ADVERTISEMENT

ಶಿರಹಟ್ಟಿ | ತೆರಿಗೆ ಉಳಿಸಿಕೊಂಡ 200 ಆಸ್ತಿ ಮಾಲೀಕರು

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2026, 3:54 IST
Last Updated 8 ಫೆಬ್ರುವರಿ 2026, 3:54 IST
ಶಿರಹಟ್ಟಿ ತಾಲೂಕಿನ ಹೆಬ್ಬಾಳ ಗ್ರಾಮದಲ್ಲಿ ವಿಶೇಷ ಕರ ವಸೂಲಿ ಅಭಿಯಾನಕ್ಕೆ ತಾಲ್ಲೂಕು ಪಂಚಾಯಿತಿ ಇಒ ರಾಮಣ್ಣ ದೊಡ್ಡಮನಿ ಚಾಲನೆ ನೀಡಿದರು
ಶಿರಹಟ್ಟಿ ತಾಲೂಕಿನ ಹೆಬ್ಬಾಳ ಗ್ರಾಮದಲ್ಲಿ ವಿಶೇಷ ಕರ ವಸೂಲಿ ಅಭಿಯಾನಕ್ಕೆ ತಾಲ್ಲೂಕು ಪಂಚಾಯಿತಿ ಇಒ ರಾಮಣ್ಣ ದೊಡ್ಡಮನಿ ಚಾಲನೆ ನೀಡಿದರು   

ಶಿರಹಟ್ಟಿ: ತಾಲ್ಲೂಕಿನ ಪ್ರತಿ ಗ್ರಾಮ ಪಂಚಾಯತಿಗಳಲ್ಲಿ ಕರ ವಸೂಲಿ ಅಭಿಯಾನ ಹಮ್ಮಿಕೊಳ್ಳಲಾಗಿದ್ದು ಪ್ರಸ್ತುತ ನಡೆದ ಕರ ವಸೂಲಿ ಅಭಿಯಾನದಲ್ಲಿ ₹1,18,02,648 ಹಣ ತೆರಿಗೆ ಸಂಗ್ರಹಣೆ ಮಾಡಲಾಗಿದೆ. ಇದು ಎಲ್ಲರ ಗಮನ ಸೆಳೆಯುವ ಜತೆಗೆ ಮೇಲಾಧಿಕಾರಿಗಳ ಪ್ರಶಂಸೆಗೆ ಪಾತ್ರವಾಗಿದೆ ಎಂದು ತಾಪಂ ಇಒ ರಾಮಣ್ಣ ದೊಡ್ಡಮನಿ ಹೇಳಿದರು.

ತಾಲ್ಲೂಕಿನ ಹೆಬ್ಬಾಳ ಗ್ರಾಮ ಪಂಚಾಯತಿಗೆ ಭೇಟಿ ನೀಡಿ ಸ್ವತ ಕರ ವಸೂಲಿ ಮಾಡುವದರ ಜೊತೆಗೆ ವಿಶೇಷ ಕರ ವಸೂಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ತಾಲ್ಲೂಕಿನ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಸಿಬ್ಬಂದಿ ಕಳೆದ ಒಂದು ತಿಂಗಳಿಂದ ಅಭಿಯಾನದ ರೂಪದಲ್ಲಿ ಕರ ವಸೂಲಾತಿ ಆಂದೋಲನ ಹಮ್ಮಿಕೊಂಡಿದ್ದರಿಂದ ಪ್ರಸಕ್ತ ಸಾಲಿನಲ್ಲಿ ತಾಲ್ಲೂಕಿನ ₹ 1,57,12,122 ಒಟ್ಟು ಬೇಡಿಕೆಯಲ್ಲಿ ₹ 1,18,02,648 ಕರ ವಸೂಲಿಯಾಗಿದ್ದು, ಪ್ರಸ್ತುತ ಶೇ 75.57 ಕರ ವಸೂಲಾತಿಯಾಗಿದೆ ಎಂದು ಹೇಳಿದರು.

ಆನ್‌ಲೈನ್ ಪಾವತಿ ವ್ಯವಸ್ಥೆ ಹಾಗೂ ಡಿಜಿಟಲ್ ಸೇವೆಗಳ ಅನುಷ್ಠಾನದಿಂದ ತೆರಿಗೆ ಪಾವತಿ ಸುಲಭವಾಗಿ ಸಮಯಕ್ಕೆ ಸರಿಯಾಗಿ ನಡೆಯಬೇಕು. ತೆರಿಗೆ ಬಾಕಿದಾರರ ಕುರಿತು ಜಾಗೃತಿ ಅಭಿಯಾನ, ಮನೆ ಮನೆಗೆ ಭೇಟಿ ಹಾಗೂ ಸಭೆಗಳ ಮೂಲಕ ಸಾರ್ವಜನಿಕರಲ್ಲಿ ತೆರಿಗೆ ಪಾವತಿಯ ಮಹತ್ವವನ್ನು ಅರಿವು ಮೂಡಿಸಬೇಕು. ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅತಿ ಹೆಚ್ಚು ತೆರಿಗೆ ಬಾಕಿ ಉಳಿಸಿಕೊಂಡಿರುವ ಕನಿಷ್ಠ 200 ಆಸ್ತಿ ಮಾಲೀಕರನ್ನು ಗುರುತಿಸಿ ಅವರಿಗೆ ತಗಾದೆ ನೋಟಿಸು ನೀಡಿ ತೆರಿಗೆ ವಸೂಲಿ ಮಾಡಬೇಕು.

ADVERTISEMENT

ತೆರಿಗೆ ಪಾತಿಸದೇ ಬಾಕಿ ಉಳಿಸಿಕೊಂಡಿರುವ ಮೊಬೈಲ್ ಟವರ್ ಕಂಪನಿಗಳಿಗೆ ನೋಟಿಸು ಜಾರಿ ಮಾಡಿ, ಸಂಪೂರ್ಣ ಮೊತ್ತ ಪಾವತಿಸಿಕೊಳ್ಳುವುದು. ತೆರಿಗೆ ಪಾವತಿ ಬಾಕಿ ಹೊಂದಿರುವ ಅಂಗಡಿ ಮಾಲೀಕರು, ಉದ್ದಿಮೆದಾರರು, ಸರ್ಕಾರಿ ನೌಕರರರಿಗೆ ನೋಟಿಸು ನೀಡಿ ಶೇ 100ರಷ್ಟು ಬಾಕಿ ವಸೂಲಿ ಮಾಡಲು ಸೂಚಿಸಲಾಗಿತ್ತು. ಅದರಂತೆ ಅಭಿಯಾನದ ದಿನದಂದು ಕರ ವಸೂಲಿ ಮಾಡಲಾಗಿದೆ. ಕಡಿಮೆ ಪ್ರಗತಿ ಸಾಧಿಸಿರುವ ಗ್ರಾಮ ಪಂಚಾಯಿತಿಗಳ ಕಾರ್ಯದರ್ಶಿ ಹಾಗೂ ಕರ ವಸೂಲಾತಿಗಾರರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿ, ಪ್ರಸಕ್ತ ಆರ್ಥಿಕ ವರ್ಷದ ಮುಕ್ತಾಯಕ್ಕೆ ಪೂರ್ವ ಶೇ 100 ರಷ್ಟು ಪ್ರಗತಿ ಸಾಧಿಸುವಂತೆ ಸೂಚನೆ ನೀಡಿದರು.

ತಾಲ್ಲೂಕು ಪಂಚಾಯಿತಿಯ ಹನುಮೇಶ ಕೊಂಡಿಕೊಪ್ಪ ಸೇರಿದಂತೆ ಎಲ್ಲ ಪಂಚಾಯಿತಿ ಪಿಡಿಒಗಳು ಅಭಿಯಾನದಲ್ಲಿ ಸಕ್ರಿಯಗಾಗಿ ಪಾಲ್ಗೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.