ADVERTISEMENT

ಕಲುಷಿತ ನೀರು ಪೂರೈಕೆ: ನಗರಸಭೆಗೆ ಮುತ್ತಿಗೆ

ಅವಳಿ ನಗರಕ್ಕೆ ಮೂಲಸೌಕರ್ಯ ಕಲ್ಪಿಸುವಂತೆ ಸಾರ್ವಜನಿಕರ ಆಗ್ರಹ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2021, 4:54 IST
Last Updated 17 ಅಕ್ಟೋಬರ್ 2021, 4:54 IST
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಗದಗ ಬೆಟಗೇರಿ ನಗರಸಭೆಗೆ ಮುತ್ತಿಗೆ ಹಾಕಲು ಪ್ರಯತ್ನಿಸಿದ ಪ್ರತಿಭಟನಕಾರರನ್ನು ಪೊಲೀಸರು ಶನಿವಾರ ತಡೆದರು
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಗದಗ ಬೆಟಗೇರಿ ನಗರಸಭೆಗೆ ಮುತ್ತಿಗೆ ಹಾಕಲು ಪ್ರಯತ್ನಿಸಿದ ಪ್ರತಿಭಟನಕಾರರನ್ನು ಪೊಲೀಸರು ಶನಿವಾರ ತಡೆದರು   

ಗದಗ: ‘ಅವಳಿ ನಗರದ ಕೆಲವೆಡೆ ನೀರಿನ ಪೈಪ್ ಒಡೆದಿದ್ದರೂ ದುರಸ್ತಿ ಮಾಡುತ್ತಿಲ್ಲ. ರಸ್ತೆಗಳು ತಗ್ಗು- ದಿಣ್ಣೆಗಳಿಂದ ಕೂಡಿವೆ. ಆದರೂ ನಗರಸಭೆ ಆಡಳಿತ ಮಾತ್ರ ಯಾವುದೇ ಸ್ಪಂದನೆ ಮಾಡುತ್ತಿಲ್ಲ’ ಎಂದು ಬೆಟಗೇರಿ ರೇಲ್ವೆ ಹೋರಾಟ ಸಮಿತಿ ಅಧ್ಯಕ್ಷ ಗಣೇಶಸಿಂಗ್ ಬ್ಯಾಳಿ ಆರೋಪಿಸಿದರು.

ಕುಡಿಯುವ ನೀರು ಸರಬರಾಜಾಗುವ ಪೈಪ್‌ನಲ್ಲಿ ಚರಂಡಿ ನೀರು ಮಿಶ್ರಿತಗೊಂಡು ಪೂರೈಕೆಯಾಗುತ್ತಿದೆ ಎಂದು ಆರೋಪಿಸಿ ಹಾಗೂ ಅವಳಿ ನಗರದಲ್ಲಿ ಮೂಲಸೌಕರ್ಯಗಳನ್ನು ತಕ್ಷಣವೇ ಅಭಿವೃದ್ಧಿ ಪಡಿಸಬೇಕು ಎಂದು ಆಗ್ರಹಿಸಿ ಶನಿವಾರ ಸಾರ್ವಜನಿಕರ ಜತೆ ಸೇರಿ ನಗರಸಭೆಗೆ ಮುತ್ತಿಗೆ ಹಾಕಿ ಅವರು ಮಾತನಾಡಿದರು.

‘ಕೊಳವೆಬಾವಿ ರಿಪೇರಿ, ಬೀದಿದೀಪಗಳ ದುರಸ್ತಿಯ ಉಸ್ತುವಾರಿಗೆ ಒಬ್ಬ ಅಧಿಕಾರಿ ನಗರಸಭೆಯಲ್ಲಿ ಇದ್ದಾರೆ. ಇದರ ಟೆಂಡರ್ ಪಡೆದ ಗುತ್ತಿಗೆದಾರರಿಗೆ ಬಿಲ್ ಪಾವತಿಸದ ಕಾರಣ ಅವರು ನಾಲ್ಕೈದು ತಿಂಗಳಿನಿಂದ ಯಾವುದೇ ಬೋರವೆಲ್ ರಿಪೇರಿ ಹಾಗೂ ಬೀದಿದೀಪಗಳನ್ನು ದುರಸ್ತಿಗೊಳಿಸಿಲ್ಲ. ಇದರಿಂದಾಗಿ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗಿದೆ’ ಎಂದು ಹೇಳಿದರು.

ADVERTISEMENT

‘ನಗರದ ನಿವಾಸಿಗಳು ಎದುರಿಸುತ್ತಿರುವ ಸಮಸ್ಯೆ ನಿವಾರಣೆಗೆ ಅಧಿಕಾರಿಗಳು ಕೂಡಲೇ ಸ್ಪಂದಿಸಬೇಕು. ರಸ್ತೆ, ಬೀದಿದೀಪ, ಚರಂಡಿ ವ್ಯವಸ್ಥೆ, ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಪೌರಾಯುಕ್ತರು ಕ್ರಮವಹಿಸಬೇಕು’ ಎಂದು ಒತ್ತಾಯಿಸಿದರು.

ನಗರಸಭೆ ಮಾಜಿ ಸದಸ್ಯ ರಾಮಕೃಷ್ಣ ಪಾಂಡ್ರೆ, ಯಲ್ಲಪ್ಪ ಕಾಂಬಳೇಕರ, ಹಿರಿಯರಾದ ಮನ್ಸೂಖಲಾಲ ಪುಣೇಕರ, ಪ್ರೇಮನಾಥ ಬರದ್ವಾಡ, ಮಾರ್ತಂಡಪ್ಪ ಹಾದಿಮನಿ, ಲಿಂಗರಾಜ ಬಗಲಿ, ಎಸ್.ಎಸ್.ಬಳ್ಳಾರಿ, ಎಂ.ಟಿ.ಕಬ್ಬಿಣ, ಅಶೋಕ ಅಂಗಡಿ, ಎಲ್.ಆರ್.ಚಂದ್ರಗಿರಿ, ಎಸ್.ವಿ.ಸುಲಾಖೆ, ವಿ.ಎಸ್.ಜ್ಯೋತಿ, ಜಂಬಣ್ಣ ಹುಡೇದ, ರಾಮಣ್ಣ ಗಡಗಿ, ವಿ.ಎಲ್.ಬೆಳಗಲಿ ಸೇರಿದಂತೆ ಮಹಿಳೆಯರು, ಹಿರಿಯ ನಾಗರಿಕರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.

ಸಮಸ್ಯೆ ಪರಿಹರಿಸುವುದಾಗಿ ಭರವಸೆ

ಬೆಟಗೇರಿ ರೇಲ್ವೆ ಹೋರಾಟ ಸಮಿತಿ, ಮುಕ್ತಿಧಾಮ ಸಮಿತಿ ಹಾಗೂ ಸಾರ್ವಜನಿಕರ ಸಹಭಾಗಿತ್ವದಲ್ಲಿ ಶನಿವಾರ ಪ್ರತಿಭಟನೆ ನಡೆಯಿತು. ಆರಂಭದಲ್ಲಿ ಇಲ್ಲಿನ ಗಾಂಧಿವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು, ನಗರಸಭೆ ಆಡಳಿತದ ವಿರುದ್ಧ ಘೋಷಣೆ ಕೂಗಿದರು.

ಪೂರೈಕೆಯಾದ ಕಲುಷಿತ ನೀರನ್ನು ಬಾಟಲಿಯಲ್ಲಿ ತುಂಬಿಕೊಂಡು ಬಂದಿದ್ದ ಪ್ರತಿಭಟನಕಾರರು ನಗರಸಭೆ ಪ್ರವೇಶ ದ್ವಾರ ತಲುಪುತ್ತಿದ್ದಂತೆ ಪೊಲೀಸರು ಅವರನ್ನು ಒಳಗೆ ಬಿಡಲು ನಿರಾಕರಿಸಿದರು. ಈ ವೇಳೆ ಪ್ರತಿಭಟನಕಾರರು ಹಾಗೂ ಪೊಲೀಸರ ಮಧ್ಯೆ ಮಾತಿನ ಚಕಮಕಿ ನಡೆಯಿತು.

ಆದರೂ ಪಟ್ಟುಬಿಟದ ಪ್ರತಿಭಟನಕಾರರು ಗೇಟ್ ತಳ್ಳಿ ನಗರಸಭೆ ಆವರಣಕ್ಕೆ ನುಗ್ಗಿದರು. ಈ ವೇಳೆ ಹೊರ ಬಂದ ನಗರಸಭೆ ಪೌರಾಯುಕ್ತ ರಮೇಶ ವಿ. ಪ್ರತಿಭಟನಾಕಾರರ ಸಮಸ್ಯೆ ಆಲಿಸಿ, ಸಮಸ್ಯೆಗಳಿಗೆ ಪರಿಹಾರದ ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.