ಗದಗ: ಜಾನಪದಕ್ಕೆ ಆಡುಮಾತಿನ ಸೊಗಸಿದೆ. ಅದು ಸರಳ, ಸ್ಪಷ್ಟತೆಯಿಂದ ಕೂಡಿದೆ. ಅಕ್ಷರದ ಅರಿವು ಇಲ್ಲದಿದ್ದರೂ ಸಾವಿರಾರು ಹಾಡುಗಳನ್ನು ಹೇಳುವ ಗೌರಮ್ಮ ಚಲವಾದಿ ನಮ್ಮ ನಾಡಿನ ಹೆಮ್ಮೆ. ಅವರು ನಾಡು ಕಂಡ ಅಪರೂಪದ ಗಾನಕೋಗಿಲೆ ಎಂದು ಸಿದ್ದರಾಮ ಸ್ವಾಮೀಜಿ ಹೇಳಿದರು.
ಲಿಂಗಾಯತ ಪ್ರಗತಿಶೀಲ ಸಂಘದ ಆಶ್ರಯದಲ್ಲಿ ನಗರದ ತೋಂಟದಾರ್ಯ ಮಠದಲ್ಲಿ ಈಚೆಗೆ ನಡೆದ 2,752ನೇ ಶಿವಾನುಭವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಜನಪದರು ತಮಗೆ ಅನಿಸಿದ ಭಾವನೆಗಳನ್ನು ಸರಳವಾಗಿ ಹೇಳಿದರೂ ಅದರ ಅರ್ಥದ ವಿಸ್ತಾರ ದೊಡ್ಡದು. ಗೌರಮ್ಮ ಅವರು ಬದುಕಿನಲ್ಲಿ ಕಷ್ಟನಷ್ಟಗಳನ್ನು ಅನುಭವಿಸಿದರೂ ಅದನ್ನು ಮರೆತು ಹಾಡುತ್ತಿದ್ದರು. ಅವರ ಇಡೀ ಬದುಕು ಜಾನಪದಮಯವಾಗಿತ್ತು ಎಂದರು.
ಲಿಂಗೈಕ್ಯ ಸಿದ್ಧಲಿಂಗ ಸ್ವಾಮೀಜಿ ಬರುವುದನ್ನು ನೋಡಿದ ಗೌರಮ್ಮ ಅಲ್ಲಿಯೇ ಹಾಡು ಕಟ್ಟಿ ಹಾಡುವುದನ್ನು ಕೇಳಿದಾಗ ಶ್ರೀಗಳು ಪುಳಕಿತಗೊಳ್ಳುತ್ತಿದ್ದರು. ಶ್ರೇಷ್ಠ ಜಾನಪದ ಗಾಯಕಿ ಗೌರಮ್ಮ ಅವರ ಬಗ್ಗೆ ‘ಪುಣ್ಯ ಪುರುಷರ ಮಾಲಿಕೆ’ಯಲ್ಲಿ ಜಾನಪದ ಕೋಗಿಲೆ ಗೌರಮ್ಮ ಪುಸ್ತಕವನ್ನು ಪ್ರಕಟಿಸಿದರು. ಇಂಥ ಗಾಯಕಿಯರು ಇದ್ದುದರಿಂದಲೇ ಜಾನಪದ ಇಂದಿಗೂ ನಳನಳಿಸುತ್ತಿದೆ ಎಂದರು.
ಲಿಂಗಾಯತ ಪ್ರಗತಿಶೀಲ ಸಂಘದ ಮಾಜಿ ಅಧ್ಯಕ್ಷ ಮಹೇಶ್‍ಗೌಡ ಪೊಲೀಸ್ ಪಾಟೀಲ, ಸಿದ್ದಣ್ಣ ಬಂಗಾರ ಶೆಟ್ಟರ, ಕೆ.ಎಸ್.ಚಟ್ಟಿ ಅವರನ್ನು ಶ್ರೀಗಳು ಸನ್ಮಾನಿಸಿದರು.
ಮೃತ್ಯುಂಜಯ ಹಿರೇಮಠ ಹಾಗೂ ಗುರುನಾಥ್ ಸುತಾರ ಮತ್ತು ಸೋಮನಾಥ ದೊಡ್ಡಮನಿ ಅವರು ಸಂಗೀತ ಸೇವೆ ನಡೆಸಿಕೊಟ್ಟರು.
ಖುಷಿ ಎಂ. ಲಕ್ಕುಂಡಿ ಧರ್ಮಗ್ರಂಥ ಪಠಿಸಿದರು. ಶ್ರದ್ದಾ ಎಸ್. ಹೂಲಿ ವಚನ ಚಿಂತನ ನಡೆಸಿಕೊಟ್ಟರು. ಮಲ್ಲಿಕಾರ್ಜುನ ಚಲವಾದಿ ಹಾಗೂ ಪರಿವಾರದವರು ದಾಸೋಹ ಸೇವೆ ವಹಿಸಿಕೊಂಡಿದ್ದರು.
ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಬಾಲಚಂದ್ರ ಭರಮಗೌಡ್ರ, ಉಪಾಧ್ಯಕ್ಷ ಡಾ. ಉಮೇಶ ಪುರದ, ವಿದ್ಯಾಪ್ರಭು ಗಂಜಿಹಾಳ, ಕಾರ್ಯದರ್ಶಿ ವೀರಣ್ಣ ಗೋಟಡಕಿ ಸೇರಿ ಹಲವರು ಇದ್ದರು.
ಸೋಮನಾಥ ಪುರಾಣಿಕ ಸ್ವಾಗತಿಸಿದರು. ವಿದ್ಯಾ ಪ್ರಭು ಗಂಜಿಹಾಳ ಕಾರ್ಯಕ್ರಮ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.