
ಶಿರಹಟ್ಟಿ (ಗದಗ ಜಿಲ್ಲೆ): ‘ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ ಕ್ರೂರಿ ಮನುಷ್ಯ. ತನ್ನದೇ ಸಮಾಜದ ಸ್ವಾಮೀಜಿಗೆ ನೋವು ಕೊಟ್ಟ. ನಾನು ಪಕ್ಷದ ಕಾರ್ಯಕರ್ತರೊಬ್ಬರ ಬಳಿ ಮಾತನಾಡಿದ ಆಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಬಳಿಕ ಜೀವಬೆದರಿಕೆ ಕರೆಗಳು ಬರುತ್ತಿವೆ’ ಎಂದು ಆದರಹಳ್ಳಿ ಕುಮಾರ ಮಹಾರಾಜ ಸ್ವಾಮೀಜಿ ಹೇಳಿದರು.
‘ಭಾನುವಾರ ರಾತ್ರಿ 1 ಗಂಟೆ ಸುಮಾರಿಗೆ ಕರೆ ಮಾಡಿ ಬೆದರಿಕೆ ಹಾಕಿದ್ದಾರೆ. ಅವರು ಯಾರು, ಎಲ್ಲಿಯವರು ಎಂಬುದು ಗೊತ್ತಿಲ್ಲ’ ಎಂದು ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ಶಿರಹಟ್ಟಿ ಕ್ಷೇತ್ರ ಬಂಜಾರ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷರನ್ನು ಬದಲಾವಣೆ ಮಾಡಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ಶಾಸಕ ಚಂದ್ರು ಲಮಾಣಿ ನನ್ನ ವಿರುದ್ಧ ಸಿಟ್ಟಿಗೆದ್ದಿದ್ದ. ಆಗಿನಿಂದ ತೊಂದರೆ ಕೊಡುತ್ತ ಬಂದಿದ್ದಾನೆ’ ಎಂದು ಆರೋಪ ಮಾಡಿದರು.
‘ಸೋನು ಲಮಾಣಿ ಎಂಬ ವ್ಯಕ್ತಿ ನನಗೆ ಕರೆ ಮಾಡಿ, ‘ಶಾಸಕರ ಜತೆಗೆ ನೀವು ಒಂದಾಗಬೇಕು. ಇಲ್ಲವಾದರೆ, ಸಮಸ್ಯೆ ಆಗುತ್ತದೆ’ ಎಂದು ಬೆದರಿಕೆ ಹಾಕಿದ್ದ. ನಾನು ರೈತರ ಜತೆಗೆ ಹೋರಾಟಕ್ಕೆ ಕುಳಿತಾಗಲೂ ಶಾಸಕ ಬೆದರಿಕೆ ಕರೆ ಮಾಡಿಸಿದ್ದ. ಸಮಸ್ಯೆಗಳನ್ನು ಮಾಡಿಸಿದ್ದ. ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಆ ಸಿಟ್ಟಿನಿಂದಲೇ ಮಾತನಾಡಿದ್ದೆ. ಆದರೆ, ಲೋಕಾ ದಾಳಿಗೂ ನನಗೂ ಸಂಬಂಧ ಇಲ್ಲ’ ಎಂದು ಹೇಳಿದರು.
‘ಶಾಸಕ ಚಂದ್ರು ಲಮಾಣಿ ಸ್ವಾಮೀಜಿ, ಅಧಿಕಾರಿಗಳು, ರೈತರು ಎಲ್ಲರನ್ನೂ ಗೋಳು ಹೊಯ್ದುಕೊಳ್ಳುವ ಕ್ರೂರಿ ಮನುಷ್ಯ. ಮುಂದೆ ಸಮಾಜಕ್ಕೆ ಕಪ್ಪುಚುಕ್ಕೆ ಆಗಲಿದ್ದಾನೆ ಎಂಬ ಆಕ್ರೋಶದಲ್ಲಿ ಆ ರೀತಿ ಮಾತನಾಡಿದ್ದು ನಿಜ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.