
ಗದಗ: ‘ಆಧುನೀಕತೆಯ ಇಂದಿನ ದಿನಗಳಲ್ಲಿ ಒತ್ತಡದ ಬದುಕನ್ನು ಅನುಭವಿಸುವಂತಾಗಿದೆ. ಅವಸರದ ಜೀವನದಿಂದಾಗಿ ನೆಮ್ಮದಿ ಮರೆಯಾಗುತ್ತಿದೆ’ ಎಂದು ಗದಗ ಶಿವಾನಂದ ಮಠದ ಶಿವಶರಣೆ ಮುಕ್ತಾತಾಯಿ ಹೇಳಿದರು.
ಇಲ್ಲಿನ ವಿವೇಕಾನಂದ ನಗರದ ಕಾಶೀ ವಿಶ್ವನಾಥ ದೇವಸ್ಥಾನದ ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಭವನದಲ್ಲಿ ನಡೆದ ಜೀವನ ದರ್ಶನ 54ನೇ ಮಾಲಿಕೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಒತ್ತಡಗಳಿಂದ ಒಂದಿಷ್ಟು ನೆಮ್ಮದಿಯ ಬದುಕು ಸಾಗಿಸಲು ಧಾರ್ಮಿಕ, ಆಧ್ಯಾತ್ಮಿಕ ಕಾರ್ಯಗಳಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳಬೇಕು. ಒಂದಿಷ್ಟು ಯೋಗ, ಧ್ಯಾನ, ಸತ್ಸಂಗದಲ್ಲಿ ಚಿಂತನೆ ನಡೆಸಬೇಕು ಎಂದರು.
ದಿನಕ್ಕೊಮ್ಮೆಯಾದರೂ ಭಗವಂತನ ನಾಮಸ್ಮರಣೆಗೆ ಸ್ವಲ್ಪ ಸಮಯ ಮಿಸಲಿಡಬೇಕು, ಮಹಾತ್ಮರ ಅನುಭಾವದ ನುಡಿಗಳನ್ನು ಆಲಿಸಬೇಕು. ಅಂತರಂಗ ಶುದ್ಧಿ ಬಹಿರಂಗವನ್ನು ಶುದ್ಧಿಯಾಗಿಟ್ಟುಕೊಂಡು ಮನೆ-ಮನವನ್ನು ಸ್ವಚ್ಚವಾಗಿಟ್ಟುಕೊಂಡಲ್ಲಿ ಬದುಕು ಸನ್ಮಾರ್ಗದಲ್ಲಿ ಮುನ್ನಡೆಯುವುದು ಎಂದರು.
ಅಧ್ಯಕ್ಷತೆ ವಹಿಸಿದ್ದ ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಸಮಿತಿಯ ಅಧ್ಯಕ್ಷ ಎ.ಟಿ.ನರೇಗಲ್ಲ ಮಾತನಾಡಿ, ‘ಸಮಿತಿಯ ಹಿಂದಿನ ಪದಾಧಿಕಾರಿಗಳು ಮುನ್ನಡೆಸಿಕೊಂಡು ಬಂದಿರುವ ಜೀವನ ದರ್ಶನ ಮಾಲಿಕೆ ಈ ಭಾಗದ ಜನತೆಯ ಬದುಕಿನಲ್ಲಿ, ಜೀವನಶೈಲಿಯಲ್ಲಿ ಗುಣಾತ್ಮಕ ಬದಲಾವಣೆ ತಂದಿದೆ’ ಎಂದರು.
ಸಮಿತಿಯ ಗೌರವಾಧ್ಯಕ್ಷ ಜಿ.ಜಿ.ಕುಲಕರ್ಣಿ, ಉಪಾಧ್ಯಕ್ಷ ಆರ್.ಆರ್.ಕಾಶಪ್ಪನವರ ವೇದಿಕೆಯಲ್ಲಿದ್ದರು. ಸಮಿತಿಯ ಕಾರ್ಯದರ್ಶಿ ಕೆ.ಪಿ.ಗುಳಗೌಡ್ರ ಸ್ವಾಗತಿಸಿದರು. ಕೋಶಾಧ್ಯಕ್ಷ ಎಸ್.ಎಸ್.ಪಾಳೇಗಾರ ನಿರೂಪಿಸಿದರು.
ಸಮಿತಿಯ ನಿರ್ದೇಶಕರಾದ ಆರ್.ಬಿ.ಅಂದಪ್ಪನವರ, ವಿ.ಆರ್.ಗೊಬ್ಬರಗುಂಪಿ, ಸಾಗರ ಬಿಂಗಿ, ರೇಣುಕಾ ಕರಿಗೌಡರ, ಸಂಗೀತಾ ಕುರಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.