ADVERTISEMENT

ಧರ್ಮ ಮನುಷ್ಯನ ಒಳಿತನ್ನು ಬಯಸಬೇಕು: ನಿಜಗುಣಪ್ರಭು ತೋಂಟದಾರ್ಯ ಸ್ವಾಮಿ

​ಪ್ರಜಾವಾಣಿ ವಾರ್ತೆ
Published 28 ಜೂನ್ 2023, 13:01 IST
Last Updated 28 ಜೂನ್ 2023, 13:01 IST
ಮುಂಡರಗಿಯ ಜಗದ್ಗುರು ತೋಂಟದಾರ್ಯ ಶಾಖಾ ಮಠದಲ್ಲಿ ನಿಜಗುಣಪ್ರಭು ತೋಂಟದಾರ್ಯ ಸ್ವಾಮಿಜಿ ಅವರು ವಿಶ್ವಧರ್ಮ ಪ್ರವಚನ ನೀಡಿದರು
ಮುಂಡರಗಿಯ ಜಗದ್ಗುರು ತೋಂಟದಾರ್ಯ ಶಾಖಾ ಮಠದಲ್ಲಿ ನಿಜಗುಣಪ್ರಭು ತೋಂಟದಾರ್ಯ ಸ್ವಾಮಿಜಿ ಅವರು ವಿಶ್ವಧರ್ಮ ಪ್ರವಚನ ನೀಡಿದರು   

ಮುಂಡರಗಿ: ಉಪಾಸನಾ ವಿಧಾನಗಳು ಧರ್ಮಕ್ಕೆ ತಳಪಾಯವಾಗಿದ್ದು, ಒಂದೊಂದು ಧರ್ಮದಲ್ಲಿ ಒಂದೊಂದು ರೀತಿಯ ಉಪಾಸನಾ ಪದ್ಧತಿಗಳಿವೆ. ಧರ್ಮವು ಜಾತಿ, ಮತ, ಪಂತಗಳನ್ನು ಮೀರಿದ್ದು, ಅದು ಕೇವಲ ಮನುಷ್ಯನ ಒಳಿತನ್ನು ಮಾತ್ರ ಬಯಸುತ್ತದೆ. ಅಂತಹ ಏಕರೂಪದ ಧರ್ಮಾಚರಣೆಯನ್ನು ಬಸವಣ್ಣ ಜಗತ್ತಿಗೆ ಬೋಧಿಸಿದನು ಎಂದು ನಿಜಗುಣಪ್ರಭು ತೋಂಟದಾರ್ಯ ಸ್ವಾಮಿಗಳು ಹೇಳಿದರು.

ಪಟ್ಟಣದ ಜಗದ್ಗುರು ತೋಂಟದಾರ್ಯ ಶಾಖಾ ಮಠದಲ್ಲಿ ಹಮ್ಮಿಕೊಂಡಿರುವ ವಿಶ್ವಧರ್ಮ ಪ್ರವಚನದಲ್ಲಿ ಮಂಗಳವಾರ ಮಾತನಾಡಿದರು.

ಒಂದು ಜಾತಿ ಅಥವಾ ಒಂದು ಪಂಗಡದ ಗುರುಗಳು ಹೇಳಿರುವುದನ್ನು ಅನುಷ್ಠಾನಕ್ಕೆ ತರುವುದು ಪಂತ. ಪಂತ ಭಾವಿಯೊಳಗಿನ ನೀರಾಗಿದ್ದು, ಅದು ಸದಾ ನಿಂತಲ್ಲಿಯೆ ನಿಂತಿರುತ್ತದೆ. ಧರ್ಮ ಮಳೆ ಬಂದಾಗ ಹರಿದಾಡುವ ನೀರಿನಂತಿದ್ದು, ಅದು ಸದಾ ಚಲನಶೀಲವಾಗಿರುತ್ತದೆ. ಧರ್ಮ ಒಂದು ನಿಶ್ಚಿತ ಸಿದ್ಧಾಂತದ ಮೇಲೆ ರಚಿತವಾಗಿರುತ್ತದೆ. ಅಂತಹ ಧರ್ಮ ಶಾಶ್ವತವಾಗಿರುತ್ತದೆ ಎಂದು ಹೇಳಿದರು.

ADVERTISEMENT

ಧರ್ಮ ಮತ್ತು ರಾಷ್ಟ್ರೀಯತೆ ಬೇರೆ-ಬೇರೆಯಾಗಿವೆ. ಧರ್ಮಗಳು ವಿಭಿನ್ನವಾಗಿರುತ್ತವೆ. ಧರ್ಮದಲ್ಲಿ ಆಚಾರ ಪ್ರಧಾನವಾಗಿರಬೇಕು. ದೇಶ ಸದಾ ಒಗ್ಗಟ್ಟಿನಿಂದ ಇರಬೇಕಾದರೆ ಎಲ್ಲರೂ ರಾಷ್ಟ್ರಭಕ್ತರಾಗಿರಬೇಕು. ಆಚಾರ-ವಿಚಾರ ಮತ್ತು ಮನಸ್ಸುಗಳು ಒಂದಾಗಿರಬೇಕು. ನನಗಿಂತ ತತ್ವ ದೊಡ್ಡದು ಎನ್ನುವ ಭಾವನೆ ಮೂಡಬೇಕು. ಅಂತಹ ವಿಶಿಷ್ಟವಾದ ಧರ್ಮ ಸಂಸತ್ತನ್ನು ಬಸವಣ್ಣನವರು ಈ ಜಗತ್ತಿಗೆ ಕೊಟ್ಟರು ಎಂದು ತಿಳಿಸಿದರು.

ಬಸವಣ್ಣ ರಾಷ್ಟ್ರ ಕಟ್ಟುವಲ್ಲಿ ಪ್ರಮುಖ ಪಾತ್ರವಹಿಸಿದವರು. ಅಪಘಾನಿಸ್ತಾನ ಮತ್ತು ನೇಪಾಳದಿಂದ ಜನರನ್ನು ಕರೆತಂದು ಅವರಿಗೆ ಶರಣ ಧರ್ಮ ಭೋಧಿಸಿದ ಕೀರ್ತಿ ಬಸವಣ್ಣನವರಿಗೆ ಸಲ್ಲುತ್ತದೆ. ಶರಣ ಧರ್ಮ ಸಂಸ್ಕೃತಿ ಮತ್ತು ಸಂಸ್ಕಾರವನ್ನು ಕಲಿಸುತ್ತದೆ. ದೇಶಕ್ಕೆ ಬೇಕಾಗಿರುವುದು ಬಸವಣ್ಣನವರು ಪ್ರತಿಪಾದಿಸಿದ ಅಷ್ಟಾವರಣ, ಷಟಸ್ಥಳ ಮತ್ತು ಪಂಚಾಚಾರಗಳ ಸಿದ್ದಾಂತಗಳು ಎಂದು ತಿಳಿಸಿದರು.

ಸಂಗಮೇಶ ಪಾಟೀಲ ಹಾಗೂ ಬಸವರಾಜ ಹೊನ್ನಿಗನೂರು ಸಂಗೀತ ಸೇವೆ ನಡೆಸಿಕೊಟ್ಟರು.

ಪ್ರವಚನ ಸೇವಾ ಸಮಿತಿ ಅಧ್ಯಕ್ಷ ಪವನ ಚೋಪ್ರಾ, ಉಪಾಧ್ಯಕ್ಷ ಓಂಪ್ರಕಾಶ ಲಿಂಗಶಟ್ಟರ, ಕಾರ್ಯದರ್ಶಿ ದೇವು ಹಡಪದ, ಸಹ ಕಾರ್ಯದರ್ಶಿ ವೀರೇಂದ್ರ ಅಂಗಡಿ, ಕಜಾಂಚಿ ಶಿವಕುಮಾರ ಬೆಟಗೇರಿ, ತೋಂಟದಾರ್ಯ ಸೇವಾ ಸಮಿತಿ ಅಧ್ಯಕ್ಷ ಎಚ್.ವಿರೂಪಾಕ್ಷಗೌಡ, ಕೊಟ್ರೇಶಪ್ಪ ಅಂಗಡಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.