ADVERTISEMENT

ಶಿರಹಟ್ಟಿ | ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ– ಇಓ ದೊಡ್ಡಮನಿ

ಪ್ರಗತಿ ಪರಿಶೀಲನಾ ಸಭೆಗೆ ಅಧಿಕಾರಿಗಳ ಗೈರು : ಇಓ ದೊಡ್ಡಮನಿ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 31 ಜನವರಿ 2026, 8:18 IST
Last Updated 31 ಜನವರಿ 2026, 8:18 IST
ಶಿರಹಟ್ಟಿಯ ತಾಲ್ಲೂಕು ಪಂಚಾಯಿತಿ ಸಭಾ ಭವನದಲ್ಲಿ ನಡೆದ ತಾಲ್ಲೂಕು ಮಟ್ಟದ ವಿಶೇಷ ಘಟಕ ಯೋಜನೆ ಹಾಗೂ ಗಿರಿಜನ ಉಪಯೋಜನೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ರಾಮಣ್ಣ ದೊಡ್ಡಮನಿ ಮಾತನಾಡಿದರು
ಶಿರಹಟ್ಟಿಯ ತಾಲ್ಲೂಕು ಪಂಚಾಯಿತಿ ಸಭಾ ಭವನದಲ್ಲಿ ನಡೆದ ತಾಲ್ಲೂಕು ಮಟ್ಟದ ವಿಶೇಷ ಘಟಕ ಯೋಜನೆ ಹಾಗೂ ಗಿರಿಜನ ಉಪಯೋಜನೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ರಾಮಣ್ಣ ದೊಡ್ಡಮನಿ ಮಾತನಾಡಿದರು   

ಶಿರಹಟ್ಟಿ: ಸ್ಥಳೀಯ ತಾಲ್ಲೂಕು ಪಂಚಾಯಿತಿ ಸಭಾ ಭವನದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ತಾಲ್ಲೂಕು ಮಟ್ಟದ ವಿಶೇಷ ಘಟಕ ಯೋಜನೆ (ಎಸ್‌ಸಿಪಿ) ಹಾಗೂ ಗಿರಿಜನ ಉಪಯೋಜನೆ (ಟಿಎಸ್‌ಪಿ) ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳ ಗೈರು ಹಾಜರಾತಿಗೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ರಾಮಣ್ಣ ದೊಡ್ಡಮನಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ತಾಲೂಕು ಮಟ್ಟದ ಅತ್ಯಂತ ಪ್ರಮುಖವಾದ ಈ ಪ್ರಗತಿ ಪರಿಶೀಲನಾ ಸಭೆಗೆ ಒಟ್ಟು 28 ಇಲಾಖೆಗಳ ಅಧಿಕಾರಿಗಳು ಹಾಜರಾಗಬೇಕಿತ್ತು. ಆದರೆ, ಕೇವಲ 13 ಅಧಿಕಾರಿಗಳು ಮಾತ್ರ ಉಪಸ್ಥಿತರಿದ್ದರು. ವಿಶೇಷವಾಗಿ ವಲಯ ಅರಣ್ಯ ಇಲಾಖೆ, ಆರೋಗ್ಯ ಇಲಾಖೆ, ಕಾರ್ಮಿಕ ಇಲಾಖೆಯ ಹಾಗೂ ಕೆಲವು ಇಲಾಖೆಯ ಮುಖ್ಯಸ್ಥರು ಬಾರದೇ ತಮ್ಮ ಪರವಾಗಿ ಕೆಳಹಂತದ ಸಿಬ್ಬಂದಿಯನ್ನು ಸಭೆಗೆ ಕಳುಹಿಸಿಕೊಟ್ಟಿರುವುದು ಕಂಡುಬಂದಿತು. ಈ ಬಗ್ಗೆ ಕಿಡಿಕಾರಿದ ಇಒ ರಾಮಣ್ಣ ದೊಡ್ಡಮನಿ ಮುಂದಿನ ದಿನಗಳಲ್ಲಿ ವ್ಯವಸ್ಥೆ ಸುಧಾರಿಸಬೇಕು. ಒಂದು ವೇಳೆ ಹಿರಿಯ ಅಧಿಕಾರಿಗಳು ಸಭೆಗೆ ಗೈರಾದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಶಿಶು ಅಭಿವೃದ್ಧಿ ಇಲಾಖೆ: ತಾಲೂಕಿನ 21 ಎಸ್‌ಸಿ ಹಾಗೂ 01 ಎಸ್‌ಟಿ ಕೇಂದ್ರಗಳ ಒಟ್ಟು 3081 ಫಲಾನುಭವಿಗಳಿಗೆ ಪೂರಕ ಪೌಷ್ಟಿಕ ಆಹಾರ ವಿತರಿಸಲಾಗಿದೆ. ಯೋಜನೆಗೆ ಒಟ್ಟು ₹ 31.25ಲಕ್ಷ ಅನುದಾನ ಬಿಡುಗಡೆಯಾಗಿದ್ದು, ಸಂಪೂರ್ಣ ಗುರಿ ಸಾಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.

ADVERTISEMENT

ಕೃಷಿ ಇಲಾಖೆ: ರಾಷ್ಟ್ರೀಯ ಆಹಾರ ಭದ್ರತಾ ಅಭಿಯಾನ, ಕೃಷಿ ಯಂತ್ರೀಕರಣ ಉಪ ಅಭಿಯಾನ ಹಾಗೂ ಸೂಕ್ಷ್ಮ ನೀರಾವರಿ ಕಾಮಗಾರಿಗಳಿಗೆ ಬಿಡುಗಡೆಯಾದ ಅನುದಾನವನ್ನು ಶೇ 100 ರಷ್ಟು ಬಳಕೆ ಮಾಡಲಾಗಿದೆ. ಆದರೆ, ಬೀಜ ಪೂರೈಕೆ ಹಾಗೂ ಇತರ ಹೂಡುವಳಿಗಳಿಗೆ ಇನ್ನೂ ಅನುದಾನ ಬಿಡುಗಡೆಯಾಗಬೇಕಿದೆ ಎಂದು ಕೃಷಿ ಇಲಾಖೆಯ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

ತೋಟಗಾರಿಕೆ ಇಲಾಖೆ: ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ, ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ, ರಾಷ್ಟ್ರೀಯ ತೋಟಗಾರಿಕೆ ಮಿಷನ್ ಸೇರಿದಂತೆ ವಿವಿಧ ಯೋಜನೆಗಳಡಿ ಬಿಡುಗಡೆಯಾದ ಅನುದಾನವನ್ನು ಸಂಪೂರ್ಣವಾಗಿ ಸದ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಹಿರಿಯ ಸಹಾಯಕ ತೋಟಗಾರಿಕೆ ಅಧಿಕಾರಿಗಳು ತಿಳಿಸಿದರು.

ಅರಣ್ಯ ಇಲಾಖೆ: ಪ್ರಾದೇಶಿಕ ಅರಣ್ಯ ಇಲಾಖೆಯಿಂದ 2020-21ನೇ ಸಾಲಿನಲ್ಲಿ ಗಿರಿಜನರಿಗೆ ವಿತರಿಸಲಾದ 50 ಗ್ಯಾಸ್ ಸಿಲಿಂಡರ್‌ಗಳ ಮರುಪೂರಣಕ್ಕಾಗಿ ₹42,800 ಅನುದಾನ ಒದಗಿಸಲಾಗಿದೆ ಎಂದು ಅಧಿಕಾರಿಗಳು ವಿವರಿಸಿದರು.

ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ: ಜಲಜೀವನ್ ಮಿಷನ್ ಯೋಜನೆಯಡಿ ಶಿರಹಟ್ಟಿ ಮತ್ತು ಲಕ್ಷ್ಮೇಶ್ವರ ತಾಲೂಕಿನ ವಿವಿಧ ಗ್ರಾಮಗಳ ಮನೆಗಳಿಗೆ ನಳ ಸಂಪರ್ಕ ಕಲ್ಪಿಸುವಲ್ಲಿ ಶೇ. 100ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ತಾಲೂಕು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಪ್ರಗತಿ ಪರಿಶೀಲನಾ ಸಭೆಯ ಕಾರ್ಯದರ್ಶಿ ಗೋಪಾಲ ಲಮಾಣಿ, ತಾಲೂಕಾ ಮಟ್ಟದ ಅನುಷ್ಠಾನಾಧಿಕಾರಿ ಉಪಸ್ಥಿತಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.