ADVERTISEMENT

ಲಕ್ಷೇಶ್ವರ: ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಹೆಚ್ಚಳಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2025, 5:09 IST
Last Updated 8 ಆಗಸ್ಟ್ 2025, 5:09 IST
ಲಕ್ಷ್ಮೇಶ್ವರದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆಗೆ ಬಂದ ರೋಗಿಗಳು ಸಾಲಲ್ಲಿ ನಿಂತು ಚೀಟಿ ಪಡೆದರು
ಲಕ್ಷ್ಮೇಶ್ವರದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆಗೆ ಬಂದ ರೋಗಿಗಳು ಸಾಲಲ್ಲಿ ನಿಂತು ಚೀಟಿ ಪಡೆದರು   

ಲಕ್ಷೇಶ್ವರ: ಎರಡು ವಾರಗಳಿಂದ ತಾಲ್ಲೂಕಿನಲ್ಲಿ ಪ್ರತಿಕೂಲ ವಾತಾವರಣ ಇದ್ದು, ಆರೋಗ್ಯ ತಪಾಸಣೆಗಾಗಿ ಜನರು ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಎಡತಾಕುತ್ತಿದ್ದಾರೆ.

ತಾಲ್ಲೂಕಿನ ಬಾಲೆಹೊಸೂರು, ಸೂರಣಗಿ, ಯಳವತ್ತಿ, ಶಿಗ್ಲಿ ಗ್ರಾಮಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಇದ್ದರೂ ಹಲವು ಕಾರಣಗಳಿಗಾಗಿ ಜನರು ಇಲ್ಲಿನ ಸಮುದಾಯ ಕೇಂದ್ರಕ್ಕೆ ಬರುತ್ತಿದ್ದಾರೆ. ಇದರಿಂದಾಗಿ ಆಸ್ಪತ್ರೆಯಲ್ಲಿ ರೋಗಿಗಳು ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಅದರಲ್ಲೂ ಹೃದ್ರೋಗದ ಪ್ರಕರಣಗಳು ವರದಿ ಆದ ನಂತರ ಆಸ್ಪತ್ರೆಗೆ ಬರುವವರ ಸಂಖ್ಯೆ ಹೆಚ್ಚಿದೆ.

ಲಕ್ಷ್ಮೇಶ್ವರ ಸೇರಿದಂತೆ ಸುತ್ತಲಿನ ಹತ್ತಾರು ಗ್ರಾಮಗಳಿಂದ ಪ್ರತಿದಿನ ನೂರಾರು ಜನರು ಆರೋಗ್ಯ ತಪಾಸಣೆ ಮತ್ತು ಚಿಕಿತ್ಸೆ ಪಡೆಯಲೆಂದು ಲಕ್ಷ್ಮೇಶ್ವರದ ಆಸ್ಪತ್ರೆಗೆ ಬರುತ್ತಾರೆ. ಈ ಸಂಖ್ಯೆ ಸಂತೆಯ ದಿನವಾದ ಶುಕ್ರವಾರ ಹಾಗೂ ಸೋಮವಾರ ದ್ವಿಗುಣ ಆಗುತ್ತದೆ. ನಿತ್ಯ 400ಕ್ಕೂ ಹೆಚ್ಚು ಜನರು ಆರೋಗ್ಯ ತಪಾಸಣೆ ಮತ್ತು ಚಿಕಿತ್ಸೆಗಾಗಿ ಬರುತ್ತಾರೆ. ಕೆಲವು ಬಾರಿ ಒಮ್ಮೆಲೇ ಜನರು ಬರುವುದರಿಂದ ಪ್ರವೇಶ ಚೀಟಿ ಬರೆದುಕೊಡಲು ಸಹ ಸಿಬ್ಬಂದಿಗೆ ತೊಂದರೆ ಆಗುತ್ತಿದೆ. ಅದರಲ್ಲೂ ಶುಕ್ರವಾರ ಮತ್ತು ಸೋಮವಾರ ರೋಗಿಗಳ ಸಂಖ್ಯೆ ಹೆಚ್ಚಾಗಿ ಚೀಟಿ ಕೊಡಲು ಇರುವ ಒಬ್ಬ ಸಿಬ್ಬಂದಿ ಪರದಾಡಬೇಕಾಗುತ್ತದೆ.

ADVERTISEMENT

‘ಆರೋಗ್ಯ ತಪಾಸಣೆ ಮಾಡಿಸಿಕೊಂಡು ಬೇರೆ ಬೇರೆ ಕೆಲಸಗಳನ್ನು ಮುಗಿಸಿಕೊಂಡು ಹೋಗುವ ಗ್ರಾಮೀಣ ಭಾಗದ ಜನರು ಆಸ್ಪತ್ರೆಯಲ್ಲಿ ಗದ್ದಲ ಇರುವಾಗ ತಪಾಸಣೆ ಮಾಡಿಸಿಕೊಳ್ಳಲು ತೊಂದರೆ ಅನುಭವಿಸುವ ಪರಿಸ್ಥಿತಿ ನಿರ್ಮಾಣ ಆಗುತ್ತದೆ. ಕಾರಣ ಪ್ರವೇಶಚೀಟಿ ಸುಲಭವಾಗಿ ಸಿಗಲು ಮತ್ತೊಬ್ಬ ಸಿಬ್ಬಂದಿ ವ್ಯವಸ್ಥೆ ಮಾಡಬೇಕು’ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಸದ್ಯ ಸಾಮಾನ್ಯ ಚಿಕಿತ್ಸೆಯೊಂದಿಗೆ ಶಸ್ತ್ರಚಿಕಿತ್ಸೆ, ದಂತ ಪರೀಕ್ಷೆ, ಕಣ್ಣಿನ ತಪಾಸಣೆ, ಡಯಾಲಿಸಿಸ್ ಸೇವೆಗಳು ಆಸ್ಪತ್ರೆಯಲ್ಲಿ ಲಭ್ಯ ಇರುವುದರಿಂದ ರೋಗಿಗಳು ಹೆಚ್ಚಾಗಿ ಇದೇ ಆಸ್ಪತ್ರೆಗೆ ಬರುವಮತಾಗಿದೆ.

ನಮ್ಮ ಆಸ್ಪತ್ರೆಗೆ ನಿತ್ಯ 400– 450 ಜನ ತಪಾಸಣೆ ಮತ್ತು ಚಿಕಿತ್ಸೆಗಾಗಿ ಬರುತ್ತಾರೆ. ಹೀಗಾಗಿ ಪ್ರವೇಶ ಚೀಟಿ ಕೊಡಲು ಮತ್ತೊಬ್ಬ ಸಿಬ್ಬಂದಿ ವ್ಯವಸ್ಥೆ ಮಾಡುತ್ತೇವೆ
ಡಾ. ಶ್ರೀಕಾಂತ ಕಾಟೆವಾಲೆ ಲಕ್ಷ್ಮೇಶ್ವರ ಸಮುದಾಯ ಆರೋಗ್ಯ ಕೇಂದ್ರದ ಆಡಳಿತಾಧಿಕಾರಿ
ಲಕ್ಷ್ಮೇಶ್ವರದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಪ್ರತಿದಿನ ನೂರಾರು ರೋಗಿಗಳು ಭೇಟಿ ನೀಡುತ್ತಾರೆ. ಕಾರಣ ಇನ್ನಷ್ಟು ವೈದ್ಯರು ಮತ್ತು ಅಗತ್ಯ ಸಿಬ್ಬಂದಿ ನೇಮಿಸಬೇಕು
ಪೂರ್ಣಾಜಿ ಖರಾಟೆ ನಿವೃತ್ತ ಶಿಕ್ಷಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.