
ಗದಗ: ‘ಪಂಚ ಗ್ಯಾರಂಟಿ ಯೋಜನೆಗಳ ಮೂಲಕ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಬಡತನವನ್ನು ಬೇರುಸಹಿತ ಕಿತ್ತೊಗೆಯುವ ಕ್ರಾಂತಿಕಾರಕ ಕೆಲಸ ಮಾಡಿದೆ. ಆದರೆ, ಬಡಜನರ ಕಲ್ಯಾಣ ಬಯಸದೇ ಇರುವವರು ಮಾತ್ರ ಪಂಚ ಗ್ಯಾರಂಟಿಗಳ ಕುರಿತು ಅಪಸ್ವರ ಎತ್ತುತ್ತಾರೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.
ನಗರದ ಸ್ವಾಮಿ ವಿವೇಕಾನಂದ ಸಭಾಭವನದಲ್ಲಿ ಬುಧವಾರ ನಡೆದ ಗದಗ ಜಿಲ್ಲಾ ಗ್ಯಾರಂಟಿ ಕಾರ್ಯಾಗಾರ ಹಾಗೂ ಉತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
‘ಚುನಾವಣಾ ಪೂರ್ವದಲ್ಲಿ ಪಂಚ ಗ್ಯಾರಂಟಿಗಳನ್ನು ಘೋಷಿಸಲಾಗಿತ್ತು. ಈ ಮಹತ್ವಾಕಾಂಕ್ಷಿ ಯೋಜನೆಗಳನ್ನು ಅಧಿಕಾರ ವಹಿಸಿದ ಕೆಲವೇ ದಿನಗಳಲ್ಲಿ ಜಾರಿಗೊಳಿಸಿ ಯಶಸ್ವಿಯಾಗಿ ಅನುಷ್ಠಾನಗೊಳಿಸುವ ಮೂಲಕ ಎಲ್ಲ ಟೀಕೆಗಳಿಗೆ ಪ್ರತ್ಯುತ್ತರ ನೀಡಲಾಗಿದೆ’ ಎಂದರು.
‘ರಾಜ್ಯದ ಬಡ ಕುಟುಂಬಕ್ಕೆ ಪ್ರತಿ ತಿಂಗಳು ₹5 ಸಾವಿರ ತಲುಪಿಸುವ ಕೆಲಸ ಗ್ಯಾರಂಟಿ ಯೋಜನೆಗಳಿಂದ ಆಗಿದೆ. ಜಿಲ್ಲೆಯಲ್ಲಿ 2.28 ಲಕ್ಷ ಕುಟುಂಬಗಳನ್ನು ತಲುಪಲಾಗಿದೆ’ ಎಂದು ಹೇಳಿದರು.
‘ಮಹಾತ್ಮ ಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ವಿಶ್ವವಿದ್ಯಾಲಯ ನಡೆಸಿದ ಸಮೀಕ್ಷೆಯಲ್ಲಿ ಅನ್ನಭಾಗ್ಯ ಯೋಜನೆಯಡಿ ಶೇ 93, ಗೃಹಜ್ಯೋತಿ ಶೇ 86, ಗೃಹಲಕ್ಷ್ಮಿ ಶೇ 95.4, ಶಕ್ತಿ ಯೋಜನೆಯಡಿ ಶೇ 86 ಫಲಾನುಭವಿಗಳು ತೃಪ್ತ ಹಾಗೂ ಸ್ವಾವಲಂಬಿ ಜೀವನ ಸಾಗಿಸುತ್ತಿರುವುದು ಗೊತ್ತಾಗಿದೆ’ ಎಂದರು.
ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಚ್.ಎಂ.ರೇವಣ್ಣ ಮಾತನಾಡಿ, ‘ಪಂಚ ಗ್ಯಾರಂಟಿ ಯೋಜನೆಗಳ ಜಾರಿಯಿಂದಾಗಿ ರಾಜ್ಯದಲ್ಲಿ ಸಾಕಷ್ಟು ಬದಲಾವಣೆಗಳು ಕಂಡುಬಂದಿವೆ’ ಎಂದರು.
‘ನಮ್ಮ ರಾಜ್ಯ ಕಂಡಂತಹ ಧೀಮಂತ ಮುಖ್ಯಮಂತ್ರಿಗಳಾದ ಡಿ.ದೇವರಾಜ ಅರಸು ಅವರು ಉಳುವವನೇ ಭೂಮಿಯ ಒಡೆಯ, ಬಂಗಾರಪ್ಪನವರ ಆಶ್ರಯ ಯೊಜನೆ, ರೈತರಿಗೆ ಉಚಿತ ವಿದ್ಯುತ್ , ವೀರಪ್ಪಮೊಯಿಲಿ ಅವರ ಸಿಇಟಿ ಹಾಗೂ ಎಸ್.ಎಂ.ಕೃಷ್ಣ ಅವರು ರಾಜ್ಯದ ಆರ್ಥಿಕತೆಗೆ ಒತ್ತು ನೀಡುವುದರ ಮೂಲಕ ಅಭಿವೃದ್ದಿಗೆ ಮುನ್ನುಡಿ ಬರೆದಿದ್ದರು. ಇವೆಲ್ಲವನ್ನೂ ಮೀರಿ ಸಿದ್ದರಾಮಯ್ಯನವರು ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ’ ಎಂದರು.
ಸಂಪನ್ಮೂಲ ವ್ಯಕ್ತಿ ಮುತ್ತುರಾಜ್ ಪಂಚ ಗ್ಯಾರಂಟಿ ಯೋಜನೆಗಳಿಂದ ಜನರಿಗೆ ಆಗಿರುವ ಲಾಭಗಳ ಕುರಿತು ಅಂಕಿ ಅಂಶಗಳ ಸಹಿತ ವಿವರಿಸಿದರು. ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಅಧ್ಯಕ್ಷ ಬಿ.ಬಿ.ಅಸೂಟಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಡಿ.ಆರ್.ಪಾಟೀಲ, ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ಅಶೋಕ ಮಂದಾಲಿ, ಸಂಗನಗೌಡ ಪಾಟೀಲ, ವಿವೇಕ ಯಾವಗಲ್, ದೇವಪ್ಪ ಮೋರನಾಳ, ನಾಗರಾಜ ಶಿವಪ್ಪ ಮಡಿವಾಳರ, ಶರಣಪ್ಪ ಬೆಟಗೇರಿ, ವೀರಯ್ಯ ಮಠಪತಿ, ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್, ಎಸ್‌ಪಿ ರೋಹನ್ ಜಗದೀಶ್ ಸೇರಿದಂತೆ ಹಲವರು ಇದ್ದರು.
ಸಮಾವೇಶದಲ್ಲಿ ಐದು ಸಾವಿರಕ್ಕೂ ಅಧಿಕ ಮಂದಿ ಫಲಾನುಭವಿಗಳು ಇದ್ದರು.
ಪಂಚ ಗ್ಯಾರಂಟಿ ಯೋಜನೆಗಳಿಂದಾಗಿ ರಾಜ್ಯದ ತಲಾ ಆದಾಯ ಹೆಚ್ಚಾಗಿದೆ. ಇಂದು ನಮ್ಮ ರಾಜ್ಯವು ರಾಷ್ಟ್ರಕ್ಕೇ ಮಾದರಿಯಾಗಿದೆ. ಇಪ್ಪತ್ತು ಜಿಲ್ಲೆಗಳಲ್ಲಿ ನಡೆದ ಕಾರ್ಯಕ್ರಮಗಳಲ್ಲಿ ಗದಗ ಜಿಲ್ಲೆಯ ಕಾರ್ಯಕ್ರಮ ಅತ್ಯುತ್ತಮವಾಗಿದೆಎಚ್.ಎಂ.ರೇವಣ್ಣ ರಾಜ್ಯ ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಅಧ್ಯಕ್ಷ
ಮೃತರ ಖಾತೆಗೆ ಹಣ; ವಾಪಸ್ ಪಡೆಯಲು ಕ್ರಮ
‘ಗೃಹಲಕ್ಷ್ಮಿ ಫಲಾನುಭವಿಗಳಲ್ಲಿ ಅನೇಕರು ಸಾವನ್ನಪ್ಪಿದ್ದಾರೆ. ಆದರೂ ಅವರ ಖಾತೆಗೆ ಯೋಜನೆಯ ದುಡ್ಡು ಹೋಗಿದೆ. ಮುಂದೆ ಹೋಗದಿರುವಂತೆ ತಡೆಯಲು ಹಾಗೂ ಈಗ ಜಮೆ ಆಗಿರುವ ಹಣವನ್ನು ಹಿಂಪಡೆಯುವ ಕೆಲಸ ಪ್ರಗತಿಯಲ್ಲಿದೆ’ ಎಂದು ರಾಜ್ಯ ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಅಧ್ಯಕ್ಷ ಎಚ್.ಎಂ.ರೇವಣ್ಣ ತಿಳಿಸಿದರು.
ರಾಜ್ಯದಲ್ಲಿ ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳಾಗಿದ್ದ 144056 ಮಂದಿ ಮೃತಪಟ್ಟಿದ್ದಾರೆ. ಆದರೂ ಅವರ ಖಾತೆಗೆ ₹3.98 ಕೋಟಿ ಹಣ ತಲುಪಿದೆ ಎಂದರು. ಗದಗ ಜಿಲ್ಲೆಯಲ್ಲಿ 1485 ಮಂದಿ ಯೋಜನೆಯ ಫಲಾನುಭವಿಗಳು ಮೃತಪಟ್ಟಿದ್ದು ₹1.72 ಕೋಟಿ ಹಣ ಜಮೆಯಾಗಿದೆ. ಇದನ್ನು ವಾಪಸ್ ತರುವ ಕೆಲಸ ಮಾಡಬೇಕಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.