ADVERTISEMENT

ಉತ್ತಮ ಶಿಕ್ಷಣ ಕೊಡಿಸಿ ಸ್ಫೂರ್ತಿ ತುಂಬಿ

ಪೌರಕಾರ್ಮಿಕರ ದಾನಾಚರಣೆ; ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಯತೀಶ್‌ ಎನ್‌. ಸಲಹೆ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2021, 16:25 IST
Last Updated 23 ಸೆಪ್ಟೆಂಬರ್ 2021, 16:25 IST
ಗದಗ ಬೆಟಗೇರಿ ನಗರಸಭೆ ಆವರಣದಲ್ಲಿ ಗುರುವಾರ ನಡೆದ ಪೌರಕಾರ್ಮಿಕರ ದಿನಾಚರಣೆಯಲ್ಲಿ ಎಸ್‌ಪಿ ಯತೀಶ್‌ ಎನ್‌. ಗಿಡಕ್ಕೆ ನೀರುಣಿಸಿದರು. ಜಿಲ್ಲಾಧಿಕಾರಿ ಎಂ.ಸುಂದರೇಶ್‌ ಬಾಬು ಇದ್ದಾರೆ
ಗದಗ ಬೆಟಗೇರಿ ನಗರಸಭೆ ಆವರಣದಲ್ಲಿ ಗುರುವಾರ ನಡೆದ ಪೌರಕಾರ್ಮಿಕರ ದಿನಾಚರಣೆಯಲ್ಲಿ ಎಸ್‌ಪಿ ಯತೀಶ್‌ ಎನ್‌. ಗಿಡಕ್ಕೆ ನೀರುಣಿಸಿದರು. ಜಿಲ್ಲಾಧಿಕಾರಿ ಎಂ.ಸುಂದರೇಶ್‌ ಬಾಬು ಇದ್ದಾರೆ   

ಗದಗ: ‘ಉತ್ತಮ ಶಿಕ್ಷಣ ಪಡೆದು ಉನ್ನತ ಸ್ಥಾನದಲ್ಲಿರುವ ಪೌರಕಾರ್ಮಿಕರ ಮಕ್ಕಳು ಆದರ್ಶವಾಗಬೇಕು. ಪ್ರತಿಯೊಬ್ಬ ಪೌರಕಾರ್ಮಿಕರು ಕೂಡ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ ಇತರರಲ್ಲೂ ಸ್ಫೂರ್ತಿ ತುಂಬಬೇಕು’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಯತೀಶ್‌ ಎನ್‌. ಹೇಳಿದರು.

ಗದಗ ಬೆಟಗೇರಿ ನಗರಸಭೆ ಆವರಣದಲ್ಲಿ ಗುರುವಾರ ನಡೆದ ಪೌರಕಾರ್ಮಿಕರ ದಿನಾಚರಣೆಯಲ್ಲಿ ಅವರು ಮಾತನಾಡಿದರು.

‘ಪೊಲೀಸರು ಮತ್ತು ಪೌರಕಾರ್ಮಿಕರು ದಿನದ 24 ಗಂಟೆಯೂ ಕೆಲಸ ಮಾಡಬೇಕಿದೆ. ಹಬ್ಬ ಹರಿದಿನಗಳೆಂದು ನಾವು ಮನೆಯಲ್ಲಿ ಉಳಿದುಕೊಂಡರೆ ಹೊರಗಿನ ಅಂದರೆ ಸಾಮಾಜಿಕ ಸ್ವಾಸ್ಥ್ಯ, ಕಾನೂನು ಸುವ್ಯವಸ್ಥೆ, ನೈರ್ಮಲ್ಯ ಮೊದಲಾದವುಗಳು ಅಸ್ತವ್ಯಸ್ತಗೊಳ್ಳುತ್ತವೆ’ ಎಂದು ಹೇಳಿದರು.

ADVERTISEMENT

‘ಕೋವಿಡ್‌ ಬಿಕ್ಕಟ್ಟಿನ ಸಂದರ್ಭದಲ್ಲಿ ಬದ್ಧತೆಯಿಂದ ಕೆಲಸ ನಿರ್ವಹಿಸಿದ ಎಲ್ಲ ಪೌರಕಾರ್ಮಿಕರಿಗೂ ಅಭಿನಂದನೆ ಸಲ್ಲಿಸುವೆ. ಆದರೆ, ಎಲ್ಲ ಪೌರಕಾರ್ಮಿಕರು ಆರೋಗ್ಯ ಕಾಳಜಿ ಮಾಡಿಕೊಳ್ಳಬೇಕು. ಕೆಲಸ ಮಾಡುವ ಜಾಗ, ಒತ್ತಡ ಮೊದಲಾದ ಕಾರಣಗಳಿಂದ ಹೆಚ್ಚಿನ ಪೌರಕಾರ್ಮಿಕರು ಕುಡಿತದ ಚಟಕ್ಕೆ ಬಲಿಯಾಗುತ್ತಿದ್ದಾರೆ. ಮದ್ಯಪಾನ, ಮಾದಕ ವಸ್ತುಗಳ ಚಟಕ್ಕೆ ಬಲಿಯಾಗದೇ ಮಕ್ಕಳನ್ನು ಚೆನ್ನಾಗಿ ಓದಿಸಿ, ಉತ್ತಮ ನಾಗರಿಕರನ್ನಾಗಿ ಮಾಡಬೇಕು’ ಎಂದು ಹೇಳಿದರು.

ಜಿಲ್ಲಾಧಿಕಾರಿ ಎಂ.ಸುಂದರೇಶ್‌ ಬಾಬು ಮಾತನಾಡಿ, ‘ಚಳಿ, ಮಳೆ, ಗಾಳಿ, ಬಿಸಿಲು ಲೆಕ್ಕಿಸದೇ ಕೆಲಸ ಮಾಡುವ ಪೌರಕಾರ್ಮಿಕರ ಬದ್ಧತೆಯಿಂದಲೇ ಗ್ರಾಮ, ಪಟ್ಟಣ, ನಗರಗಳು ಸ್ವಚ್ಛವಾಗಿವೆ. ಪೌರಕಾರ್ಮಿಕರು ಒಂದು ವಾರ ಸ್ವಚ್ಛತೆ ಕೆಲಸ ಮಾಡದಿದ್ದರೆ ಜನಜೀವನ ಅಸ್ತವ್ಯಸ್ತಗೊಳ್ಳುತ್ತದೆ’ ಎಂದು ಹೇಳಿದರು.

‘ಪ್ರತಿಯೊಂದು ವೃತ್ತಿಯಲ್ಲೂ ಒತ್ತಡ ಇರುತ್ತದೆ. ಆದರೂ, ಪೌರಕಾರ್ಮಿಕರು ದೇಹಾರೋಗ್ಯಕ್ಕಾಗಿ ದಿನನಿತ್ಯ ಸ್ವಲ್ಪ ಸಮಯ ಮೀಸಲಿಡಬೇಕು. ಆರೋಗ್ಯ ರಕ್ಷಣೆ ವಿಷಯದಲ್ಲಿ ನಿರ್ಲಕ್ಷ್ಯ ಸಲ್ಲದು. ದಿನದ 24 ಗಂಟೆಗಳಲ್ಲಿ ಯಾವುದಾದರೂ ಒಂದು ಸಮಯದಲ್ಲಿ ದೈಹಿಕ ಚಟುವಟಿಕೆ ಮಾಡಬೇಕು. ನಿರಂತರವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

‘ಪೌರಕಾರ್ಮಿಕರು ಕೆಲಸದ ಜತೆಗೆ ಕುಟುಂಬಕ್ಕೂ ಸಮಯ ಮೀಸಲಿಡಬೇಕು. ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಬೇಕು. ಅವರಿ ಕನಿಷ್ಠ ಪದವಿವರೆಗೆ ಶಿಕ್ಷಣ ಕೊಡಿಸಿ, ಸರ್ಕಾರಿ ಉದ್ಯೋಗಕ್ಕೆ ಸೇರುವಂತೆ ಪ್ರೋತ್ಸಾಹಿಸಬೇಕು’ ಎಂದು ಹೇಳಿದರು.

‘ಮುಂಜಾಗ್ರತೆ ವಹಿಸಿ ಕೆಲಸ ನಿರ್ವಹಿಸಿ’

‘ಒಬ್ಬ ಸಾಮಾನ್ಯ ಮನುಷ್ಯನ ಸರಾಸರಿ ಜೀವಿತಾವಧಿಗಿಂತ ಪೌರಕಾರ್ಮಿಕರು ಬೇಗನೇ ಮೃತಪಡುತ್ತಿದ್ದಾರೆ. ಮುಂಜಾಗ್ರತಾ ಕ್ರಮಗಳನ್ನು ವಹಿಸದೇ ಕೆಲಸ ನಿರ್ವಹಿಸುವುದೇ ಇದಕ್ಕೆ ಮುಖ್ಯ ಕಾರಣ’ ಎಂದು ಜಿಲ್ಲಾಧಿಕಾರಿ ಎಂ.ಸುಂದರೇಶ್‌ ಬಾಬು ಹೇಳಿದರು.

‘ಆರೋಗ್ಯದ ಬಗ್ಗೆ ಕಾಳಜಿ ಮಾಡದೇ ಕೆಲಸ ನಿರ್ವಹಿಸಿದರೆ ಚಿಕ್ಕ ವಯಸ್ಸಿನಲ್ಲಿಯೇ ವಿವಿಧ ಕಾಯಿಲೆಗಳಿಗೆ ತುತ್ತಾಗಬೇಕಾಗುತ್ತದೆ. ಆದ್ದರಿಂದ, ಪೌರಕಾರ್ಮಿಕರು ಸರ್ಕಾರ ನೀಡುವ ಸುರಕ್ಷಾ ಪರಿಕರಗಳನ್ನು ಬಳಸಿಕೊಂಡು ಕೆಲಸ ನಿರ್ವಹಿಸಬೇಕು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.