
ಶಿರಹಟ್ಟಿ: ಕೃಷಿ ಪ್ರಧಾನವಾಗಿರುವ ಶಿರಹಟ್ಟಿ ತಾಲ್ಲೂಕು ಕೇಂದ್ರ ಸ್ಥಾನದಲ್ಲಿಯೇ ಒಕ್ಕಲುತನ ಹುಟ್ಟುವಳಿ ಕೇಂದ್ರ (ಎಪಿಎಂಸಿ) ಇಲ್ಲದಿರುವುದು ರೈತರಿಗೆ ಸಂಕಷ್ಟ ತರಿಸಿದೆ. ಎಪಿಎಂಸಿ ಇಲ್ಲದ ಕಾರಣ ಬೆಳೆ ಮಾರಾಟದಿಂದ ಹಿಡಿದು ವಿವಿಧ ಸೌಲಭ್ಯಗಳನ್ನು ಪಡೆಯಲು ರೈತರು ನಾನಾ ತೊಂದರೆಗಳನ್ನು ಎದುರಿಸುವಂತಾಗಿದೆ.
ಗದಗ ಜಿಲ್ಲೆಯ ಇತರೆ ತಾಲ್ಲೂಕುಗಳಿಗೆ ಹೋಲಿಸಿದರೆ ಶಿರಹಟ್ಟಿ ಪ್ರತಿಯೊಂದು ಕ್ಷೇತ್ರದಲ್ಲಿಯೂ ಹಿಂದುಳಿದ ತಾಲ್ಲೂಕು ಎಂಬ ಹಣೆಪಟ್ಟಿ ಕಟ್ಟಿಕೊಂಡಿದೆ. ಇಲ್ಲಿನ ಜನರಿಗೆ ಕೃಷಿಯೇ ಬದುಕಿನ ಮೂಲಾಧಾರ. ಬಹುತೇಕ ಕೆಂಪುಮಿಶ್ರಿತ ಜವಗು (ಮಸಾರಿ) ಪ್ರದೇಶ ಹೊಂದಿರುವ ಇಲ್ಲಿನ ಕೃಷಿ ಪ್ರದೇಶಕ್ಕೆ ಮಳೆಯೇ ಆಸರೆ. ಮಳೆ ನಂಬಿರುವ ತಾಲ್ಲೂಕಿನ ರೈತರು ಎಲ್ಲ ಬಗೆಯ ವಾಣಿಜ್ಯ ಬೆಳೆ, ತರಕಾರಿ, ಹಣ್ಣುಗಳನ್ನು ಬೆಳೆಯುತ್ತಿದ್ದಾರೆ. ಆದರೆ, ತಾಲ್ಲೂಕು ಕೇಂದ್ರದಲ್ಲಿ ಎಪಿಎಂಸಿ ಇಲ್ಲದಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಹೀಗಿದ್ದರೂ ಅಧಿಕಾರಿಗಳು, ಜನಪ್ರತಿನಿಧಿಗಳು ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಕ್ರಮವಹಿಸಿಲ್ಲ ಎಂದು ರೈತರು ಕಿಡಿಕಾರಿದ್ದಾರೆ.
ಈಗ ಇರುವ ಎಪಿಎಂಸಿಯ ಸಣ್ಣ ಕಚೇರಿ ಹಾಳಾಗಿದೆ. ಇದರ ಸುತ್ತಮುತ್ತಲಿನ ಪ್ರದೇಶ ಕುಡುಕರ ಅಡ್ಡೆಯಾಗಿ ಪರಿವರ್ತನೆಗೊಂಡಿದೆ. ಎಲ್ಲೆಂದರಲ್ಲಿ ಕುಡಿದು ಬಿಸಾಡಿದ ಮದ್ಯದ ಪ್ಯಾಕೆಟ್‌ಗಳ ರಾಶಿಯೇ ಕಾಣಿಸುತ್ತದೆ. ಈಗಾಗಲೇ ನಿರ್ಮಿಸಿರುವ ಗೋದಾಮುಗಳು ನಿರ್ವಹಣೆ ಇಲ್ಲದೇ ಗಿಡಗಂಟಿಗಳಿಂದ ಆವರಿಸಿಕೊಂಡಿವೆ.
ಸಂಜೆಯಾಗುತ್ತಿದ್ದಂತೆಯೇ ದಾಂಗುಡಿ ಇಡುವ ಪಡ್ಡೆ ಹುಡುಗರು ಇಲ್ಲಿರುವ ಕಚೇರಿ ಸೇರಿದಂತೆ ಸಂಪೂರ್ಣ ಎಪಿಎಂಸಿ ಆವರಣವನ್ನೇ ಬಾರ್‌ನಂತೆ ಬಳಸಿಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲದೇ ಪಾಳು ಬಿದ್ದ ಎಪಿಎಂಸಿ ಕಟ್ಟಡ, ಆವರಣ ಹಾಗೂ ಕಾಂಪೌಂಡ್‌ಗಳು ಕೆಲ ಅನಾಗರಿಕರ ಬಯಲು ಶೌಚ ಮಾಡುವ ಸ್ಥಳವಾಗಿ ಮಾರ್ಪಟ್ಟಿದೆ.
ರೈತರಿಗೆ ನ್ಯಾಯವಾದ ಬೆಲೆ ಒದಗಿಸುವುದು ತೂಕ, ದರ ನಿಗದಿ, ಹರಾಜು ಪ್ರಕ್ರಿಯೆಯಲ್ಲಿ ಪಾರದರ್ಶಕತೆ ತಂದು ದಲ್ಲಾಳಿಗಳ ಶೋಷಣೆ ತಡೆಯುವುದು ಎಪಿಎಂಸಿಯ ಪ್ರಮುಖ ಉದ್ದೇಶವಾಗಿದೆ. ಆದರೆ, ಶಿರಹಟ್ಟಿ ತಾಲ್ಲೂಕಿನ ರೈತರಿಗೆ ಈ ಯಾವುದೇ ಸೌಲಭ್ಯಗಳು ಸಿಗುತ್ತಿಲ್ಲ. ಇದರಿಂದಾಗಿ ರೈತರು ದೂರದ ಎಪಿಎಂಸಿ ಅವಲಂಬಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಸಮಯ ಮತ್ತು ಹಣವನ್ನು ವ್ಯಯಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಇದು ರೈತರ ಬದುಕಿನ ಮೇಲೆ ನೇರ ಹೊಡೆತ ನೀಡಿದೆ ಎಂದು ಕೃಷಿಕರು ಕಿಡಿಕಾರಿದ್ದಾರೆ.
‘ಹೆಸರಿಗೆ ಮಾತ್ರ ತಾಲ್ಲೂಕು ಕೇಂದ್ರವಾಗಿರುವ ಶಿರಹಟ್ಟಿ ಕುಗ್ರಾಮಕ್ಕಿಂತ ಕನಿಷ್ಠ ಸೌಲಭ್ಯಗಳನ್ನು ಹೊಂದಿದೆ. ಶಿರಹಟ್ಟಿಯಲ್ಲಿ ಸ್ಥಾಪನೆಯಾಗಬೇಕಿದ್ದ ಬಹುತೇಕ ಕೇಂದ್ರ ಕಚೇರಿಗಳು ಲಕ್ಷೇಶ್ವರ ಪಟ್ಟಣದಲ್ಲಿ ಸ್ಥಾಪನೆಯಾಗಿರುವುದಕ್ಕೆ ರಾಜಕೀಯ ಕಾರಣಗಳು ಇವೆ’ ಎಂದು ಸ್ಥಳೀಯ ಮುಖಂಡರು ಆರೋಪ ಮಾಡುತ್ತಾರೆ.
‘ಸ್ವಾತಂತ್ರ್ಯ ನಂತರದಿಂದಲೂ ಶಿರಹಟ್ಟಿ ಹಾಗೂ ತಾಲ್ಲೂಕು ವ್ಯಾಪ್ತಿಯಲ್ಲಿನ ಗ್ರಾಮಗಳಲ್ಲಿ ಪ್ರಭಾವಿ ರಾಜಕಾರಣಿಗಳ ಕೊರತೆ ತೀವ್ರವಾಗಿದೆ. ಹೀಗಾಗಿ ಶಿರಹಟ್ಟಿ ತಾಲ್ಲೂಕು ಕೇಂದ್ರವಾಗಿದ್ದರೂ ಇಲ್ಲಿ ಸ್ಥಾಪನೆಯಾಗಬೇಕಿದ್ದ ಕಾರ್ಯಾಲಯಗಳು ಲಕ್ಷೇಶ್ವರದಲ್ಲಿ ಸ್ಥಾಪನೆಯಾದವು. ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದ ಬಳಲುತ್ತಿರುವ ಶಿರಹಟ್ಟಿಗೆ 2008ರಲ್ಲಿ ಅಂದಿನ ಶಾಸಕರ ಅವಧಿಯಲ್ಲಿ ಕೊಂಚ ಅಭಿವೃದ್ಧಿ ಗೋಚರಿಸಿತು. ಬಳಿಕ ಅದೂ ಕಣ್ಮರೆಯಾಗಿದೆ’ ಎಂದು ದೂರಿದ್ದಾರೆ.
ಅಧಿಕಾರಿಗಳ ಮಾಹಿತಿ ಪ್ರಕಾರ ಪ್ರಸ್ತುತ ಶಿರಹಟ್ಟಿ ಪಟ್ಟಣದಲ್ಲಿರುವ ಎಪಿಎಂಸಿಯು 5 ಎಕರೆ 17 ಗುಂಟೆ ಜಾಗ ಹೊಂದಿದೆ. ಇದರಲ್ಲಿ 2 ಗೋದಾಮುಗಳನ್ನು ನಿರ್ಮಾಣ ಮಾಡಲಾಗಿದ್ದು, ಅವು 100 ಮೆಟ್ರಿಕ್ ಟನ್ ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹೊಂದಿವೆ. ಮೊದಲು ಅವುಗಳನ್ನು ವೇರ್‌ಹೌಸ್‌ಗೆ ನೀಡಲಾಗಿತ್ತು. ಪ್ರಸ್ತುತ ಅವು ಸಹ ದುರಸ್ತಿ ಹಂತಕ್ಕೆ ತಲುಪಿವೆ.
ಎಪಿಎಂಸಿ ಬಗ್ಗೆ ಪ್ರಶ್ನೆ ಕೇಳಿದಾಗಲೆಲ್ಲಾ ಅಧಿಕಾರಿಗಳು, ‘ಎಪಿಎಂಸಿಯಲ್ಲಿ ಖರೀದಿದಾರರಿಗೆ ಮಳಿಗೆಗಳ ನಿವೇಶನ ಹಾಗೂ ಮೂಲಸೌಕರ್ಯ ಒದಗಿಸುವಂತೆ ಕೋರಿ ಸರ್ಕಾರಕ್ಕೆ ಪಸ್ತಾವ ಸಲ್ಲಿಸಲಾಗಿದೆ’ ಎಂಬ ಸಿದ್ಧ ಉತ್ತರ ನೀಡುತ್ತಾರೆ. ಪ್ರತಿ ಸಲವೂ ಇದನ್ನೇ ಹೇಳುವ ಕಾರಣ ಅವರ ಮಾತುಗಳು ಕಾರ್ಯರೂಪಕ್ಕೆ ಬಾರದ ಭರವಸೆಗಳಾಗಷ್ಟೇ ಉಳಿದಿವೆ ಎಂದು ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ದಾರೆ.
ಹೋರಾಟ ಅನಿವಾರ್ಯ: ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಬೇಜವಾಬ್ದಾರಿಯಿಂದ ಎಪಿಎಂಸಿ ಅಧೋಗತಿ ತಲುಪಿದ್ದು ಶೀಘ್ರವಾಗಿ ಪ್ರಾರಂಭಿಸದೆ ಇದ್ದಲ್ಲಿ ಹೋರಾಟ ನಡೆಸುವುದು ಅನಿವಾರ್ಯವಾಗಲಿದೆಸಂತೋಷ ಕುರಿ ಸಾಮಾಜಿಕ ಹೋರಾಟಗಾರ
ಚಕ್ಕಡಿ ಚಳವಳಿ: ಎಪಿಎಂಸಿ ಇದ್ದರೂ ಇಲ್ಲದಂತಾಗಿದೆ. ಅದನ್ನು ಪ್ರಾರಂಭಿಸುವಂತೆ ಹಲವಾರು ಬಾರಿ ಮನವಿ ನೀಡಲಾಗಿದೆ. ಮನವಿಗೆ ಸ್ಪಂದಿಸದಿದ್ದರೆ ಚಕ್ಕಡಿ ಚಳವಳಿ ಕೈಗೊಂಡು ಹೋರಾಟ ನಡೆಸಲಾಗುವುದು.ವಿಠ್ಠಲ ಬಿಡವೆ ಯುವ ರೈತ
ಮೂರು ತಿಂಗಳಲ್ಲಿ ಪ್ರಾರಂಭ: ಖರೀದಿದಾರರಿಗೆ ನಿವೇಶನ ಹಂಚಲು ಮಂಜೂರಾತಿ ಹಾಗೂ ಎಪಿಎಂಸಿ ಪ್ರಾರಂಭಿಸುವ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಿದ್ದು ಎರಡು ಮೂರು ತಿಂಗಳಲ್ಲಿ ಪ್ರಾರಂಭಿಸಲಾಗುವುದು.ಡಾ.ಕೋಡಿಗೌಡ ಕೆ.ಎ. ಹೆಚ್ಚುವರಿ ನಿರ್ದೇಶಕ ಬೆಳಗಾವಿ ವಿಭಾಗ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.