ನರಗುಂದ: ‘ಎರಡು ವಾರಗಳಿಂದ ರಾಜ್ಯ ಸರ್ಕಾರ ಮುಸುಕುಧಾರಿ ಮಾತು ಕೇಳಿ ಧರ್ಮಸ್ಥಳದಲ್ಲಿ ಉತ್ಖನನ ನಡೆಸಿ ಧಮಸ್ಥಳಕ್ಕೆ ಅಪಪ್ರಚಾರ ಎಸಗಿದೆ. ಆದ್ದರಿಂದ ರಾಜ್ಯ ಸರ್ಕಾರ ಕೂಡಲೇ ಕ್ಷಮೆ ಕೇಳಬೇಕು ಎಂದು ಶಾಸಕ ಸಿ.ಸಿ.ಪಾಟೀಲ ಆಗ್ರಹಿಸಿದರು.
ಪಟ್ಟಣದ ತಾಲ್ಲೂಕು ಕ್ರೀಡಾಂಗಣದ ಕಚೇರಿಯಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಮುಖ್ಯಮಂತ್ರಿ ಸೇರಿದಂತೆ ಎಲ್ಲ ಸಚಿವರು ಮಂಜುನಾಥಸ್ವಾಮಿ, ವೀರೇಂದ್ರ ಹೆಗ್ಗಡೆ ಹಾಗೂ ನಾಡಿನ ಜನರ ಕ್ಷಮೆ ಕೇಳಬೇಕು. ರಾಜ್ಯ ಸರ್ಕಾರ ಎಡಪಂಥೀಯ ವಿಚಾರಗಳಿಂದ ಇಡೀ ಸನಾತನ ಧರ್ಮಕ್ಕೆ ಅಪಪ್ರಚಾರ ಎಸಗುತ್ತಿದೆ. ಹಿಂದೂ ಧರ್ಮ, ದೇವಾಲಯಗಳನ್ನು, ಸಂಸ್ಕೃತಿಯನ್ನು ಹಾಳು ಮಾಡುವುದನ್ನೇ ಕಾಂಗ್ರೆಸ್ ತನ್ನ ಉದ್ದೇಶವಾಗಿಸಿಕೊಂಡಿದೆ’ ಎಂದು ಕಿಡಿಕಾರಿದರು.
‘15 ದಿನಗಳ ನಂತರ ವಿಧಾನಸಭೆಯಲ್ಲಿ ವಿರೋಧ ಪಕ್ಷ ನಾಯಕ ಅಶೋಕ, ಶಾಸಕ ಸುನೀಲ್ ಕುಮಾರ್ ಧರ್ಮಸ್ಥಳದ ಬಗ್ಗೆ ಪ್ರಸ್ತಾಪಿಸುವವರೆಗೂ ಸಿದ್ದರಾಮಯ್ಯ ಸರ್ಕಾರ ಕಣ್ಣು, ಕಿವಿ ಹಾಗೂ ಬಾಯಿ ಮುಚ್ಚಿಕೊಂಡಿತ್ತು. ವಿಧಾನಸಭೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಂಜುನಾಥ ಸ್ವಾಮಿ ಪರ ಇದ್ದೇವೆ ಎಂದರು. ವಿಧಾನಸಭೆಯಿಂದ ಹೊರ ಬಂದ ನಂತರ ಇದರ ಹಿಂದೆ ಷಡ್ಯಂತ್ರ ಇದೆ, ಅನ್ಯಾಯವಾಗುತ್ತಿದೆ ಎಂದು ಡಿ.ಕೆ.ಶಿವಕುಮಾರ್ ಹೇಳುತ್ತಾರೆ. ಇವೆಲ್ಲವೂ ಕಣ್ಣೊರೆಸುವ ತಂತ್ರವಾಗಿದೆ’ ಎಂದು ದೂರಿದರು.
‘ಮುಸುಕುಧಾರಿ ಮಾತು ಕೇಳಿಕೊಂಡು ಮೂರು ಜನ ಐಪಿಎಸ್ ಅಧಿಕಾರಿಗಳ ನೇತೃತ್ವದ ಎಸ್‌ಐಟಿ ರಚನೆ ಮಾಡಿ ಉತ್ಖನನಕ್ಕೆ ಮುಂದಾಗಿರುವುದು ರಾಜ್ಯ ಸರ್ಕಾರದ ಬುದ್ಧಿಗೇಡಿ ನಡೆ ತೋರಿಸುತ್ತದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಇದರ ಹಿಂದೆ ಕೆಲವು ಸಂಘಟನೆಗಳು, ಎಡಪಂಥೀಯ ಶಕ್ತಿಗಳು, ಸಮಾಜದ ಸ್ವಾಸ್ಥ್ಯ ಕೆಡಿಸುವ ಕೆಲವು ಯೂಟ್ಯೂಬರ್‌ಗಳ ಮಾತು ಕೇಳಿಕೊಂಡು ರಾಜ್ಯ ಸರ್ಕಾರ ಧರ್ಮಸ್ಥಳಕ್ಕೆ ಕೆಟ್ಟ ಹೆಸರು ಉಂಟು ಮಾಡಿದೆ. ಧರ್ಮಸ್ಥಳ ಸುದ್ದಿ ಕೇರಳದಲ್ಲಿ ಪ್ರತಿಧ್ವನಿಸುತ್ತಿದೆ. ಧರ್ಮಸ್ಥಳಕ್ಕೂ ಕೇರಳಕ್ಕೂ ಏನು ಸಂಬಂಧ? ಧರ್ಮಸ್ಥಳದ ಪರ ಹೇಳಿಕೆ ನೀಡುವವರ ವಿರುದ್ದ ಸಮೀರ್ ಸೇರಿದಂತೆ ಕೆಲವು ಸಮಾಜಘಾತುಕ ಶಕ್ತಿಗಳು ಅವಹೇಳನಕಾರಿ ಪೋಸ್ಟ್ ಮಾಡಿ ಕಾಮೆಂಟ್ ಮಾಡುವುದನ್ನು ಸಹಿಸಲಾಗದು. ಇಲ್ಲಿನ ವಿಚಾರಗಳು ಮುಸ್ಲಿಂ ದೇಶಗಳಲ್ಲಿ ಅಲ್ ಜಜಿರಾ, ಬಿಬಿಸಿಯಂತಹ ಮಾಧ್ಯಮಗಳಲ್ಲಿ ಬರುವುದು ನೋಡಿದರೆ ಇದರೆ ಹಿಂದೆ ದೊಡ್ಡ ಸಂಚಿನ ಪಡೆ ಇದೆ ಎಂಬುದು ಗೊತ್ತಾಗುತ್ತದೆ’ ಎಂದು ಆರೋಪಿಸಿದರು.
‘ನಾವು ಸಂಪೂರ್ಣವಾಗಿ ಧರ್ಮಸ್ಥಳದ ಪರ ಇದ್ದೇವೆ. ಶೀಘ್ರದಲ್ಲೇ ಧರ್ಮಸ್ಥಳಕ್ಕೆ ಭೇಟಿ ಮಾಡಲಾಗುವುದು’ ಎಂದರು.
ಪುರಸಭೆ ಅಧ್ಯಕ್ಷೆ ನೀಲವ್ವ ವಡ್ಡಿಗೇರಿ, ಉಮೇಶಗೌಡ ಪಾಟೀಲ, ಎಸ್.ಆರ್.ಪಾಟೀಲ, ಶಿವಾನಂದ ಮುತವಾಡ, ಮಲ್ಲಪ್ಪ ಮೇಟಿ, ಚಂದ್ರು ದಂಡಿನ, ಬಾಪುಗೌಡ ತಿಮ್ಮನಗೌಡ್ರ, ಹನಮಂತ ಹವಾಲ್ದಾರ, ವಿಜಯ ಬೇಲೇರಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.