ADVERTISEMENT

ಸಕಾಲದಲ್ಲಿ ಕಬ್ಬು ಕಟಾವಿಗೆ ಆಗ್ರಹ

ಮುಂಡರಗಿ: ಕಬ್ಬು ಬೆಳೆಗಾರರ ಸಂಘದ ಜಿಲ್ಲಾ ಘಟಕದ ನೇತೃತ್ವದಲ್ಲಿ ಸಭೆ

​ಪ್ರಜಾವಾಣಿ ವಾರ್ತೆ
Published 8 ಜನವರಿ 2022, 6:22 IST
Last Updated 8 ಜನವರಿ 2022, 6:22 IST
ಸಕಾಲದಲ್ಲಿ ರೈತರ ಕಬ್ಬು ಕಟಾವು ಮಾಡುವುದು ಸೇರಿದಂತೆ ಕಬ್ಬು ಬೆಳೆಗಾರರ ವಿವಿಧ ಬೇಡಿಕೆಗಳನ್ನು ಈಡೇರಿಸುವ ಕುರಿತಂತೆ ಕಬ್ಬು ಬೆಳೆಗಾರರು ಮುಂಡರಗಿ ತಾಲ್ಲೂಕಿನ ಗಂಗಾಪೂರ ಸಕ್ಕರೆ ಕಾರ್ಖಾನೆ ಆವರಣದಲ್ಲಿ ಸಭೆ ನಡೆಸಿದರು
ಸಕಾಲದಲ್ಲಿ ರೈತರ ಕಬ್ಬು ಕಟಾವು ಮಾಡುವುದು ಸೇರಿದಂತೆ ಕಬ್ಬು ಬೆಳೆಗಾರರ ವಿವಿಧ ಬೇಡಿಕೆಗಳನ್ನು ಈಡೇರಿಸುವ ಕುರಿತಂತೆ ಕಬ್ಬು ಬೆಳೆಗಾರರು ಮುಂಡರಗಿ ತಾಲ್ಲೂಕಿನ ಗಂಗಾಪೂರ ಸಕ್ಕರೆ ಕಾರ್ಖಾನೆ ಆವರಣದಲ್ಲಿ ಸಭೆ ನಡೆಸಿದರು   

ಮುಂಡರಗಿ: ಸಕಾಲದಲ್ಲಿ ರೈತರ ಕಬ್ಬು ಕಟಾವು ಮಾಡುವುದು ಸೇರಿದಂತೆ ಕಬ್ಬು ಬೆಳೆಗಾರರ ವಿವಿಧ ಬೇಡಿಕೆಗಳನ್ನು ಈಡೇರಿಸುವ ಕುರಿತಂತೆ ರಾಜ್ಯ ಕಬ್ಬು ಬೆಳೆಗಾರರ ಸಂಘದ ಜಿಲ್ಲಾ ಘಟಕದ ನೇತೃತ್ವದಲ್ಲಿ ಹೂವಿನಹಡಗಲಿ, ಶಿರಹಟ್ಟಿ, ಮುಂಡರಗಿ ತಾಲ್ಲೂಕುಗಳ ಕಬ್ಬು ಬೆಳೆಗಾರರು ಶುಕ್ರವಾರ ತಾಲ್ಲೂಕಿನ ಗಂಗಾಪೂರ ವಿಜಯನಗರ ಸಕ್ಕರೆ ಕಾರ್ಖಾನೆ ಆವರಣದಲ್ಲಿ ತಹಶೀಲ್ದಾರ್ ಆಶಪ್ಪ ಪೂಜಾರಿ ಹಾಗೂ ಕಾರ್ಖಾನೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.

ಕಬ್ಬು ಬೆಳೆಗಾರರ ಸಂಘದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ವೀರನಗೌಡ ಪಾಟೀಲ ಮಾತನಾಡಿ, ಕಬ್ಬು ಕಟಾವು ಮಾಡುವ ಕೂಲಿ ಕಾರ್ಮಿಕರು ಅಥವಾ ಕೂಲಿ ಕಾರ್ಮಿಕರ ಮುಖಂಡರು ಕಟಾವು ಮಾಡುವ ಸಂದರ್ಭದಲ್ಲಿ ಪ್ರತಿಟನ್ ಕಬ್ಬು ಕಟಾವಿಗೆ ₹ 500 ‘ಖುಷಿ’ ನೀಡುವಂತೆ ರೈತರನ್ನು ಒತ್ತಾಯಿಸುತ್ತಿದ್ದಾರೆ ಎಂದು ಆರೋಪಿಸಿದರು.

ಸರ್ಕಾರ ರೈತರ ಕಬ್ಬು ಕಟಾವು ಮಾಡುವುದಕ್ಕೆ ಮತ್ತು ಸಾಗಾಣಿಕೆ ಮಾಡುವುದಕ್ಕೆ ದರ ನಿಗದಿ ಪಡಿಸಿದ್ದು, ಕೂಲಿ ಕಾರ್ಮಿಕರು ಕಬ್ಬು ಕಟಾವು ಮಾಡಲು ಹೆಚ್ಚುವರಿಯಾಗಿ ಹಣ ಬೇಡುತ್ತಿದ್ದಾರೆ. ಇದು ರೈತರಿಗೆ ಹೊರೆಯಾಗಲಿದ್ದು, ಅದನ್ನು ತಕ್ಷಣ ತಪ್ಪಿಸಬೇಕು. ಕೂಲಿ ಕಾರ್ಮಿಕರು ಸಕ್ಕರೆ ಕಾರ್ಖಾನೆಯ ಅಧಿಕಾರಿಗಳು ಹೇಳಿದಂತೆ ಕೇಳುತ್ತಿದ್ದು, ಕಬ್ಬ ಕಟಾವು ಮಾಡುವ ವಿಷಯದಲ್ಲಿ ತಾರತಮ್ಯ ಮಾಡುತ್ತಿದ್ದಾರೆ ಎಂದು ದೂರಿದರು.

ADVERTISEMENT

ಮೊದಲು ಕಬ್ಬು ಬೆಳೆದವರನ್ನು ಬಿಟ್ಟು, ತಮಗೆ ಬೇಕಾದ ರೈತರ ಕಬ್ಬನ್ನು ಮೊದಲು ಕಟಾವು ಮಾಡುತ್ತಾರೆ. ಇದರಿಂದ ಮೊದಲು ಕಬ್ಬು ಬೆಳೆದವರು ಕಬ್ಬು ಕಟಾವಿಗಾಗಿ ತಿಂಗಳುಗಟ್ಟಲೆ ಕಾಯಬೇಕಾಗುತ್ತದೆ. ಆದ್ಯತೆಯ ಪ್ರಕಾರ ಕಬ್ಬು ಕಟಾವು ಮಾಡಬೇಕು ಎಂದು ಒತ್ತಾಯಿಸಿದರು.

ವಿಜಯನಗರ ಸಕ್ಕರೆ ಕಾರ್ಖಾನೆ ಜನರಲ್ ಮ್ಯಾನೇಜರ್ ಜಯಚಂದ್ರನ್ ಮಾತನಾಡಿ,
ಪ್ರಸಕ್ತ ಸಾಲಿನಲ್ಲಿ ಕಾರ್ಖಾನೆ ವ್ಯಾಪ್ತಿಯಲ್ಲಿ ಅಕ್ಟೋಬರ್ 2021ರಿಂದ, ಮಾರ್ಚ್‌ 2022ರ ವರೆಗೆ ಸುಮಾರು 7 ಲಕ್ಷ ಮೆಟ್ರಿಕ್‍ ಟನ್ ಕಬ್ಬು ಕಟಾವು ಗುರಿ ಹೊಂದಲಾಗಿದೆ. ಈಗಾಗಲೇ 4.27 ಲಕ್ಷ ಮೆಟ್ರಿಕ್ ಟನ್‍ನಷ್ಟು ಕಬ್ಬು ಕಟಾವು ಮಾಡಲಾಗಿದೆ. ಇನ್ನುಳಿದ ಕಬ್ಬನ್ನು ಹಂತ ಹಂತವಾಗಿ ಕಟಾವು ಮಾಡಲಾಗವುದು ಎಂದು ಭರವಸೆ ನೀಡಿದರು.

ತಹಶೀಲ್ದಾರ್ ಆಶಪ್ಪ ಪೂಜಾರಿ ಮಾತನಾಡಿ, ನಿಗದಿತ ಸಮಯದೊಳಗೆ ರೈತರ ಕಬ್ಬು ಕಟಾವು ಮಾಡಬೇಕು. ರೈತರಿಂದ ಹೆಚ್ಚುವರಿ ಹಣ ತೆಗೆದುಕೊಳ್ಳುವುದನ್ನು ತಕ್ಷಣ ಕೈಬಿಡಬೇಕು ಎಂದು ಸಕ್ಕರೆ ಕಾರ್ಖಾನೆ ಅಧಿಕಾರಿಗಳಿಗೆ ಆದೇಶಿಸಿದರು.

ಸಿಪಿಐ ಸುನೀಲ ಸವದಿ, ರೈತ ಮುಖಂಡರಾದ ಸುರೇಶ ಹಲವಾಗಲಿ, ಪ್ರಕಾಶ ಸಜ್ಜನರ, ಮಲ್ಲಿಕಾರ್ಜುನ ಹಣಜಿ, ರವಿ ನಾಯಕ, ಸತ್ಯಪ್ಪ ಬಳ್ಳಾರಿ, ಹನುಮಂತ ಗೋಜನೂರ, ಈರಣ್ಣ ಕವಲೂರ, ಬಾಬುಜೀ ಮದ್ಯಪಾಟಿ, ಮಾಬುಸಾಬ್ ಬಳ್ಳಾರಿ, ಅಂದಪ್ಪ ಮೇಟಿ, ಶರಣಪ್ಪ ಹಳ್ಳಿಕೇರಿ, ನಾಗಯ್ಯ ಗಡ್ಡಿಮಠ, ಮೃತ್ಯುಂಜಯ ಹಲಗಿ, ಲಕ್ಷ್ಮಣ ಬಂಗಿ, ಸುರೇಶ ಸಜ್ಜನರ, ಕೋಟೆಪ್ಪ ಚೌಡ್ಕಿ, ಹನುಮಪ್ಪ ಶೀರನಹಳ್ಳಿ, ವೆಂಕನಗೌಡ ಪಾಟೀಲ, ಅಶೋಕ ಸೂರಣಗಿ, ಬಸಪ್ಪ ಹಣಗಿ, ಕುಪೇಂದ್ರ ನಾಯಕ, ಬಸವರಾಜ ರಗಟಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.