ADVERTISEMENT

ಕಲ್ಲು ಗಣಿಗಾರಿಕೆ: ಬಿರುಕು ಬಿಟ್ಟ ಮನೆ ಗೋಡೆಗಳು, ಸ್ಫೋಟಕ್ಕೆ ಬೆಚ್ಚಿ ಬೀಳುವ ಜನ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2021, 1:56 IST
Last Updated 13 ಫೆಬ್ರುವರಿ 2021, 1:56 IST
ಶಿರಹಟ್ಟಿ ತಾಲ್ಲೂಕಿನ ಪರಸಾಪುರ ಗ್ರಾಮದ ಸುತ್ತಮುತ್ತಲಿನ ಪ್ರದೇಶದಲ್ಲಿ ವ್ಯಾಪಕವಾಗಿ ಗಣಿಗಾರಿಕೆ ನಡೆದಿರುವುದು
ಶಿರಹಟ್ಟಿ ತಾಲ್ಲೂಕಿನ ಪರಸಾಪುರ ಗ್ರಾಮದ ಸುತ್ತಮುತ್ತಲಿನ ಪ್ರದೇಶದಲ್ಲಿ ವ್ಯಾಪಕವಾಗಿ ಗಣಿಗಾರಿಕೆ ನಡೆದಿರುವುದು   

ಶಿರಹಟ್ಟಿ (ಗದಗ ಜಿಲ್ಲೆ): ತಾಲ್ಲೂಕಿನ ಮಾಗಡಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಪರಸಾಪುರ ಗ್ರಾಮದ ಸುತ್ತಮುತ್ತಲಿನ ಪ್ರದೇಶದಲ್ಲಿ ಕಲ್ಲು ಗಣಿಗಾರಿಕೆ ವ್ಯಾಪಕವಾಗಿ ನಡೆಯುತ್ತಿದ್ದು, ಮನೆಯ ಗೋಡೆಗಳು ಬಿರುಕು ಬಿಡುತ್ತಿವೆ. ಕೊಳವೆಬಾವಿಗಳು ಕುಸಿಯುತ್ತಿದ್ದು ರೈತರಲ್ಲಿ ಆತಂಕ ಹೆಚ್ಚಿಸಿದೆ.

ಈ ಭಾಗದಲ್ಲಿ ಬೆಳಿಗ್ಗೆ ಹಾಗೂ ರಾತ್ರಿ ವೇಳೆ ನಡೆಸುವ ಸ್ಫೋಟಕದ ಶಬ್ದಕ್ಕೆ ಮಕ್ಕಳು ಮತ್ತು ವೃದ್ಧರು ಬೆಚ್ಚಿ ಬೀಳುವಂತಾಗಿದೆ. ಆದರೂ, ಸಂಬಂಧಪಟ್ಟ ಅಧಿಕಾರಿ ವರ್ಗ ಕ್ರಮ ಕೈಗೊಳ್ಳದಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.

‘ಅಳತೆಗೂ ನಿಲುಕದಷ್ಟು ಕಲ್ಲು ಗಣಿಗಾರಿಕೆ ನಡೆಯುತ್ತಿದ್ದು, ಬಳ್ಳಾರಿ ಗಣಿಯಂತಾಗುವ ಎಲ್ಲಾ ಸಾಧ್ಯತೆಗಳಿವೆ. 4 ರಿಂದ 5 ಕಿ.ಮೀ. ದೂರದಲ್ಲಿರುವ ಮಾಗಡಿ ಕೆರೆಗೆ ಬರುವ ವಿದೇಶಿ ಹಕ್ಕಿಗಳಿಗೆ ಧಕ್ಕೆಯಾಗುವ ಸಾಧ್ಯತೆ ಹೆಚ್ಚಿದೆ’ ಎಂದು ಪಕ್ಷಿಪ್ರಿಯರ ಆತಂಕಕ್ಕೆ ಕಾರಣವಾಗಿದೆ.

ADVERTISEMENT

ಮೀತಿಮೀರಿದ ಕಲ್ಲು ಗಣಿಗಾರಿಕೆಯಿಂದ ಪ್ರತಿನಿತ್ಯ ಓಡಾಡುವ ನೂರಾರು ಟಿಪ್ಪರ್‌ಗಳಲ್ಲಿ ಭಾರಿ ಪ್ರಮಾಣದ ಜಲ್ಲಿ ಕಲ್ಲು, ಎಂ ಸ್ಯಾಂಡ್‌ ಸಾಗಿಸುವುದರಿಂದ ಗ್ರಾಮೀಣ ಪ್ರದೇಶದ ರಸ್ತೆಗಳೆಲ್ಲ ಹಾಳಾಗಿವೆ. ಇತ್ತಿಚಿಗೆ ಟಿಪ್ಪರ್‌ ಹಾವಳಿಯನ್ನು ತಡೆಯಲು ಗ್ರಾಮಸ್ಥರೆಲ್ಲರೂ ಗ್ರಾಮದ ಹೊರವಲಯದಲ್ಲಿ ಓಡಾಡುತ್ತಿದ್ದ ನೂರಾರು ಟಿಪ್ಪರ್‌ಗಳನ್ನು ತಡೆದು ಆಕ್ರೋಶ ವ್ಯಕ್ತಪಡಿಸಿದ್ದರು. ಪರ್ಯಾಯ ಮಾರ್ಗದಲ್ಲಿ ಸಂಚರಿಸಬೇಕು ಎಂದು ಎಚ್ಚರಿಕೆ ನೀಡಿದ್ದರು.

‘ಮಾಗಡಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಒಟ್ಟು 9 ಕ್ರಷರ್‌ಗಳು ಕಾರ್ಯನಿರ್ವಹಿಸುತ್ತಿದ್ದು, ಇದರಲ್ಲಿ 5 ಅಧಿಕೃತವಾಗಿದ್ದು ಉಳಿದ ನಾಲ್ಕು ಕ್ರಷರ್‌ಗಳ ಬಗ್ಗೆ ನಮ್ಮ ಪಂಚಾಯ್ತಿಯಲ್ಲಿ ಮಾಹಿತಿ ಇಲ್ಲ. ಗ್ರಾಮೀಣ ಪ್ರದೇಶದಲ್ಲಿ ಕೈಗಾರಿಕೆಗಳನ್ನು ಪ್ರಾರಂಭಿಸಬೇಕಾದರೆ ಸ್ಥಳೀಯ ಪ್ರಾಧಿಕಾರದಿಂದ ಎನ್‌ಒಸಿ ಪಡೆದುಕೊಳ್ಳಬೇಕು’ ಎಂದು ಪಿಡಿಒ ಮಂಜುನಾಥ ಕುದರಿ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.