ADVERTISEMENT

ಮುಂಡರಗಿ: ಆತ್ಮಹತ್ಯೆಗೆ ಯತ್ನಿಸಿದ್ದ ಮಹಿಳೆ ಸಾವು

20 ವರ್ಷಗಳಿಂದ ಬಗರ್ ಹುಕುಂ ಸಾಗುವಳಿ: ಗ್ರಾಮದಲ್ಲಿ ಉದ್ವಿಗ್ನ ಪರಿಸ್ಥಿತಿ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2022, 6:42 IST
Last Updated 8 ಮಾರ್ಚ್ 2022, 6:42 IST
ಬಗರ್ ಹುಕುಂ ಸಾಗುವಳಿದಾರರು ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳ ಜಗಳದಲ್ಲಿ ವಿಷ ಸೇವಿಸಿ ಮುಂಡರಗಿ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದು ರೈತ ಮಹಿಳೆಯರನ್ನು ತಹಶೀಲ್ದಾರ್‌ ಆಶಪ್ಪ ಪೂಜಾರಿ ಭೇಟಿಯಾಗಿ ಆರೋಗ್ಯ ವಿಚಾರಿಸಿದರು
ಬಗರ್ ಹುಕುಂ ಸಾಗುವಳಿದಾರರು ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳ ಜಗಳದಲ್ಲಿ ವಿಷ ಸೇವಿಸಿ ಮುಂಡರಗಿ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದು ರೈತ ಮಹಿಳೆಯರನ್ನು ತಹಶೀಲ್ದಾರ್‌ ಆಶಪ್ಪ ಪೂಜಾರಿ ಭೇಟಿಯಾಗಿ ಆರೋಗ್ಯ ವಿಚಾರಿಸಿದರು   

ಮುಂಡರಗಿ: ಬಗರ್ ಹುಕುಂ ಸಾಗುವಳಿದಾರರನ್ನು ತೆರವುಗೊಳಿಸುವ ಕುರಿತಂತೆ ವಲಯ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಕೆಲವು ರೈತರ ಮಧ್ಯೆ ಸೋಮವಾರ ತೀವ್ರ ವಾಗ್ವಾದ ನಡೆಯಿತು. ಇದೇ ವೇಳೆ ರೈತ ಮಹಿಳೆಯರಿಬ್ಬರು ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರ ಎದುರೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ತಾಲ್ಲೂಕಿನ ಕೆಲೂರ ಗ್ರಾಮದಲ್ಲಿ ನಡೆದಿದ್ದು, ಈ ಪೈಕಿ ಒಬ್ಬರು ಮಹಿಳೆ ಮೃತಪಟ್ಟಿದ್ದಾರೆ. ಮತ್ತೊಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

ಕೆಲೂರ ಗ್ರಾಮದ ನಿರ್ಮಲಾ ಪಾಟೀಲ ಆತ್ಮಹತ್ಯೆಗೆ ಯತ್ನಿಸಿ ಮೃತಪಟ್ಟ ಮಹಿಳೆ. ಅದೇ ಗ್ರಾಮದ ಸರೋಜಮ್ಮ ಪಾಟೀಲ ಗದಗ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

ರೈತ ಮಹಿಳೆಯರು ಕ್ರಿಮಿನಾಶಕ ಸೇವಿಸುತ್ತಿದ್ದಂತೆಯೇ ಅವರನ್ನು ತಕ್ಷಣ ಮುಂಡರಗಿ ಸಾರ್ವಜನಿಕ ಆಸ್ಪತ್ರೆಗೆ ಕರೆತರಲಾಯಿತು. ಅಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಗದಗ ಜಿಲ್ಲಾ ಆಸ್ಪತ್ರೆಗೆ ಕಳುಹಿಸಲಾಯಿತು. ಅದಕ್ಕೂ ಪೂರ್ವದಲ್ಲಿ ತಹಶೀಲ್ದಾರ್‌ ಆಶಪ್ಪ ಪೂಜಾರಿ ಅವರು ಆಸ್ಪತ್ರೆಗೆ ಭೇಟಿ ನೀಡಿ ಮಹಿಳೆಯರ ಆರೋಗ್ಯವನ್ನು ವಿಚಾರಿಸಿದರು.

ADVERTISEMENT

ರೈತರು ಹಲವಾರು ವರ್ಷಗಳಿಂದ ಸಾಗುವಳಿ ಮಾಡಿಕೊಂಡು ಬಂದಿದ್ದ ಜಮೀನಿನಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಕಂದಕ ತೋಡಲು ಮುಂದಾಗಿದ್ದರು. ಅದಕ್ಕೆ ಗ್ರಾಮದ ರೈತರು ತೀವ್ರ ವಿರೋಧ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ರೈತರು ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆದಿದೆ.

ರೈತ ಮಹಿಳೆಯರ ಪ್ರತಿರೋಧದ ನಡುವೆಯೂ ಅರಣ್ಯ ಇಲಾಖೆಯ ಅಧಿಕಾರಿಗಳು ಪೊಲೀಸರ ನೆರವಿನಿಂದ ಸಾಗುವಳಿ ಜಮೀನಿನಲ್ಲಿ ಕಂದಕ ನಿರ್ಮಿಸಲು ಮುಂದಾಗಿದ್ದಾರೆ. ಈ ಸಂದರ್ಭದಲ್ಲಿ ರೈತ ಮಹಿಳೆಯರು ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳ ಜಗಳ ವಿಕೋಪಕ್ಕೆ ತಿರುಗಿದೆ. ಇದೇ ಸಮಯದಲ್ಲಿ ಸ್ಥಳದಲ್ಲಿದ್ದ ನಿರ್ಮಲಾ ಹಾಗೂ ಸರೋಜಮ್ಮ ಎಂಬ ರೈತ ಮಹಿಳೆಯರು ಕ್ರಿಮಿನಾಶಕ ಸೇವಿಸಿದ್ದಾರೆ.

'ಕಳೆದ 20 ವರ್ಷಗಳಿಂದ ಜಮೀನಿನಲ್ಲಿ ಸಾಗುವಳಿ ಮಾಡುತ್ತಾ ಬಂದಿದ್ದೇವೆ. ಈಗ ಅರಣ್ಯ ಇಲಾಖೆಯ ಅಧಿಕಾರಿಗಳು ಇದ್ದಕ್ಕಿದ್ದ ಹಾಗೆ ಜಮೀನಿನಲ್ಲಿ ಕಂದಕ ನಿರ್ಮಿಸಲು ಮುಂದಾಗಿದ್ದಾರೆ. ರೈತರನ್ನು ಒಕ್ಕಲೆಬ್ಬಿಸಲು ಮುಂದಾಗಿರುವುದು ಅಸಮಂಜಸ' ಎಂದು ಹೆಸರು ಹೇಳಲಿಚ್ಚಿಸದ ಕೆಲೂರು ಗ್ರಾಮದ ರೈತರೊಬ್ಬರು 'ಪ್ರಜಾವಾಣಿ'ಗೆ ತಿಳಿಸಿದರು.

'ರೈತರು ಅಕ್ರಮವಾಗಿ ಸಾಗುವಳಿ ಮಾಡುತ್ತಿರುವ ಪ್ರದೇಶವು ಅರಣ್ಯ ಇಲಾಖೆಯ ವ್ಯಾಪ್ತಿಗೆ ಒಳಪಡುತ್ತದೆ. ಅಲ್ಲಿ ಸಾಗುವಳಿ ಮಾಡಲು ಅವಕಾಶವಿಲ್ಲ. ಈ ಕುರಿತು ಹಲವು ವರ್ಷಗಳಿಂದ ಸಾಗುವಳಿ ಮಾಡುತ್ತಿದ್ದ ರೈತರಿಗೆ ಇಲಾಖೆಯ ವತಿಯಿಂದ ಹಲವು ಬಾರಿ ನೋಟೀಸ್ ನೀಡಲಾಗಿದೆ. ಈ ಕಾರಣದಿಂದ ಅಲ್ಲಿ ಕಂದಕ ನಿರ್ಮಿಸಲು ಕ್ರಮ ಕೈಗೊಳ್ಳಲಾಗಿದೆ' ಎಂದು ಎ.ಡಿ.ಎಫ್.ಓ ಪರಿಮಳಾ ಹಾಗೂ ಆರ್.ಎಫ್.ಒ. ಪ್ರದೀಪ ಪವಾರ ತಿಳಿಸಿದರು.

ಪರಸ್ಥಿತಿ ಉದ್ವಿಗ್ನ
ಗದಗ ಜಿಲ್ಲಾ ಆಸ್ಪತ್ರೆಯಲ್ಲಿದ್ದ ನಿರ್ಮಲಾ ಪಾಟೀಲ ಅವರು ಸೋಮವಾರ ರಾತ್ರಿ ನಿಧನರಾದರು. ನಿರ್ಮಲಾ ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆಯೇ ಕೆಲೂರ ಗ್ರಾಮದಲ್ಲಿ ಪರಿಸ್ಥಿತಿ ತೀವ್ರ ಉದ್ವಿಗ್ನಗೊಂಡಿತ್ತು.

ಸೋಮವಾರ ಬೆಳಿಗ್ಗೆಯಿಂದಲೇ ಒಂದು ಪೊಲೀಸ್ ವ್ಯಾನ್ ಗ್ರಾಮದಲ್ಲಿ ಮೊಕ್ಕಾಂ ಹೂಡಿದೆ. ಪರಿಸ್ಥಿತಿ ನಿಯಂತ್ರಿಸಲು ಸೋಮವಾರ ರಾತ್ರಿ ಎರಡು ಜೀಪುಗಳಲ್ಲಿ ಪಟ್ಟಣದ ಪೊಲೀಸರು ಕೆಲೂರ ಗ್ರಾಮಕ್ಕೆ ತೆರಳಿದರು.

ಜಿಲ್ಲಾಧಿಕಾರಿ ಎಂ.ಸುಂದರೇಶ್‌ ಬಾಬು ಅವರು ಮೃತ ಕುಟುಂಬಸ್ಥರನ್ನು ಭೆಟಿಯಾಗಿ ಸಾಂತ್ವನ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.