ADVERTISEMENT

ಸೈನಿಕರ ಶ್ರೇಯೋಭಿವೃದ್ಧಿ ಬಯಸಿ: ಸಚಿವ ಎಚ್.ಕೆ.ಪಾಟೀಲ

ಸೈನಿಕ ಸಮುದಾಯ ಭವನ ಹಾಗೂ ತರಬೇತಿ ಕೇಂದ್ರದ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2025, 5:07 IST
Last Updated 4 ನವೆಂಬರ್ 2025, 5:07 IST
ಗದುಗಿನ ಆದಿತ್ಯ ನಗರದಲ್ಲಿ ಗದಗ ಜಿಲ್ಲಾ ಮಾಜಿ ಸೈನಿಕರ ಸಂಘದ ನೂತನ ಸೈನಿಕ ಸಮುದಾಯ ಭವನ ಹಾಗೂ ತರಬೇತಿ ಕೇಂದ್ರವನ್ನು ಸಚಿವ ಎಚ್‌.ಕೆ.ಪಾಟೀಲ ಉದ್ಘಾಟಿಸಿದರು
ಗದುಗಿನ ಆದಿತ್ಯ ನಗರದಲ್ಲಿ ಗದಗ ಜಿಲ್ಲಾ ಮಾಜಿ ಸೈನಿಕರ ಸಂಘದ ನೂತನ ಸೈನಿಕ ಸಮುದಾಯ ಭವನ ಹಾಗೂ ತರಬೇತಿ ಕೇಂದ್ರವನ್ನು ಸಚಿವ ಎಚ್‌.ಕೆ.ಪಾಟೀಲ ಉದ್ಘಾಟಿಸಿದರು   

ಗದಗ: ‘ದೇಶದ ರಕ್ಷಣೆ ಮತ್ತು ಹಿತ ಕಾಪಾಡುವಲ್ಲಿ ಸೈನಿಕರು ಹಗಲಿರುಳು ಜೀವದ ಹಂಗು ತೊರೆದು ದಕ್ಷತೆಯಿಂದ ಕಾರ್ಯ ಮಾಡುತ್ತಿದ್ದಾರೆ. ಅವರಿಗೆ ನೈತಿಕ ಬಲ, ಆತ್ಮಸ್ಥೈರ್ಯ ತುಂಬುವ ಮೂಲಕ ನಾವು ಸದಾವಕಾಲ ಸೈನಿಕರ ಶ್ರೇಯೋಭಿವೃದ್ಧಿ ಬಯಸಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ ಹೇಳಿದರು.

ಇಲ್ಲಿನ ಆದಿತ್ಯ ನಗರದಲ್ಲಿ ಗದಗ ಜಿಲ್ಲಾ ಮಾಜಿ ಸೈನಿಕರ ಸಂಘದ ನೂತನ ಸೈನಿಕ ಸಮುದಾಯ ಭವನ ಹಾಗೂ ತರಬೇತಿ ಕೇಂದ್ರ ಉದ್ಘಾಟಿಸಿ ಮಾತನಾಡಿದರು.

‘ಸರ್ಕಾರ ನೀಡುವ ಅನುದಾನವನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳುವ ಮೂಲಕ ದಾನಿಗಳಿಂದ ದೇಣಿಗೆ ಸಂಗ್ರಹಿಸಿ, ಸೈನಿಕ ಸಮುದಾಯ ಭವನ ಹಾಗೂ ತರಬೇತಿ ಕೇಂದ್ರವನ್ನು ರಾಜ್ಯದಲ್ಲಿಯೇ ಮಾದರಿ ಎನ್ನುವಂತೆ ನಿರ್ಮಾಣಗೊಳಿಸಿದ್ದು ಅಭಿನಂದನೀಯ’ ಎಂದರು.

ADVERTISEMENT

ಈ ಸಂಘದ ಸರ್ವ ಸದಸ್ಯರು ಒಗ್ಗಟ್ಟಿನಿಂದ ಕಟ್ಟಡವನ್ನು ಸದ್ಭಳಕೆ ಮಾಡಿಕೊಳ್ಳಬೇಕು. ಯುವಕರನ್ನು ಇಲ್ಲಿ ಸೈನಿಕ ಭರ್ತಿಗೆ ತರಬೇತುಗೊಳಿಸುವ ಕಾರ್ಯ ನಿರಂತರವಾಗಿ ನಡೆಯುವಂತಾಗಲಿ ಎಂದರು.

ಮುಖ್ಯ ಅತಿಥಿ ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರ ಮಾತನಾಡಿ, ‘ಪ್ರತಿಯೊಬ್ಬ ನಾಗರಿಕನೂ ಸೈನಿಕ, ರೈತ ಹಾಗೂ ಶಿಕ್ಷಕನನ್ನು ಮರೆಯುವಂತಿಲ್ಲ. ಸುಭದ್ರ ದೇಶವಾಗಿ ನಿರ್ಮಾಣಗೊಳ್ಳುವಲ್ಲಿ ಈ ಮೂವರ ಪಾತ್ರ ಅತ್ಯಂತ ಮಹತ್ವದ್ದಾಗಿದೆ’ ಎಂದರು.

‘ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಲ್ಲಿ ದೇಶಭಕ್ತಿ, ದೇಶಾಭಿಮಾನ ಬೆಳೆಸುವ ರೀತಿಯಲ್ಲಿ ಯುವಪಡೆಯನ್ನು ಸೈನ್ಯಕ್ಕೆ ಸೇರಲು ತರಬೇತಿ ಮಾರ್ಗದರ್ಶನ ನೀಡಲು ಸಂಘವು ಅಗತ್ಯ ಕ್ರಮ ಕೈಗೊಳ್ಳಲಿ’ ಎಂದರು.

ಓಂಕಾರೇಶ್ವರ ಹಿರೇಮಠದ ಫಕೀರೇಶ್ವರ ಪಟ್ಟಾಧ್ಯಕ್ಷರು ಸಾನ್ನಿಧ್ಯ ವಹಿಸಿದ್ದರು.

ಎಸ್.ಆರ್.ಪಾಟೀಲ ಸ್ವಾಗತಿಸಿದರು. ಸುಧೀರಸಿಂಹ ಘೋರ್ಪಡೆ ನಿರೂಪಿಸಿದರು. ಸಂಘದ ಅಧ್ಯಕ್ಷ ಜಿ.ಬಿ.ಮಾಲಗಿತ್ತಿಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಸಿ.ಜಿ.ಸೊನ್ನದ ವಂದಿಸಿದರು.

ಕಾರ್ಯಕ್ರಮದಲ್ಲಿ ಎಸ್.ಎಫ್.ಹೊನ್ನಪ್ಪನವರ, ಸಂಘಟನಾ ಕಾರ್ಯದರ್ಶಿ ಈರಣ್ಣ ತಳ್ಳಿಕೇರಿ, ಸಹ ಕಾರ್ಯದರ್ಶಿ ಮಹೇಶ ಆಶಿ, ಮಹಮ್ಮದಹನೀಫ್ ಶೇಖಬಾಯಿ, ನಿರ್ದೆಶಕರಾದ ಬಿ.ವ್ಹಿ.ಅಬ್ಬಿಗೇರಿ, ಎಚ್.ಬಿ.ಜಂಗಣ್ಣವರ, ಲಲಿತಾ ಕುರಹಟ್ಟಿ, ಶರಣಪ್ಪ ಸರ್ವಿ, ವೀರಪ್ಪ ಬಿಂಗಿ, ಶಿವಲೀಲಾ ಬಾವಿಕಟ್ಟಿ, ಕೆ.ಎಸ್.ಹಿರೇಮಠ, ಎ.ಎಂ.ತಹಶೀಲ್ದಾರ, ರಘುನಾಥರೆಡ್ಡಿ ಶೆಟ್ರಡ್ಡಿ, ಬಿ.ಬಿ.ಅರವಡಗಿಮಠ, ಚನ್ನಯ್ಯ ಬಳಗಾನೂರಮಠ, ಎಸ್.ಎಸ್.ವಡ್ಡಿನ, ಬಸನಗೌಡ ಪಾಟೀಲ, ಎಸ್.ಎಂ.ಮಡಿವಾಳರ, ಮೀನಾಕ್ಷಿ ಬದಿ, ಶಂಕರಗೌಡ ಪಾಟೀಲ, ದ್ರಾಕ್ಷಾಯಣಿ ಲಕ್ಕುಂಡಿ ಇದ್ದರು. 

ಮಾಜಿ ಸೈನಿಕರಿಗೂ ಟಿಕೆಟ್ ಕೊಡಿ

‘ಸಂಘದಲ್ಲಿ ಒಗ್ಗಟ್ಟು ಬಲಗೊಳ್ಳಬೇಕು ಅಂದಾಗ ಮಾತ್ರ ಬೇಕು ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಸಾಧ್ಯ’ ಎಂದು ಅಧ್ಯಕ್ಷತೆ ವಹಿಸಿದ್ದ ನಿವೃತ್ತ ವಾಯು ಸೇನಾಧಿಕಾರಿ ಸಿ.ಎಸ್.ಹವಾಲ್ದಾರ ಹೇಳಿದರು. ‘ಮಾಜಿ ಸೈನಿಕರಿಗೆ ಸರ್ಕಾರದಿಂದ ಸಿಗಬೇಕಾದ ಸೌಲಭ್ಯಗಳು ಸಹಜವಾಗಿ ಮತ್ತು ಸಕಾಲಕ್ಕೆ ದೊರೆಯುತ್ತಿಲ್ಲ ಆ ಕೆಲಸ ಆಗಬೇಕು. ಮಾಜಿ ಸೈನಿಕರನ್ನು ಹಾಡಿ ಹೊಗಳಿದರೆ ಸಾಲದು; ಅವರಿಗೆ ಯೋಗ್ಯ ಸ್ಥಾನಮಾನಗಳು ಲಭ್ಯವಾಗಬೇಕು. ಮಾಜಿ ಸೈನಿಕರಿಗೆ ಶೇ 10 ಮೀಸಲಾತಿ ಇದ್ದು ಅದು ಪ್ರಾಮಾಣಿಕವಾಗಿ ಅನುಷ್ಠಾನಗೊಳ್ಳಬೇಕು. ಮಾಜಿ ಸೈನಿಕರಿಗೂ ರಾಜಕಾರಣದಲ್ಲಿ ಎಂಎಲ್ಎ ಎಂಎಲ್‌ಸಿ ಅಭ್ಯರ್ಥಿಯಾಗಲು ಅವಕಾಶ ದೊರೆಯಬೇಕು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.