
ಶಿರಹಟ್ಟಿ (ಗದಗ ಜಿಲ್ಲೆ): ಶಿರಹಟ್ಟಿ ಶಾಸಕ ಡಾ.ಚಂದ್ರು ಲಮಾಣಿ ಮತ್ತು ಅವರ ಮೂವರು ಬೆಂಬಲಿಗರು ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ಆರೋಪಿಸಿ ತಾಲ್ಲೂಕಿನ ಚನ್ನಪಟ್ಟಣ ಗ್ರಾಮದ ನಿವಾಸಿ ನಾಮದೇವ ಮಾಂಡ್ರೆ ಶಿರಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
‘ಡಿ.7ರಂದು ದೂರವಾಣಿ ಮೂಲಕ ಕರೆ ಮಾಡಿದ್ದ ಶಾಸಕರು, ‘ನಿನ್ನ ಮೇಲೆ ಜಾತಿ ನಿಂದನೆ ಪ್ರಕರಣ ದಾಖಲು ಮಾಡುತ್ತೇನೆ’ ಎಂದು ಹೆದರಿಸಿದ್ದಾರೆ. ತಪ್ಪಾಗಿದೆ ಎಂದು ಕೇಳಿಕೊಂಡರೂ ಕೇಳದೆ; ಪದೇ ಪದೇ ಕರೆ ಮಾಡಿ ಹೆದರಿಸುತ್ತಿದ್ದಾರೆ. ಬೆಂಬಲಿಗರಾದ ರಾಜು ಖಾನಪ್ಪನವರ, ಸಂತೋಷ ಕುರಿ, ಫಕೀರೇಶ ರಟ್ಟಿಹಳ್ಳಿ ಅವರಿಂದ ನನ್ನ ಜೀವಕ್ಕೆ ಅಪಾಯವಿದೆ’ ಎಂದು ನಾಮದೇವ ಮಾಂಡ್ರೆ ದೂರು ನೀಡಿದ್ದಾರೆ.
ಪ್ರತಿದೂರು ದಾಖಲು: ಇದೇ ವಿಷಯಕ್ಕೆ ಸಂಬಂಧಿಸಿದಂತೆ ಜಾನು ಗುರಪ್ಪ ಲಮಾಣಿ ಎಂಬುವರು ನಾಮದೇವ ಮಾಂಡ್ರೆ ವಿರುದ್ಧ ಶಿರಹಟ್ಟಿ ಪೊಲೀಸ್ ಠಾಣೆಯಲ್ಲಿ ಜಾತಿ ನಿಂದನೆ ಪ್ರಕರಣ ದಾಖಲಿಸಿದ್ದಾರೆ.
‘ಶಿರಹಟ್ಟಿ ಪ್ರವಾಸಿ ಮಂದಿರದಲ್ಲಿ ತಾಲ್ಲೂಕಿನ ಅಭಿವೃದ್ಧಿ ಬಗ್ಗೆ ಸ್ನೇಹಿತರೊಂದಿಗೆ ಚರ್ಚೆ ಮಾಡುತ್ತಿದ್ದಾಗ ನಾಮದೇವ ಮಾಂಡ್ರೆ ಲಮಾಣಿ ಸಮಾಜದ ಬಗ್ಗೆ ಕೀಳಾಗಿ ಮಾತನಾಡಿ, ಹಲ್ಲೆ ನಡೆಸಿದ್ದಾರೆ’ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.