ADVERTISEMENT

ಬೆಳಗದ ಹೈಮಾಸ್ಟ್‌ ದೀಪ; ಕತ್ತಲಲ್ಲಿ ರೋಣ: ಸಾರ್ವಜನಿಕರ ಆಕ್ರೋಶ

ಪುರಸಭೆ ಮುಖ್ಯಾಧಿಕಾರಿಗೆ ಸಮಸ್ಯೆಯ ಕುರಿತು ಮಾಹಿತಿ ಇಲ್ಲ

​ಪ್ರಜಾವಾಣಿ ವಾರ್ತೆ
Published 27 ಜನವರಿ 2025, 7:04 IST
Last Updated 27 ಜನವರಿ 2025, 7:04 IST
ರೋಣ ಪಟ್ಟಣದ ಸೂಡಿ ವೃತ್ತದಲ್ಲಿ ಬೆಳಗದ ಹೈಮಾಸ್ಟ್ ದೀಪ
ರೋಣ ಪಟ್ಟಣದ ಸೂಡಿ ವೃತ್ತದಲ್ಲಿ ಬೆಳಗದ ಹೈಮಾಸ್ಟ್ ದೀಪ   

ರೋಣ: ಪಟ್ಟಣ ಪ್ರಮುಖ ಬೀದಿಗಳಲ್ಲಿರುವ ಹೈಮಾಸ್ಟ್‌ ದೀಪಗಳು ನಿಷ್ಕ್ರಿಯಗೊಂಡಿರುವ ಕಾರಣ ರಾತ್ರಿ ಎಲ್ಲೆಡೆ  ಕತ್ತಲು ಆವರಿಸುತ್ತಿದೆ. ಆದರೆ, ಅಧಿಕಾರಿಗಳು ಮಾತ್ರ ಬೀದಿದೀಪಗಳನ್ನು ಸರಿಪಡಿಸಲು ಯಾವುದೇ ಕ್ರಮ ಕೈಗೊಳ್ಳಲು ಮುಂದಾಗದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. 

ಶಾಸಕ ಜಿ.ಎಸ್. ಪಾಟೀಲ ಅವರ ಅಭಿವೃದ್ಧಿ ಕಾರ್ಯಗಳಿಗೆ ಅಧಿಕಾರಿಗಳು ಸೂಕ್ತ ಸಹಕಾರ ನೀಡದ ಕಾರಣ ಪಟ್ಟಣದ ಪ್ರಮುಖ ರಸ್ತೆಗಳು ಹಾಗೂ ಬೀದಿಗಳು ಭಯ ಬೀಳಿಸುವ ತಾಣಗಳಾಗುತ್ತಿವೆ ಎಂದು ಸಾರ್ವಜನಿಕರು ಕಿಡಿಕಾರಿದ್ದಾರೆ.

ಪಟ್ಟಣದ ಪ್ರಮುಖ ಸ್ಥಳಗಳಾದ ಸೂಡಿ ವೃತ್ತ, ಸಿದ್ಧಾರೂಢ ಮಠ, ಬಾದಾಮಿ ರಸ್ತೆಯ ಮುದೇನಗುಡಿ ಸರ್ಕಲ್ ಸೇರಿದಂತೆ ಹಲವು ಭಾಗಗಳಲ್ಲಿರುವ ಹೈಮಾಸ್ಟ್ ದೀಪಗಳು ಬೆಳಗುತ್ತಿಲ್ಲ. ಆದರೂ, ಪುರಸಭೆ ಅಧಿಕಾರಿಗಳು ಮಾತ್ರ ಇತ್ತ ಗಮನಹರಿಸದೆ ಜಾಣಕುರುಡು ಪ್ರದರ್ಶಿಸುತ್ತಿದ್ದಾರೆ. ವರ್ತಕರು ಮತ್ತು ಜನಸಾಮಾನ್ಯರು ಕತ್ತಲಲ್ಲೇ ಸಾಗಬೇಕಾದ ಪರಿಸ್ಥಿತಿ ಎದುರಾಗಿದೆ.

ADVERTISEMENT

ಇತ್ತೀಚಿನ ದಿನಗಳಲ್ಲಿ ತಾಲ್ಲೂಕಿನಾದ್ಯಂತ ಹೆಚ್ಚುತ್ತಿರುವ ಕಳವು ಪ್ರಕರಣಗಳು ರೋಣದ ಜನತೆಯಲ್ಲಿ ಆತಂಕ ಹೆಚ್ಚಿಸಿದ್ದು, ಒಬ್ಬಂಟಿಯಾಗಿ ಪ್ರಮುಖ ರಸ್ತೆಯಲ್ಲಿ ಓಡಾಡಲು ಸಹ ಭಯಪಡುವಂತಾಗಿದೆ.

ಅಪಘಾತದ ಭೀತಿ: ಬೀದಿದೀಪಗಳು ರಾತ್ರಿ ಸಮಯದಲ್ಲಿ ಉರಿಯದ ಕಾರಣ ರಸ್ತೆಗಳು ಸರಿಯಾಗಿ ಕಾಣದೇ ಅಪಘಾತಗಳು ಸಂಭವಿಸುವ ಭೀತಿ ಸಹ ಜನರನ್ನು ಆಚರಿಸಿದೆ. ಕೆಲವೆಡೆ ನಿರ್ಜನ ಪ್ರದೇಶಗಳಲ್ಲಿ ಹೈಮಾಸ್ಟ್ ದೀಪಗಳನ್ನು ಹಾಕಲಾಗಿದೆ. ಎಲ್ಲಿಯೂ ದೀಪಗಳು ಸರಿಯಾಗಿಲ್ಲದ ಕಾರಣ ಹುಳ ಹುಪ್ಪಟೆಗಳ ಕಾಟವೂ ಜನರನ್ನು ಬಾಧಿಸುತ್ತಿದೆ.

ಸಮಸ್ಯೆ ಕುರಿತು ಪುರಸಭೆ ಸದಸ್ಯರು ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಪುರಸಭೆ ಸದಸ್ಯರು  ತಾವೇ ನಿರ್ವಹಣೆ ಖರ್ಚು ಭರಿಸಲು ಮುಂದಾದರೂ ಅಧಿಕಾರಿಗಳು ಮಾತ್ರ ಇಲ್ಲಸಲ್ಲದ ಕಾರಣ ಹೇಳುತ್ತಾ ದಿನ ದೂಡುತ್ತಿದ್ದಾರೆ. ದೀಪಗಳ ದುರಸ್ತಿ ಮಾಡದ ಅಧಿಕಾರಿಗಳ ಆಡಳಿತ ವೈಖರಿ ಬೇಸರ ತರಿಸಿದೆ ಎಂದು ಸಾರ್ವಜನಿಕರು ದೂರಿದ್ದಾರೆ.

‘ಪಟ್ಟಣದ ಜನರಿಗೆ ಮೂಲಸೌಕರ್ಯ ಒದಗಿಸುವುದು ಸ್ಥಳೀಯ ಸಂಸ್ಥೆಗಳ ಕರ್ತವ್ಯ. ಸಾರ್ವಜನಿಕರ ಸುಗಮ ಸಂಚಾರಕ್ಕೆ ಬೀದಿದೀಪಗಳ ಅವಶ್ಯಕತೆ ತುಂಬಾ ಇದೆ. ಆದರೆ, ಪಟ್ಟಣದಲ್ಲಿ ವರ್ಷ ಕಳೆದರೂ, ಹದಗೆಟ್ಟ ಬೀದಿದೀಪಗಳ ದುರಸ್ತಿಗೆ ಮುಂದಾಗಿರುವುದು ಜಿಡ್ಡುಗಟ್ಟಿದ ಆಡಳಿತಕ್ಕೆ ಸಾಕ್ಷಿಯಾಗಿದೆ. ಸಮಸ್ಯೆ ಪರಿಹರಿಸಲು ಇರುವ ಅಡೆತಡೆಗಳನ್ನು ನಿವಾರಿಸಿ, ಬೀದಿದೀಪಗಳ ವ್ಯವಸ್ಥೆ ಸರಿಪಡಿಸಬೇಕು. ಇಲ್ಲವಾದರೆ, ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು’ ಎಂದು ಸಾರ್ವಜನಿಕರು ಒಕ್ಕೊರಲಿನಿಂದ ಎಚ್ಚರಿಸಿದ್ದಾರೆ.

ರೋಣ ಪಟ್ಟಣದ ಸಿದ್ಧಾರೂಢ ಮಠದ ಮುಂದಿನ ಹೈಮಾಸ್ಟ್ ದೀಪ ಕೆಟ್ಟಿರುವುದು
ಹೈಮಾಸ್ಟ್ ದೀಪಗಳು ಬಂದ್ ಆಗಿರುವುದು ನನ್ನ ಗಮನಕ್ಕೆ ಬಂದಿಲ್ಲ. ಸಂಬಂಧಪಟ್ಟವರಿಂದ ಮಾಹಿತಿ ಪಡೆದು ತೊಂದರೆ ಆಗಿದ್ದಲ್ಲಿ ಸರಿಪಡಿಸಲಾಗುವುದು
ರಮೇಶ ಹೊಸಮನಿ ಮುಖ್ಯಾಧಿಕಾರಿ ಪುರಸಭೆ ರೋಣ
ಸ್ಪಂದಿಸದ ಅಧಿಕಾರಿಗಳು
‘ಪುರಸಭೆ ಅಧಿಕಾರಿಗಳ ಆಡಳಿತ ವೈಖರಿ ತೀವ್ರ ಬೇಸರ ತರಿಸಿದೆ’ ಎಂದು ಪುರಸಭೆ ಸದಸ್ಯ ಮಲ್ಲಯ್ಯ ಮಹಾಪುರುಷಮಠ ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ನನ್ನ ವಾರ್ಡ್‌ನಲ್ಲಿ ನಾನೇ ಖರ್ಚು ಮಾಡಿ ಹೈಮಾಸ್ಟ್ ದೀಪಗಳನ್ನು ಅಳವಡಿಸಿದ್ದೇನೆ. ಇನ್ನೊಂದು ಹೈಮಾಸ್ಟ್ ದೀಪವನ್ನು ಅಳವಡಿಸುವಂತೆ ಕೇಳಿದ್ದೇನೆ. ಅದರ ಖರ್ಚನ್ನೂ ಭರಿಸುವುದಾಗಿ ಹೇಳಿದ್ದೆ. ಆದರೆ ಪುರಸಭೆ ಅಧಿಕಾರಿಗಳು ಕಾರಣ ಹೇಳುತ್ತಿದ್ದಾರೆಯೇ ಹೊರತು ಇದುವರೆಗೂ ಕೆಲಸ ಮಾಡಿ ಕೊಟ್ಟಿಲ್ಲ’ ಎಂದು ದೂರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.