
ಗಜೇಂದ್ರಗಡ: ‘ಸಾಮೂಹಿಕ ವಿವಾಹಗಳು ದುಂದು ವೆಚ್ಚಕ್ಕೆ ಕಡಿವಾಣ ಹಾಕುವುದರ ಜೊತೆಗೆ ಸಮಾಜದಲ್ಲಿ ಸಾಮರಸ್ಯ ಮೂಡಿಸುತ್ತವೆ’ ಎಂದು ಗುಳೇದಗುಡ್ಡದ ಒಪ್ಪತ್ತೇಶ್ವರ ಮಠದ ಒಪ್ಪತೇಶ್ವರ ಸ್ವಾಮೀಜಿ ಹೇಳಿದರು.
ಸಮೀಪದ ಸೂಡಿ ಗ್ರಾಮದ ಗುರು ಮಹಾಂತೇಶ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಮೈದಾನದಲ್ಲಿ ಮಲ್ಲಿಕಾರ್ಜುನ ಜೀರ್ಣೋದ್ದಾರ ಸಮಿತಿ ಆಶ್ರಯದಲ್ಲಿ ಲಿಂ. ಜಗದ್ಗುರು ಗುರು ಮಹಾಂತ ಶಿವಯೋಗಿಗಳ 58ನೇ ಪುಣ್ಯಾರಾಧನೆ ಅಂಗವಾಗಿ ಶನಿವಾರ ನಡೆದ 9ನೇ ವರ್ಷದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
‘ಸಮಾಜದಲ್ಲಿ ಸಾಮರಸ್ಯ ಮೂಡಿಸಲು ಇಂತಹ ಸರಳ ಸಾಮೂಹಿಕ ವಿವಾಹಗಳ ಅವಶ್ಯಕತೆಯಿದ್ದು, ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ಸತಿ-ಪತಿಗಳು ಜೀವನದಲ್ಲಿ ಕಷ್ಟ, ಸುಖಗಳನ್ನು ಸಮನಾಗಿ ಹಂಚಿಕೊಂಡು ಬಾಳಬೇಕು’ ಎಂದು ಸಲಹೆ ನೀಡಿದರು.
ಮೈಸೂರು ಸಂಸ್ಥಾನ ಮಠದ ವಿಜಯ ಮಹಾಂತೇಶ ಸ್ವಾಮೀಜಿ ಮಾತನಾಡಿ, ‘ಸಾಮೂಹಿಕ ವಿವಾಹದಲ್ಲಿ ದಾಂಪತ್ಯ ಜೀವನಕ್ಕೆ ಅಡಿಯಿಟ್ಟಿರುವ ನವ ದಂಪತಿಗಳು ಪರಸ್ಪರ ನಡೆಯುವುದರ ಜೊತೆಗೆ ಮಿತ ಸಂತಾನದ ಸೂತ್ರ ಪಾಲಿಸಿ ಜೀವನದಲ್ಲಿ ಆರ್ಥಿಕ ಸಬಲತೆ ಹೊಂದಬೇಕು’ ಎಂದರು.
ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ 11 ನವ ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. ಇದಕ್ಕೂ ಮೊದಲು ಗ್ರಾಮದ ಪ್ರಮುಖ ಬೀದಿಗಳಲ್ಲಿ ಲಿಂ.ಗುರು ಮಹಾಂತ ಶ್ರೀ ಚಿತ್ರದ ಮೆರವಣಿಗೆ ಅದ್ದೂರಿಯಾಗಿ ನಡೆಯಿತು.
ಯಲಬುರ್ಗಾದ ಶ್ರೀಧರ ಮುರಡಿ ಹಿರೇಮಠದ ಬಸವಲಿಂಗ ಶಿವಾಚಾರ್ಯ ಸ್ವಾಮೀಜಿ, ಚಿಕ್ಕಮ್ಯಾಗೇರಿ ಗ್ರಾಮದ ಗುರುಶಾಂತ ಸ್ವಾಮೀಜಿ, ಹುಣಶ್ಯಾಳ ಬಸವ ಧರ್ಮಮಠದ ಶಿವಶಾಂತವೀರ ಸ್ವಾಮೀಜಿ, ನಿವೃತ್ತ ಹಿರಿಯ ಭೂವಿಜ್ಞಾನಿ ಚಂದ್ರಶೇಖರಪ್ಪ ಸೂಡಿ, ವೀರಣ್ಣ ಶೇಟ್ಟರ್ ಇದ್ದರು.
ಬಳಿಕ ಭಕ್ತರಿಗೆ ವಿವಿಧ ಖಾದ್ಯಗಳ ಅನ್ನ ಸಂತಪ೯ಣೆ ನಡೆಯಿತು. ಕಾರ್ಯಕ್ರಮದಲ್ಲಿ 2025ನೇ ಸಾಲಿನಲ್ಲಿ 7ನೇ, 10ನೇ ತರಗತಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.