
ಗದಗ: ‘ಡಾ. ಎಸ್.ಎಲ್.ಭೈರಪ್ಪ ಅವರ ಸಾಹಿತ್ಯವೆಂದರೆ ಅದು ಒಂದು ಉನ್ನತ ಅಧ್ಯಯನದ ಮೊತ್ತ. ಅವರೆಂದೂ ಓಲೈಕೆಗಾಗಿ ಸಾಹಿತ್ಯ ಬರೆದವರಲ್ಲ. ಕಟುವಾದರೂ ಸರಿ, ಸತ್ಯ ಮತ್ತು ವಾಸ್ತವದ ಹೊರತೂ ಮತ್ತೇನನ್ನೂ ಬರೆಯಲಾರೆ ಎಂಬಂತೆ ಭೈರಪ್ಪನವರು ಬದುಕಿದ್ದರು’ ಎಂದು ವಕೀಲ ಸುಧೀರ್‌ಸಿಂಹ ಘೋರ್ಪಡೆ ಹೇಳಿದರು.
ನಗರದ ಕೆಎಲ್‌ಇ ಸಂಸ್ಥೆಯ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಕನ್ನಡ ವಿಭಾಗ ಆಯೋಜಿಸಿದ್ದ ‘ಬಹುರೂಪಿ ಡಾ. ಎಸ್.ಎಲ್.ಭೈರಪ್ಪ’ ವಿಶೇಷ ಉಪನ್ಯಾಸ, ವಿದ್ಯಾರ್ಥಿಗಳೊಂದಿಗೆ ಸಂವಾದ ಮತ್ತು ಸಾಕ್ಷ್ಯಚಿತ್ರ ಪ್ರದರ್ಶನದಲ್ಲಿ ಮಾತನಾಡಿದರು.
‘ನಮ್ಮ ದೇಶದ ಜನರಲ್ಲಿ ನಾಗರಿಕತೆ, ಸಂಸ್ಕೃತಿ, ಸಂಪ್ರದಾಯ ಉಳಿದಿದೆ ಎಂದರೆ ಅದಕ್ಕೆ ಕಾರಣ ಸಾಹಿತ್ಯ ಮಾತ್ರ. ಅಂತಹ ಸಾಹಿತ್ಯ ರಚನಾಕಾರರಲ್ಲಿ ಡಾ. ಎಸ್.ಎಲ್.ಭೈರಪ್ಪ ಪ್ರಮುಖರು. ಕಷ್ಟಪಟ್ಟರೆ ಮಾತ್ರ ಯಶಸ್ಸು ಸಿಗುತ್ತದೆ ಎನ್ನುವುದಕ್ಕೆ ಭೈರಪ್ಪ ಪ್ರತ್ಯಕ್ಷ ಸಾಕ್ಷಿಯಾಗಿದ್ದಾರೆ. ವಿದ್ಯಾರ್ಥಿಗಳು ಕೂಡ ಅವರಂತೆಯೇ ಉನ್ನತ ಸ್ಥಾನಕ್ಕೇರಲು ಪ್ರಯತ್ನ ಪಡಬೇಕು’ ಎಂದರು.
ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ. ಅಂದಯ್ಯ ಅರವಟಗಿಮಠ ಪ್ರಾಸ್ತಾವಿಕವಾಗಿ ಮಾತನಾಡಿ, ‘ಡಾ. ಎಸ್.ಎಲ್.ಭೈರಪ್ಪ ಕೆಲವು ವರ್ಷಗಳ ಕಾಲ ಕೆಎಲ್ಇ ಸಂಸ್ಥೆಯ ಉಪನ್ಯಾಸಕರಾಗಿದ್ದರು ಎನ್ನುವುದು ನಮಗೆಲ್ಲ ಹೆಮ್ಮೆಯ ಸಂಗತಿ’ ಎಂದರು.
‘ಒಂದು ಕೃತಿ ರಚನೆಗೂ ಮುನ್ನ ಆ ಕುರಿತು ಸಂಶೋಧನೆ ಹಾಗೂ ಕ್ಷೇತ್ರಕಾರ್ಯ ಮಾಡುತ್ತಿದ್ದಂತಹ ಅಪರೂಪದ ಸಾಹಿತಿ ಭೈರಪ್ಪನವರು. ಅವರ ಹಲವು ಕಾದಂಬರಿಗಳು ನಲವತ್ತು ಬಾರಿ ಮರು ಮುದ್ರಣವಾಗಿವೆ. ಹಿಂದಿ, ಮರಾಠಿ, ತೆಲುಗು ಸೇರಿದಂತೆ ನಾನಾ ಭಾಷೆಗಳಿಗೆ ಭಾಷಾಂತರಗೊಂಡಿವೆ’ ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಪ್ರೊ. ಎ.ಕೆ.ಮಠ ಮಾತನಾಡಿ, ‘ಭೈರಪ್ಪ ಅವರ ಸಾಹಿತ್ಯವು ಕೇವಲ ಪಠ್ಯಪುಸ್ತಕದ ವಿಷಯವಲ್ಲ, ಅದು ಜೀವನದ ಪಾಠ. ವಿದ್ಯಾರ್ಥಿಗಳು ಸಾಹಿತ್ಯಾಭ್ಯಾಸದ ಜತೆಗೆ ಕಥೆ, ಕಾದಂಬರಿ, ವಿಮರ್ಶಾತ್ಮಕ ಕೃತಿಗಳ ಅಧ್ಯಯನಕ್ಕೂ ಸಮಯ ಮೀಸಲಿಡಬೇಕು’ ಎಂದರು.
ಕಾರ್ಯಕ್ರಮದ ಪ್ರಾರಂಭದಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ನಿರ್ಮಿಸಿದ, ಪಿ.ಶೇಷಾದ್ರಿ ನಿರ್ದೇಶಿಸಿದ ‘ಡಾ. ಎಸ್.ಎಲ್.ಭೈರಪ್ಪನವರ ಜೀವನ ಮತ್ತು ಕೃತಿಗಳುʼ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಲಾಯಿತು.
ಪ್ರೊ. ರಾಮಚಂದ್ರ ಪಡೇಸೂರ ಕಾರ್ಯಕ್ರಮ ನಿರ್ವಹಿಸಿದರು. ಪ್ರೊ. ಗೌರ ಯಳಮಲಿ ವಂದಿಸಿದರು. ಪ್ರೊ. ಜಿ.ಟಿ.ನಾಯಕ, ಪ್ರೊ. ವಿಠ್ಠಲ ಕೋಳಿ, ಪ್ರೊ. ಶ್ವೇತಾ ರಾಚಯ್ಯನವರ ಹಾಗೂ ಮಹಾವಿದ್ಯಾಲಯದ ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು.
ಭೈರಪ್ಪನವರದ್ದು ಮಹಿಳಾ ವಿರೋಧಿ ಧೋರಣೆ ಎಂಬ ಅಪವಾದವಿದೆ. ಆದರೆ ಅವರ ಕೃತಿಗಳನ್ನು ಹೆಚ್ಚು ಓದುವವರು ಮಹಿಳೆಯರೇ ಎನ್ನುವುದು ವಿಶೇಷ. ಸಿದ್ಧಾಂತಗಳಾಚೆ ಸಾಹಿತ್ಯವನ್ನು ನೋಡುವ ಅಗತ್ಯತೆ ಇದೆಪ್ರೊ. ಅಂದಯ್ಯ ಅರವಟಗಿಮಠ ಕನ್ನಡ ವಿಭಾಗ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.