ಶಿರಹಟ್ಟಿ ತಾಲ್ಲೂಕಿನ ವರವಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಶೌಚಾಲಯ ಕಟ್ಟದ ದುರವಸ್ಥೆ
ಶಿರಹಟ್ಟಿ: ತಾಲ್ಲೂಕಿನ ಬಹುತೇಕ ಸರ್ಕಾರಿ ಶಾಲೆಗಳಲ್ಲಿ ಶೌಚಾಲಯಗಳು ಹೆಸರಿಗಷ್ಟೇ ಎಂಬಂತೆ ಇದ್ದು, ವಿದ್ಯಾರ್ಥಿಗಳು ಮೂತ್ರ ವಿಸರ್ಜನೆ ಹಾಗೂ ಶೌಚಕ್ಕೆ ಹೋಗಲು ಪರದಾಡುವ ಪರಿಸ್ಥಿತಿ ಇದೆ.
ಕೆಲವು ಶಾಲೆಗಳಲ್ಲಿ ಹೆಸರಿಗಷ್ಟೇ ಶೌಚಾಲಯಗಳಿದ್ದು, ವಿದ್ಯಾರ್ಥಿ– ವಿದ್ಯಾರ್ಥಿನಿಯರು ಶೌಚಕ್ಕೆ ಬಯಲನ್ನೇ ಆಶ್ರಯಿಸುವ ಅನಿವಾರ್ಯತೆ ಇದೆ. ಕೆಲವು ಶಾಲೆಗಳಲ್ಲಿ ಶೌಚಾಲಗಳಿದ್ದರೂ ಅವುಗಳ ದುರಸ್ತಿ ಹಾಗೂ ಸ್ವಚ್ಛತೆಗೆ ಶಾಲೆ ಹಾಗೂ ಶಿಕ್ಷಣ ಇಲಾಖೆ ತಲೆಕೆಡಿಸಿಕೊಳ್ಳದೆ ಇರುವುದು ವಿಪರ್ಯಾಸದ ಸಂಗತಿ ಎಂದು ಪೋಷಕರು
ಕಿಡಿಕಾರಿದ್ದಾರೆ.
ಪಟ್ಟಣ ಸೇರಿದಂತೆ ತಾಲ್ಲೂಕಿನಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳು 30, ಹಿರಿಯ ಪ್ರಾಥಮಿಕ ಶಾಲೆಗಳು 36, ಪ್ರೌಢಶಾಲೆಗಳು 11 ಇದ್ದರೆ, ಅನುದಾನಿತ ಕಿರಿಯ ಪ್ರಾಥಮಿಕ 1, ಹಿರಿಯ ಪ್ರಾಥಮಿಕ 1, ಪ್ರೌಢಶಾಲೆಗಳು 8 ಇವೆ. ನವೇಭಾವನೂರಿನ ಆಶ್ರಮ ಶಾಲೆ ಹಾಗೂ ವರವಿ ಮತ್ತು ವಡವಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳು ಸೇರಿದಂತೆ ಒಟ್ಟು 90 ಶಾಲೆಗಳಲ್ಲಿ ಸಾವಿರಾರು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ವಸತಿ ಶಾಲೆಗಳನ್ನು ಹೊರತುಪಡಿಸಿ ಬಹುತೇಕ ಶಾಲೆಗಳಲ್ಲಿ ವಿದ್ಯಾರ್ಥಿಗಳು ಶೌಚಾಲಯ ಸಮಸ್ಯೆ ಎದುರಿಸುತ್ತಿದ್ದಾರೆ.
ತಾಲ್ಲೂಕು ವ್ಯಾಪ್ತಿಯ ಕೆಲವು ಶಾಲೆಗಳಲ್ಲಿನ ಶೌಚಾಲಯಗಳ ಕಟ್ಟಡಗಳು ಶಿಥಿಲಾವಸ್ಥೆ ತಲುಪಿ ದುರಸ್ತಿಗೆ ಬಂದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಶೌಚಾಲಯ ಪಾಳು ಬಿದ್ದು, ವಿದ್ಯಾರ್ಥಿಗಳು ಶೌಚಕ್ಕೆ ಬಯಲನ್ನೇ ಆಶ್ರಯಿಸುತ್ತಿದ್ದಾರೆ. ಶೌಚಾಲಯ ಕಟ್ಟಡಗಳ ಬಾಗಿಲು ಮುರಿದು ಗೋಡೆಗಳು ಸಹ ಬಿದ್ದಿವೆ. ಕೆಲವು ಶಾಲೆಗಳಲ್ಲಿ ಶೌಚಾಲಯಗಳ ಕಟ್ಟಡಗಳು ಸಮರ್ಪಕವಾಗಿದ್ದರೂ ಅವುಗಳಿಗೆ ನೀರು, ವಿದ್ಯುತ್ ಮೊದಲಾದ ಮೂಲಸೌಲಭ್ಯಗಳು ಇಲ್ಲದಂತಾಗಿದೆ. ಇದರಿಂದಾಗಿ ಅಂತಹ ಶಾಲೆಗಳಲ್ಲಿ ಶೌಚಾಲಯಗಳು ಇದ್ದೂ ಇಲ್ಲದಂತಾಗಿವೆ. ತಾಲ್ಲೂಕಿನ ವರವಿ ಗ್ರಾಮದ ಪ್ರಾಥಮಿಕ ಶಾಲೆ ಇದಕ್ಕೆ
ಹೊರತಾಗಿಲ್ಲ.
ಈಗಾಗಲೇ ನಿರ್ಮಾಣಗೊಂಡ ಶೌಚಾಯಗಳಲ್ಲಿ ಸ್ವಚ್ಛತೆಯ ಕೊರತೆ ಎದ್ದು ಕಾಣುತ್ತಿದೆ. ನಿಯಮಿತವಾಗಿ ನಿರ್ವಹಣೆ ಮಾಡದೆ ಇರುವುದರಿಂದ ಗಬ್ಬುವಾಸನೆ ಬರುತ್ತಿದ್ದು, ವಿದ್ಯಾರ್ಥಿಗಳು ಮೂಗು ಮುಚ್ಚಿಕೊಂಡು ಶೌಚಕ್ಕೆ ಹೋಗುವ ಅನಿವಾರ್ಯತೆ ಬಂದೊದಗಿದೆ. ಇದರಿಂದಾಗಿ ವಿದ್ಯಾರ್ಥಿಗಳು ಬಯಲು ಶೌಚದತ್ತ ವಾಲುತ್ತಿದ್ದು, ಪರಿಸರ ಮಾಲಿನ್ಯಕ್ಕೆ ನಾಂದಿ ಹಾಡಿದಂತಾಗುತ್ತಿದೆ. ಪಟ್ಟಣದ ಉರ್ದು ಶಾಲೆ, ಪ್ರಾಥಮಿಕ ಗಂಡು ಮಕ್ಕಳ ಶಾಲೆ, ತಾಲ್ಲೂಕಿನ ಮಾಚೇನಹಳ್ಳಿ, ಮಜ್ಜೂರ ಸೇರಿದಂತೆ ಬಹುತೇಕ ಶಾಲೆಗಳ ಶೌಚಾಲಯಗಳು ಗಬ್ಬು ನಾರುತ್ತಿವೆ. ಸಮಯಕ್ಕನುಸಾರವಾಗಿ ಶೌಚಾಲಯ ಸ್ವಚ್ಛಗೊಳಿಸಿ ಮಕ್ಕಳ ಆರೋಗ್ಯದ ಕಡೆ ಕಾಳಜಿ ವಹಿಸಬೇಕು ಎಂಬುದು ಪೋಷಕರ
ಆಗ್ರಹವಾಗಿದೆ.
ಅನುದಾನದ ಕೊರತೆ
ಶೌಚಾಲಯ ದುರಸ್ತಿ ಅಥವಾ ನೂತನ ಶೌಚಾಲಯ ಕಟ್ಟಡ ನಿರ್ಮಾಣ ಮಾಡಲು ಒಂಬತ್ತಕ್ಕಿಂತ ಹೆಚ್ಚಿನ ಶಾಲೆಗಳಲ್ಲಿ ಅನುದಾನದ ಕೊರತೆ ಇದೆ. ದುರಸ್ತಿಗೆ ದೊಡ್ಡ ಮೊತ್ತದ ಹಣ ಬೇಕಾಗಿರುವುದರಿಂದ ಇದುವರೆಗೂ ಶೌಚಾಲಯ ನಿರ್ಮಾಣವಾಗುತ್ತಿಲ್ಲ.
ಈಗಾಗಲೇ ಸುಮಾರು 25 ಶಾಲೆಗಳಲ್ಲಿ ಶೌಚಾಲಯ ಕಟ್ಟಡ ನಿರ್ಮಾಣವಾಗಿದ್ದು, ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಶೌಚಾಲಯಗಳ ಚಿಕ್ಕ ಪ್ರಮಾಣದ ದುರಸ್ತಿ ಇದ್ದರೆ ಶಾಲಾ ಎಸ್‌ಡಿಎಂಸಿ ಅನುದಾನ ಇಲ್ಲವೇ ಇತರೆ ಅನುದಾನವನ್ನು ಬಳಸಲು ಬಿಇಒ ಎಲ್ಲಾ ಶಾಲೆಗಳ ಮುಖ್ಯೋಪಾಧ್ಯಾಯರಿಗೆ ಸೂಚಿಸಿದ್ದಾರೆ.
ತಾಲ್ಲೂಕಿನ ಶಾಲಾ ಶೌಚಾಲಯ ದುರಸ್ತಿಗೊಳಿಸಲು ಲಭ್ಯವಿರುವ ಅನುದಾನ ಬಳಕೆ ಮಾಡಲು ಸೂಚಿಸಲಾಗಿದೆ. ಕೆಲವು ಹೊರತುಪಡಿಸಿ ಉಳಿದೆಲ್ಲಾ ಶೌಚಾಲಯಗಳ ದುರಸ್ತಿ ಕಾಮಗಾರಿ ಪ್ರಗತಿಯಲ್ಲಿದೆಎಚ್.ನಾಣಕಿ ನಾಯ್ಕ, ಬಿಇಒ
ನಮ್ಮ ಸಾಲ್ಯಾಗ ಪಾಯಖಾನಿ ಇಲ್ದ ಬಾಳ ದಿನಾ ಆತ್ರೀ.. ನಾವು ಸುಸ್ಸು ಮಾಡಾಕಾ ಸಾಲಿ ಕಂಪೌಂಡ ಪಕ್ಕದ ಹೊಲಕ್ಕ ಹೊಕ್ಕವ್ರೀ...ಮೌನೇಶ ಬಿ., ಶಾಲಾ ವಿದ್ಯಾರ್ಥಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.