ADVERTISEMENT

ಮಕ್ಕಳ ಕುಂಚದಲ್ಲಿ ಅರಳಿದ ಕಾಂತಾರ

ಸ್ಪರ್ಧೆಯಲ್ಲಿ ವಿಜೇತರಾದ 300 ಮಕ್ಕಳು ಬಿಡಿಸಿದ ಚಿತ್ರಗಳ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2022, 6:01 IST
Last Updated 6 ಡಿಸೆಂಬರ್ 2022, 6:01 IST
ಪ್ರಶಸ್ತಿ ವಿಜೇತ ಮಕ್ಕಳ ಚಿತ್ರಕಲಾಕೃತಿಗಳನ್ನು ವೀಕ್ಷಿಸಿದ ಸಚಿವ ಹಾಲಪ್ಪ ಆಚಾರ್‌
ಪ್ರಶಸ್ತಿ ವಿಜೇತ ಮಕ್ಕಳ ಚಿತ್ರಕಲಾಕೃತಿಗಳನ್ನು ವೀಕ್ಷಿಸಿದ ಸಚಿವ ಹಾಲಪ್ಪ ಆಚಾರ್‌   

ಗದಗ: ‘ಕಾಂತಾರ’ ಚಿತ್ರದ ದೈವ ನರ್ತಕ, ತನ್ನೂರಿನ ಆದರ್ಶ ಶಾಲೆ, ಪರಿಸರ, ದೇವರು, ಅತ್ಯಾಧುನಿಕ ನಗರಿಗಳು, ಶ್ರೀಕೃಷ್ಣ, ನಟ ಸಾರ್ವಭೌಮ ಡಾ. ರಾಜ್‌ಕುಮಾರ್‌, ‘ರಾಜರತ್ನ’ ಪುನೀತ್‌ರಾಜ್‌ಕುಮಾರ್‌, ಭಾರತದ ಸಂಸ್ಕೃತಿಯನ್ನು ಬಿಂಬಿಸುವ ವರ್ಣಚಿತ್ರಗಳು...

ಅರೆ! ಒಂದು ಚಿತ್ರಕಲಾ ಪ್ರದರ್ಶನದಲ್ಲಿ ಎಷ್ಟೆಲ್ಲಾ ವಿಷಯಗಳು ಸಂಗಮಿಸಿವೆ ಎಂದು ಕಲಾಪ್ರಿಯರು ಅಚ್ಚರಿಯಿಂದ ಕಣ್ತುಂಬಿಕೊಳ್ಳುತ್ತಿದ್ದ ದೃಶ್ಯಗಳು ಕಂಡು ಬಂದಿದ್ದು, ನಗರದ ವಿವೇಕಾನಂದ ಸಭಾಭವನದಲ್ಲಿ.

ಗದುಗಿನ ಬಣ್ಣದ ಮನೆಯವರು ಆಯೋಜಿಸಿದ್ದ ಚಿತ್ರಕಲಾ ಸ್ಪರ್ಧೆ ಬಹುತ್ವದ ಭಾರತಕ್ಕೆ ನಿದರ್ಶನದಂತಿತ್ತು. ರಾಜ್ಯದ ವಿವಿಧ ಜಿಲ್ಲೆಗಳ ಮಕ್ಕಳ ಕುಂಚದಲ್ಲಿ ಅರಳಿದ ಚಿತ್ರಗಳು ನೋಡುಗರ ಮೈಮರೆಸಿತ್ತು. ಸ್ಪರ್ಧೆಯಲ್ಲಿ ವಿಜೇತರಾದ 300 ಮಕ್ಕಳು ಬಿಡಿಸಿದ ಚಿತ್ರಗಳನ್ನು 20 ಮಳಿಗೆಗಳಲ್ಲಿ ಪ್ರದರ್ಶನಕ್ಕೆ ಇಡಲಾಗಿತ್ತು. ಇವುಗಳನ್ನು ನೋಡಿದ ಜನರು ಮೆಚ್ಚುಗೆ ಸೂಸಿದರು.

ADVERTISEMENT

ಸೋಮವಾರ ಇಡೀ ದಿನ ನಡೆದ ಪ್ರಶಸ್ತಿ ಪ್ರದಾನ ಸಮಾರಂಭ ಕೇವಲ ನೆಪಮಾತ್ರದಂತಿತ್ತು. ಆದರೆ, ಅಲ್ಲಿ ಮಕ್ಕಳಲ್ಲಿನ ಸುಪ್ತಪ್ರತಿಭೆ ಅನಾವರಣಗೊಂಡಿತ್ತು. ಸ್ಪರ್ಧೆ ವಿಜೇತರಿಗೆ ಖ್ಯಾತ ಕಲಾವಿದರಾದ ಮೈಕೆಲ್ ಎಂಜಿಲೋ, ರವಿವರ್ಮ, ಎಸ್.ಕೆ.ಚಟ್ಟಿ, ಟಿ.ಪಿ.ಅಕ್ಕಿ ಸೇರಿದಂತೆ ರಾಜ್ಯ, ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದ ಕಲಾವಿದರ ಹೆಸರಿನಲ್ಲಿ ಪ್ರಶಸ್ತಿ ನೀಡಿದ್ದು ಮತ್ತೊಂದು ವಿಶೇಷವಾಗಿತ್ತು.

ರಾಜ್ಯ ಮಟ್ಟದ ಚಿಣ್ಣರ ಚಿತ್ರ ಚಿತ್ತಾರ ಚಿತ್ರ ಕಲೋತ್ಸವದ ಅಂಗವಾಗಿ ಡಾನ್ಸ್ ಕರ್ನಾಟಕ ಡಾನ್ಸ್ ಖ್ಯಾತಿಯ ಹುಡುಗರು ‘ಚಿಣ್ಣರ ಚಿತ್ರ ಚಿತ್ತಾರ’ ಕಾರ್ಯಕ್ರಮದ ಶಿರ್ಷಿಕೆ ನೃತ್ಯ ಗೀತೆಗೆ ಹೆಜ್ಜೆ ಹಾಕಿದರು. ಮಕ್ಕಳ ಈ ನೃತ್ಯಕ್ಕೆ ನೆರೆದಿದ್ದ ಸಭಿಕರು, ಪಾಲಕರು ಮನಸೋತರು.

ಡ್ರಾಮಾ ಜ್ಯೂನಿಯರ್ಸ್ ತಂಡದಿಂದ ಶ್ರೇಷ್ಠ ಕಲಾವಿದ ಗದುಗಿನವರೇ ಆದ ಮುರುಗೆಪ್ಪ ಛಟ್ಟಿ ಮತ್ತು ವಿಶ್ವ ವಿಖ್ಯಾತ ಮೈಕೆಲ್ ಎಂಜೆಲೋ ಅವರ ಜೀವನ ಕುರಿತು ರೂಪಕ ಪ್ರದರ್ಶನ ಸಭಿಕರನ್ನು ಕಲಾಲೋಕಕ್ಕೆ ಕರೆದೊಯ್ದಿತ್ತು.

ಜೊತೆಗೆ ಹಾಸನದ ಚಿತ್ಕಲಾ ಹವ್ಯಾಸಿ ಚಿತ್ರಕಲಾ ತಂಡದ ಮಕ್ಕಳಿಂದ ಸಮೂಹ ಚಿತ್ರ ರಚನೆ, ಪಿಪಿಜಿ ಸಂಗೀತ ಪಾಠಶಾಲಾ ಮಕ್ಕಳಿಂದ ಸಮೂಹ ಗೀತ ಗಾಯನ ಗಮನ ಸೆಳೆಯಿತು.

ಪ್ರತಿ ಮಗವೂ ವಿಶಿಷ್ಟ: ಸಚಿವ

‘ಪ್ರತಿ ಮಗುವೂ ವಿಶಿಷ್ಟ. ಶಾಲೆಯ ಮೆಟ್ಟಿಲು ತುಳಿಯದ ಮಗುವಿಗೆ ಒಂದು ಪೆನ್ಸಿಲ್ ಕೊಟ್ಟರೆ ಸಾಕು; ಅದು ತನಗೆ ಬೇಕಾದಂತೆ ತನ್ನದೆಯಾದ ಭಾವನಾತ್ಮಕ ಕಲ್ಪನೆಯ ಗೆರೆಗಳನ್ನು ಧೃಡವಾಗಿ ಅಳುಕಿಲ್ಲದೆ ಗೀಚುತ್ತದೆ. ನಾವು ಏನೂ ಕಲಿಸಿರದಿದ್ದರೂ ಅದು ತನಗೆ ತೋಚಿದಂತೆ ಗೀಚಿಯೇ ಗೀಚುತ್ತದೆ. ಇದೇ ಮಗುವಿನ ವೈಶಿಷ್ಠತೆ ಮತ್ತು ಅದರ ಸೃಜನಾತ್ಮಕತೆಗೆ ಸಾಕ್ಷಿ’ ಎಂದು ಸಚಿವ ಹಾಲಪ್ಪ ಆಚಾರ್‌ ಮಕ್ಕಳ ಕಲೆಯ ಕುರಿತಾಗಿ ಮೆಚ್ಚುಗೆ ವ್ಯಕ್ತಪಡಿಸಿದರು.

ಗೆರೆ-ಗೆರೆಗಳಿಂದಲೇ ಚಿತ್ರ-ಅಕ್ಷರಗಳಾಗಿವೆ. ಅಕ್ಷಗಳಿಂದ ಶಬ್ದ, ಪುಸ್ತಕ, ಓದು, ಜ್ಞಾನ ಇತ್ಯಾದಿ. ಎಲ್ಲದಕ್ಕೂ ಮೂಲವೇ ಈ ಗೀಚುವಿಕೆ ಹಂತ. ಮಗುವು ತೋಚಿದ್ದನ್ನು ಚಿತ್ರಿಸಿದಾಗಲೇ ಅವನೊಳಗಿನ ವಿಜ್ಞಾನಿ, ಶಿಕ್ಷಕ, ಎಂಜಿನಿಯರ್, ಡಾಕ್ಟರ್, ರಾಷ್ಟ್ರ ರಕ್ಷಕ, ಸಮಾಜ ಸೇವಕ ಇತ್ಯಾದಿ ವಿಶೇಷ ವ್ಯಕ್ತಿ ಯಾರು ಎಂಬುದನ್ನು ಗುರುತಿಸಲು ಸಾಧ್ಯವಾಗಿಸಲು ಬಣ್ಣದಮನೆ ಸಾಂಸ್ಕೃತಿಕ ವೇದಿಕೆ ಹಾಗೂ ಕರ್ನಾಟಕ ಬಾಲ ವಿಕಾಸ ಅಕಾಡೆಮಿಯ ಕನಸಿನ ಈ ಕಾರ್ಯ ನಿಜಕ್ಕೂ ವಿನೂತನ ಪ್ರಯೋಗ ಎಂದು ಹೇಳಿದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.