ನರಗುಂದ: ‘ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ಮೂರು ಸ್ಥಳಗಳಲ್ಲಿ ಮಾತ್ರ ಭಯೋತ್ಪಾದಕರ ದಾಳಿ ನಡೆದಿದ್ದು ಬಿಟ್ಟರೆ, ಮತ್ತೆಲ್ಲಿಯೂ ನಡೆದಿಲ್ಲ. ನಕ್ಸಲರನ್ನು ದಮನ ಮಾಡಲಾಗಿದೆ. ಅದರ ಪರಿಣಾಮವಾಗಿಯೇ 2026ರೊಳಗಾಗಿ ಭಯೋತ್ಪಾದನೆ, ನಕ್ಸಲ್ ಮುಕ್ತ ದೇಶವನ್ನಾಗಿಸಲು ಪಣತೊಡಲಾಗಿದೆ. ಅದನ್ನು ಮಾಡಿಯೇ ಮಾಡುತ್ತೇವೆ’ ಎಂದು ಕೇಂದ್ರ ಆಹಾರ, ನಾಗರಿಕ ಪೂರೈಕೆ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ಪಟ್ಟಣದದಲ್ಲಿ ಶಾಸಕ ಸಿ.ಸಿ.ಪಾಟೀಲರ ನಿವಾಸದ ಆವರಣದಲ್ಲಿ ಬಿಜೆಪಿ ಧಾರವಾಡ ವಿಭಾಗದ ಆಶ್ರಯದಲ್ಲಿ ಶನಿವಾರ ನಡೆದ ಹರ್ ಘರ್ ತಿರಂಗಾ ಯಾತ್ರೆ ಉದ್ಘಾಟಸಿ ಮಾತನಾಡಿದರು.
‘ಮೋದಿಯವರು ಪ್ರಧಾನಿಯಾದ ಮೇಲೆ ಪರಿವರ್ತನೆಯ ಯುಗ ಆರಂಭವಾಗಿದೆ. ಇದರ ಪರಿಣಾಮ ಭಯೋತ್ಪಾದನೆ ಕಡಿಮೆಯಾಗಿದೆ. ಉರಿ, ಪುಲ್ವಾಮಾ, ಪಹಲ್ಗಾಂಗಳಲ್ಲಿ ಭಯೋತ್ಪಾದನೆ ದಾಳಿ ನಡೆದಿದ್ದರೆ ಅದಕ್ಕೆ ಹಿಂದಿದ್ದ ಕಾಂಗ್ರೆಸ್ ಪಕ್ಷದ ಸಿದ್ದಾಂತಗಳು, ಕೆಲವು ದೇಶದ್ರೋಹಿಗಳೇ ಕಾರಣ. ಹಿಂದೆ ಕಾಂಗ್ರೆಸ್ ಸರ್ಕಾರ ಇದ್ದ ಸಂದರ್ಭದಲ್ಲಿ ದಾಳಿ ನಡೆದಾಗ ಅದನ್ನು ಪಾಕಿಸ್ತಾನಕ್ಕೆ ತಿಳಿಸಿ ಭಾರತ-ಪಾಕಿಸ್ತಾನ ಜಂಟಿಯಾಗಿ ತನಿಖೆ ಮಾಡಲಾಗುವುದು ಎಂದು ಹೇಳುತ್ತಿದ್ದರು. ಇದು ಅವರ ಭಯೋತ್ಪಾದನೆ ನಿಗ್ರಹಿಸಲು ತೆಗೆದುಕೊಂಡ ಕ್ರಮಕ್ಕೆ ಸಾಕ್ಷಿಯಾಗಿದೆ’ ಎಂದು ವಾಗ್ದಾಳಿ ನಡೆಸಿದರು.
‘ನಕ್ಸಲ್ ಚಟುವಟಿಕೆ ಅಲ್ಲಲ್ಲಿ ಶೇ 20ರಷ್ಟು ಉಳಿದಿದೆ. ಅದನ್ನು ಕೂಡ ಸಂಪೂರ್ಣ ನಾಶಪಡಿಸುವ ಸಲುವಾಗಿ ಪಶುಪತಿಯಿಂದ ತಿರುಪತಿಯವರೆಗೆ ಮಾರ್ಚ್ 31, 2026ರೊಳಗಾಗಿ ನಕ್ಸಲ್ ಮುಕ್ತ ಮಾಡಲಾಗುತ್ತಿದೆ. ಆಪರೇಷನ್ ಸಿಂಧೂರ ಮೂಲಕ ದಿಟ್ಟ ಉತ್ತರ ನೀಡಲಾಗಿದೆ. ಸಶಕ್ತ ಭಾರತ ನಿರ್ಮಿಸುವ ತಾಕತ್ತು ಭಾರತಕ್ಕಿದೆ. ಹಿಂದೆ ಸೈನಿಕರಿಗೆ ಬೂಟ್‌ಗಳಿದ್ದಿಲ್ಲ. ಎಲ್ಲವನ್ನೂ ಆಮದು ಮಾಡಿಕೊಳ್ಳಬೇಕಿತ್ತು. ಇಂದು ಭಾರತ ರಕ್ಷಣಾ ಕ್ಷೇತ್ರದಲ್ಲಿ ಸ್ವಾವಲಂಬಿಯಾಗಿ ಸೈನಿಕರಿಗೆ ಅಗತ್ಯವಿರುವ ಯುದ್ಧ ಸಾಮಗ್ರಿಗಳನ್ನು ಉತ್ಪಾದಿಸುತ್ತಿದೆ. ₹30 ಸಾವಿರ ಕೋಟಿಯ ರಕ್ಷಣಾ ಸಾಮಗ್ರಿಗಳನ್ನು ರಫ್ತು ಮಾಡಲಾಗುತ್ತಿದೆ’ ಎಂದರು.
‘ಕೇಂದ್ರ ಸರ್ಕಾರ ರಾಜ್ಯಕ್ಕೆ ಕೇಳಿದ್ದಕ್ಕಿಂತಲೂ ಹೆಚ್ಚು ಗೊಬ್ಬರ ನೀಡಿದೆ. ಆದರೆ, ಅದನ್ನು ವಿತರಣೆ ಮಾಡುವ ತಾಕತ್ತಿಲ್ಲ. ಕಾಳಸಂತೆಯಲ್ಲಿ ಮಾರಾಟ ನಡೆದಿದೆ. ರಸಗೊಬ್ಬರ ವಿತರಣೆಯಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ’ ಎಂದು ಆರೋಪಿಸಿದರು.
ಧಾರವಾಡ ಶಾಸಕ ಅರವಿಂದ ಬೆಲ್ಲದ, ಹುಬ್ಬಳ್ಳಿ ಶಾಸಕ ಮಹೇಶ ಟೆಂಗಿನಕಾಯಿ, ಶಿರಹಟ್ಟಿ ಶಾಸಕ ಡಾ.ಚಂದ್ರು ಲಮಾಣಿ ಮಾತನಾಡಿದರು.
ವೇದಿಕೆಯಲ್ಲಿ ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರ, ಹೊಳೆಆಲೂರ ಮಂಡಳ ಅಧ್ಯಕ್ಷ ಸೋಮಶೇಖರ ಚರೇದ, ಶರಣು ತಳ್ಳಿಕೇರಿ, ತಿಪ್ಪಣ್ಣ ಮಜ್ಜಗಿ, ವಿರುಪಾಕ್ಷಪ್ಪ ಬಳ್ಳಾರಿ, ಅರುಣಕುಮಾರ ಪೂಜಾರ, ಆರ್.ಕೆ.ಚವ್ಹಾಣ, ಭರತ್ ಬೊಮ್ಮಾಯಿ, ಜಿಲ್ಲಾ ಘಟಕ ಅಧ್ಯಕ್ಷ ರಾಜು ಕುರುಡಗಿ, ನಾಗನಗೌಡ ತಿಮ್ಮನಗೌಡ್ರ, ಲಿಂಗರಾಜ ಪಾಟೀಲ, ಉಮೇಶಗೌಡ ಪಾಟೀಲ, ಪುರಸಭೆ ಅಧ್ಯಕ್ಷೆ ನೀಲವ್ವ ವಡ್ಡಿಗೇರಿ, ಎಸ್.ಜಿ. ಮುತ್ತವಾಡ, ಎಸ್.ಆರ್. ಪಾಟೀಲ, ಹೊಳೆಆಲೂರ ಮಂಡಳ ಅಧ್ಯಕ್ಷ ಸೋಮಶೇಖರ ಚರೇದ, ಗದಗ, ಹಾವೇರಿ, ಧಾರವಾಡ ಜಿಲ್ಲೆಯ ವಿವಿಧ ಮಂಡಳ, ತಾಲ್ಲೂಕು, ಜಿಲ್ಲಾ ಬಿಜೆಪಿ ಅಧ್ಯಕ್ಷರು, ರೈತ ಮೋರ್ಚಾ, ಮಹಿಳಾ ಮೋರ್ಚಾ ಪದಾಧಿಕಾರಿಗಳು ಇದ್ದರು.
ಕಾಂಗ್ರೆಸ್ ಅಧಿಕಾರವಿದ್ದಾಗ ನಡೆದ ಚುನಾವಣೆಯಲ್ಲಿ ನಡೆದಷ್ಟೂ ಅವ್ಯವಹಾರಕೋಮು ಗಲಭೆ ನಮ್ಮ ಸರ್ಕಾರದ ಸಂದರ್ಭದಲ್ಲಿ ನಡೆದಿಲ್ಲ ಇದನ್ನು ಕಾಂಗ್ರೆಸ್ ಅರಿಯಬೇಕು.– ಪ್ರಲ್ಹಾದ ಜೋಶಿ, ಕೇಂದ್ರ ಸಚಿವ
ದೇಶದ ಎಲ್ಲ ನಾಗರಿಕರಲ್ಲೂ ದೇಶಭಕ್ತಿ ಜಾಗೃತಗೊಳ್ಳಬೇಕಿದೆ. ದೇಶಕ್ಕಾಗಿ ನಾವು ಕೊಡುವುದು ಬಹಳ ಇದೆ. ಹೀಗಾಗಿ ನಾವೆಲ್ಲರೂ ನಮ್ಮೆಲ್ಲರ ಮನೆಗಳ ಮೇಲೂ ತಿರಂಗಾ ಧ್ವಜ ಹಾರಿಸಬೇಕು. ಈ ಅಭಿಯಾನ ಬಂಡಾಯದ ನೆಲ ನರಗುಂದದಿಂದ ಆರಂಭಗೊಂಡಿರುವುದು ಈ ನೆಲದ ಮಹತ್ವವನ್ನು ಸಾರಿದೆ.– ಸಿ.ಸಿ.ಪಾಟೀಲ, ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.