುಸ್ಲಿಂ ಧರ್ಮದ ಸಂಕೇತವಾಗಿ ಒಂಟೆ ಇರುತ್ತದೆ. ಒಂಟೆಯ ಮೇಲೆ ನಗಾರಿ ಬಾರಿಸುವುದು ಸಂಪ್ರದಾಯ.
ಉಭಯ ಸಂಸ್ಕೃತಿಯ ಪ್ರತಿಪಾಲಕ ಮಠದ ಶ್ರೀಗಳಿಗೆ ಪಟ್ಟಾಭಿಷೇಕ ಸಮಯದಲ್ಲಿ ಹಿಂದೂ ಮುಸ್ಲಿಂ ಧರ್ಮದ ಗುರುಗಳು ದೀಕ್ಷೆ ನೀಡುತ್ತಾರೆ. ಮೊದಲು ಫಕೀರರು ದೀಕ್ಷೆ ಕೊಟ್ಟು ಕಲ್ಮಾ ಬೋಧಿಸುತ್ತಾರೆ. ನಂತರ 41 ದಿನಕ್ಕೆ ಶಿವ ದೀಕ್ಷೆ ನೀಡಲಾಗುತ್ತದೆ. ಅದೇರೀತಿ ಸ್ವಾಮಿಗಳು ಲಿಂಗೈಕ್ಯ ರಾಗುವಾಗ ಉಭಯ ಧರ್ಮಗಳ ಪ್ರಕಾರ ಸಂಸ್ಕಾರ ಮಾಡಲಾಗುತ್ತದೆ. ಮೊದಲು ಮುಸ್ಲಿಂ ಪದ್ಧತಿಗೆ ಅನುಗುಣವಾಗಿ ಶವ ಸಂಸ್ಕಾರ ನಂತರ ಹಿಂದೂ ಧರ್ಮದ ಸಂಪ್ರದಾಯದಂತೆ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಲಾಗುತ್ತದೆ.
ಕರ್ನಾಟಕದ ಮಂಡ್ಯ, ಮೈಸೂರು, ಬೆಂಗಳೂರು, ವಿಜಯಪುರ, ರಾಯಚೂರು, ಕಲಬುರಗಿ, ಚಿತ್ರದುರ್ಗ, ಬೆಳಗಾವಿ, ಧಾರವಾಡ ಇನ್ನೂ ಮುಂತಾದ ಜಿಲ್ಲೆಗಳಲ್ಲಿ ಸುಮಾರು 60ಕ್ಕೂ ಹೆಚ್ಚು ಶಾಖಾಮಠ ಹಾಗೂ ಶಾಖಾ ಮಸೀದಿಗಳನ್ನು ಹೊಂದಿದ ಮಠವು ಧಾರ್ಮಿಕ, ಸಾಹಿತ್ಯಿಕ ಕೆಲಸ ಕಾರ್ಯಗಳನ್ನು ಮಾಡುವ ಮೂಲಕ ಸಮಾಜ ಸೇವೆ ಮಾಡುತ್ತ ಬಂದಿದೆ. ಶಿಕ್ಷಣ ಕ್ಷೇತ್ರದಲ್ಲಿ ಮಠದಿಂದ 5 ಪ್ರೌಢಶಾಲೆಗಳನ್ನು ನಡೆಸಿ ಜ್ಞಾನ ದಾಸೋಹವನ್ನು ಶ್ರೀಗಳು ಮಾಡುತ್ತಿದ್ದಾರೆ.
ಆಗಿಹುಣ್ಣಿಮೆ ದಿನ ರಥೋತ್ಸವ
ಪ್ರತಿ ವರ್ಷದಂತೆ ವೈಶಾಖ ಬುದ್ಧ ಪೂರ್ಣಿಮಾ ಆಗಿ ಹುಣ್ಣಿಮೆ (ಮೇ 12) ಸೋಮವಾರ ದಿನದಂದು ರಥೋತ್ಸವ, ಮೇ 13ರಂದು ಕಡುಬಿನ ಕಾಳಗ ಉತ್ಸವ ನೆರವೇರಲಿದೆ. ಮಠದ ಸಂಪ್ರದಾಯದಂತೆ ಕಾರ್ಯಕ್ರಮಗಳು ಜರುಗಲಿವೆ.
‘ಸರ್ವಂ ಲಿಂಗಮಯ ಇದಂ ಜಗತ್’ ಎಂದು ಅರಿತಿರುವ ಶ್ರೀಗಳು, ಸಮಾಜದ ಕ್ಷೇಮಾಭಿವೃದ್ಧಿಗೆ ಭದ್ರ ಬುನಾದಿ ಧರ್ಮ ಎಂದು ಭಾವಿಸಿ, ಮಠವನ್ನು ಧರ್ಮದ ನೆಲೆಯನ್ನಾಗಿ ಮಾಡುವ ಹಿನ್ನೆಲೆಯಲ್ಲಿ ಮಠವನ್ನು ಅಭಿವೃದ್ಧಿ ಪಡಿಸಿದ್ದಾರೆ. ಅಭಿವೃದ್ಧಿ ಪಡಿಸುತ್ತಲಿದ್ದಾರೆ. ಮಠದಲ್ಲಿ ನಡೆಯುವ ಎಲ್ಲ ಸಮಾರಂಭಗಳಿಗೆ ನಾಡಿನ ಹೆಸರಾಂತ ಪೂಜ್ಯರನ್ನು, ಸಾಹಿತಿಗಳನ್ನು, ಕಲಾವಿದರನ್ನು ಬರಮಾಡಿಕೊಂಡು, ಅವರನ್ನು ಪ್ರೋತ್ಸಾಹಿಸುತ್ತಾ ಬಂದಿದ್ದಾರೆ. ಪ್ರತಿ ಅಮಾವಾಸ್ಯೆಯ ದಿನ ಶ್ರೀಮಠದಲ್ಲಿ ಶಿವಾನುಭವ ಕಾರ್ಯಕ್ರಮ ನಡೆಸಿ ಜ್ಞಾನದ ತಿರುಳನ್ನು, ಧರ್ಮದ ಮರ್ಮವನ್ನು ಜನತೆಗೆ ತಿಳಿಸುವ ಮೂಲಕ ಸಮಾಜಸೇವೆ ಮಾಡುತ್ತಿದ್ದಾರೆ.
ಫಕೀರೇಶ್ವರರ ವಾಣಿಯಂತೆ ಈಗೀನ 13ನೇ ಪೀಠಾಧಿಪತಿ ಫಕೀರ ಸಿದ್ಧರಾಮ ಶ್ರೀಗಳು ದಿಂಗಾಲೇಶ್ವರ ಶ್ರೀಗಳನ್ನು ಆರೀಮಠದ ಉತ್ತರಾಧಿಕಾರಿಯನ್ನಾಗಿ ನೇಮಿಸಿದ್ದಾರೆ. ದಿಂಗಾಲೇಶ್ವರ ಶ್ರೀಗಳು ಸಹ ಸದಾ ಕ್ರಿಯಾಶೀಲರಾಗಿ ಮಠದ ಅಭಿವೃದ್ದಿಯಲ್ಲಿ ತೊಡಗಿಸಿಕೊಂಡಿದ್ದಾರೆ.
ಶ್ರೀಗಳ ಸಾಹಿತ್ಯ ಸ್ವತಃ ಸಾಹಿತಿಯಾಗಿರುವ ಸಿದ್ಧರಾಮ ಶ್ರೀಗಳು ಹಲವಾರು ಗ್ರಂಥಗಳನ್ನು ಬರೆದು ಸಮಾಜಕ್ಕೆ ಕೊಟ್ಟಿದಾರೆ. ಅವುಗಳಲ್ಲಿ ‘ಗುಡ್ಡಾಪುರದ ದಾನಮ್ಮದೇವಿ’, ‘ಸದಾಚಾರ’, ‘ಸಕಲೇಶ ಮಾದರಸ’, ‘ಸಂಶಿ ಅಜ್ಜಾವರು’, ‘ಅಬಾನಾ’ ಎಂಬ ಸಂಪಾದನಾ ಕೃತಿಗಳು ಹುಬ್ಬಳ್ಳಿಯ ಮೂರು ಸಾವಿರ ಮಠದಿಂದ ಪ್ರಕಟಗೊಂಡಿವೆ.
1987ರ ಫೆ.18ರಂದು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಪ್ರಸಾರಾಂಗ ವಿಭಾಗದವರು 375ನೇ ಉಪನ್ಯಾಸ ಶಿಬಿರ ನಡೆಸಿದ್ದರು. 1987ರ ಡಿ.19ರಂದು ಶಿರಹಟ್ಟಿ ಮಠದಲ್ಲಿ ಪೂಜ್ಯರ ‘ಕರ್ತೃ ಶ್ರೀ ಜಗದ್ಗುರು ಫಕ್ಕೀರೇಶ್ವರರು’ ಎನ್ನುವ ವಿಷಯದ ಮೇಲೆ ಉಪನ್ಯಾಸ ಏರ್ಪಡಿಸಿರುವುದನ್ನು ಇಲ್ಲಿ ಸ್ಮರಿಸಬಹುದು.
ಉಭಯ ಧರ್ಮಪಾಲಕ
ಈಶ್ವರ-ಅಲ್ಲಾಹುವಿನ ಸ್ವರೂಪಿಯಾದ ಫಕ್ಕೀರೇಶ್ವರರು 16ನೇ ಶತಮಾನದಲ್ಲಿ ವಿಜಯಪುರ ಶಿವಯ್ಯ-ಗೌರಮ್ಮ ಎಂಬ ವೀರಶೈವ ದಂಪತಿಯ ಮಗನಾಗಿ ಜನಿಸಿದರು. ಚನ್ನವೀರ ಎಂಬ ಹೆಸರು ಹೊಂದಿದ ವಿಜಯಪುರದ ಮುಸ್ಲಿಂ ತತ್ವಜ್ಞಾನಿ ಖಾಜಾ ಅಮೀನುದ್ದೀನ್ ಅವರಿಂದ ಧರ್ಮ ಸಂಸ್ಕಾರ ಪಡೆದು ಫಕ್ಕೀರೇಶ್ವರರಾದರು.
1610ರಲ್ಲಿ ಶಿರಹಟ್ಟಿಯ ಉತ್ತರಕ್ಕಿರುವ ಕಾಡಿನಲ್ಲಿ ಫಕ್ಕೀರೇಶ್ವರರು ವಾಸವಿದ್ದು, ಬಹು ಭಾಷಾ ವಿಶಾರದರಾಗಿ ಅವರವರ ಧರ್ಮ ಪದ್ಧತಿಯಂತೆ ಆಚಾರ ವಿಚಾರಗಳನ್ನು ಬೋಧಿಸಿದವರು.
16ನೇ ಶತಮಾನದಲ್ಲಿ ಫಕ್ಕೀರೇಶ್ವರ ಹಿಂದೂ–ಮುಸ್ಲಿಂ ಉಭಯ ಧರ್ಮದವರಿಗೆ ಭಾವೈಕ್ಯ, ಸಹಬಾಳ್ವೆಯ ಕಣ್ಣು ತೆರೆಸಿ, ಹರಿಯ ಭಕ್ತರಿಗೆ ಹರಿಯಾಗಿ, ಹರನ ಭಕ್ತರಿಗೆ ಹರನಾಗಿ, ಹಜರತನ ಭಕ್ತರಿಗೆ ಹಜರತನಾಗಿ, ದೇಶದ ಉದ್ದಗಲಕ್ಕೂ ಸಂಚರಿಸಿ ಹೆಸರುವಾಸಿಯಾದವರು. ಫಕ್ಕೀರೇಶ್ವರರು ವೈರಾಗ್ಯಶಾಲಿಗಳು, ಪವಾಡ ಪುರುಷರಾಗಿ ಸರ್ವಧರ್ಮ ಸಮನ್ವರಾಗಿ ಹಿಂದೂ–ಮುಸ್ಲಿಮರಲ್ಲಿ ಭಾವೈಕ್ಯತೆ ಬೆಳೆಸಿದ ಮಹಾನ್ ಸತ್ಪುರುಷ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.