
ರೋಣ: ‘ಮುಂಬರುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ರೋಣ ಹಾಗೂ ಗಜೇಂದ್ರಗಡ ತಾಲ್ಲೂಕಿನ ಪ್ರತಿ ಮಗುವು ಗುಣಾತ್ಮಕ ಫಲಿತಾಂಶದೊಂದಿಗೆ ಯಶಸ್ಸು ಸಾಧಿಸಲಿ’ ಎಂದು ಗದಗ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಆರ್.ಎಸ್.ಬುರಡಿ ಹೇಳಿದರು.
ಪಟ್ಟಣದ ಗುರುಭವನದಲ್ಲಿ ಗುರುವಾರ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ರೋಣ ಹಾಗೂ ಗಜೇಂದ್ರಗಡ ತಾಲ್ಲೂಕುಗಳ ಪ್ರೌಢಶಾಲಾ ಮುಖ್ಯಶಿಕ್ಷಕರಿಗೆ ಆಯೋಜಿಸಲಾದ ವಿಶೇಷ ಕಾರ್ಯಗಾರ ಉದ್ಘಾಟಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಎಸ್ ಎಸ್ ಎಲ್ ಸಿ ಪೂರ್ವ ಸಿದ್ಧತಾ ಪರೀಕ್ಷೆ ಒಂದರ ಫಲಿತಾಂಶ ವಿಶ್ಲೇಷಣೆ ಹಾಗೂ ಮುಂದಿನ ದಿನಗಳಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಪ್ರಸ್ತಾಪಿಸಿದ ಅವರು ವಿದ್ಯಾರ್ಥಿ ಪ್ರಗತಿ ಅನುಪಾಲನಾ ಪರಿಶೀಲನೆ ನಮೂನೆ, ಆದ್ಯತಾವಾರು ಪರಿಕಲ್ಪನೆಗಳನ್ನು ಪ್ರತಿದಿನ ರೂಢಿಸು ಕೊಳ್ಳುವ ಜೊತೆಗೆ ಇಲಾಖೆ ನೀಡಿರುವ 40 ಪ್ಲಸ್ ಪರಿಕಲ್ಪನೆ ಕಲಿಕಾಂಶಗಳನ್ನು ಪರಿಣಾಮಕಾರಿಯಾಗಿ ಶಾಲಾ ಹಂತದಲ್ಲಿ ಅನುಷ್ಠಾನಗೊಳಿಸುವ ಸಂಬಂಧ ಶಿಕ್ಷಕರಿಗೆ ಮಾಹಿತಿ ನೀಡಿದರು.
ಖಾಲಿ ಇರುವ ವಿಷಯವಾರು ಶಿಕ್ಷಕ ಹುದ್ದೆಗಳಿಗೆ ನುರಿತ ಅನುಭವಿ ಶಿಕ್ಷಕರನ್ನು ನಿಯೋಜಿಸಿ ಪಾಠ ಬೋಧನೆಯನ್ನು ಕೈಗೊಳ್ಳಲು ಸೂಚಿಸಿದ ಅವರು ಸಾಯಂಕಾಲ ವಿದ್ಯಾರ್ಥಿಗಳನ್ನು ಗುಂಪು ಅಧ್ಯಯನ ಚಟುವಟಿಕೆಯಲ್ಲಿ ತೊಡಗಿಸಲು ಹಾಗೂ ಶೈಕ್ಷಣಿಕ ತಂತ್ರಜ್ಞಾನ ಸಾಮಗ್ರಿಗಳನ್ನು ಬಳಸಿ ಬೋಧನೆ ಮಾಡಲು ಸೂಚಿಸಿದರು.
ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ದಿನಾಂಕ 22 ರಿಂದ ಫೋನ್ - ಇನ್ ಕಾರ್ಯಕ್ರಮ ಯಶಸ್ವಿಯಾಗಿ ಜಿಲ್ಲೆಯಾದ್ಯಂತ ಆಯೋಜಿಸಲಾಗಿದ್ದು ಪರೀಕ್ಷಾ ಸಿದ್ಧತೆಗಳನ್ನು ಮತ್ತಷ್ಟು ಬಲಪಡಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು.
ಕಾರ್ಯಗಾರದಲ್ಲಿ ರೋಣ ಕ್ಷೇತ್ರ ಶಿಕ್ಷಣಾಧಿಕಾರಿ ಅರ್ಜುನ ಕಂಬೋಗಿ, ನೋಡಲ್ ಅಧಿಕಾರಿ ಎಚ್.ಬಿ.ರೆಡ್ಡೇರ, ಸಮನ್ವಯಾಧಿಕಾರಿ ಎಂ.ಎ.ಫಣಿಬಂಧ, ಅಕ್ಷರ ದಾಸೋಹ ಅಧಿಕಾರಿ ಆರ್.ಎಲ್.ನಾಯ್ಕರ್, ಡಿ.ಬಿ.ಬಿರಾದಾರ, ಮಲ್ಲನಗೌಡ ಪಾಟೀಲ ಸೇರಿದಂತೆ ರೋಣ ಹಾಗೂ ಗಜೇಂದ್ರಗಡ ತಾಲ್ಲೂಕುಗಳ ಎಲ್ಲ ಪ್ರೌಢ ಶಾಲೆಗಳ ಮುಖ್ಯೋಪಾಧ್ಯಾಯರು ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.