ADVERTISEMENT

ಗದಗ: ಗ್ಯಾರಂಟಿ ಜಾರಿಗೊಳಿಸುವಲ್ಲಿ ಜಿಲ್ಲೆಯ ಸಾಧನೆ ಪ್ರಶಂಸನೀಯ

​ಪ್ರಜಾವಾಣಿ ವಾರ್ತೆ
Published 21 ಮೇ 2025, 16:05 IST
Last Updated 21 ಮೇ 2025, 16:05 IST
ಗದಗ ನಗರದ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಕಚೇರಿಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಎಸ್.ಆರ್.ಪಾಟೀಲ ಮಾತನಾಡಿದರು
ಗದಗ ನಗರದ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಕಚೇರಿಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಎಸ್.ಆರ್.ಪಾಟೀಲ ಮಾತನಾಡಿದರು   

ಗದಗ: ‘ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಬಡವರ ಕಲ್ಯಾಣಕ್ಕಾಗಿ ಜಾರಿಗೊಳಿಸಿದ ಪಂಚ ಗ್ಯಾರಂಟಿ ಯೋಜನೆಗಳು ಗದಗ ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಂಡಿವೆ. ಈ ಸಾಧನೆ ಪ್ರಶಂಸನೀಯ’ ಎಂದು ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಎಸ್.ಆರ್.ಪಾಟೀಲ ಹೇಳಿದರು.

ನಗರದ ಉಪವಿಭಾಗಾಧಿಕಾರಿ ಕಚೇರಿ ಸಂಕೀರ್ಣದಲ್ಲಿರುವ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಕಚೇರಿಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

‘ಪಂಚ ಗ್ಯಾರಂಟಿ ಅನುಷ್ಠಾನದಲ್ಲಿ ಗದಗ ಜಿಲ್ಲೆ ರಾಜ್ಯದಲ್ಲಿಯೇ ಉತ್ತಮ ಸಾಧನೆ ಮಾಡಿದೆ. ಅರ್ಹರಿಗೆ ಸರ್ಕಾರದ ಸೌಲಭ್ಯ ಒದಗಿಸುವಲ್ಲಿ ಜಿಲ್ಲೆ ಮುಂಚೂಣಿಯಲ್ಲಿದೆ. ಅದಕ್ಕಾಗಿ ಸಮಿತಿಯ ಜಿಲ್ಲಾ ಹಾಗೂ ತಾಲ್ಲೂಕು ಅಧ್ಯಕ್ಷರು, ಸದಸ್ಯರಿಗೆ ಅಭಿನಂದನೆಗಳು. ಅದೇರೀತಿ, ಪಂಚ ಗ್ಯಾರಂಟಿ ಅನುಷ್ಠಾನದಲ್ಲಿ ಶ್ರಮಿಸಿದ ಇಲಾಖಾಧಿಕಾರಿಗಳ ಕಾರ್ಯವೈಖರಿ ಕೂಡ ಶ್ಲಾಘನೀಯ’ ಎಂದರು.

ADVERTISEMENT

‘ರಾಜ್ಯದ ಮಹಿಳೆಯರಿಗೆ ಗೃಹಲಕ್ಷ್ಮಿ ಹಾಗೂ ಶಕ್ತಿ ಯೋಜನೆಗಳು ಆರ್ಥಿಕ ಸಬಲತೆಯೊಂದಿಗೆ ಸ್ತ್ರೀ ಸ್ವಾತಂತ್ರ್ಯ ನೀಡಿವೆ. ಮಹಿಳೆ ಸ್ವತಂತ್ರವಾಗಿ ಕುಟುಂಬ ನಿರ್ವಹಣೆ ಮಾಡುವ ಮೂಲಕ ಕುಟುಂಬವನ್ನು ಆರ್ಥಿಕವಾಗಿ ಸಬಲವಾಗಿಸಲು ಪಂಚ ಗ್ಯಾರಂಟಿ ಯೋಜನೆಗಳು ಸಹಕಾರಿಯಾಗಿವೆ. ಅವುಗಳನ್ನು ಅರ್ಹರಿಗೆ ತಲುಪಿಸುವಲ್ಲಿ ಅಧಿಕಾರಿ ವರ್ಗ ಶ್ರಮಿಸಬೇಕು’ ಎಂದರು.

ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಬಿ.ಬಿ.ಅಸೂಟಿ ಮಾತನಾಡಿ, ‘ಜಿಲ್ಲೆಯಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸರಿಯಾದ ನಿಟ್ಟಿನಲ್ಲಿ ಸಾಗಿದೆ. ಯುವನಿಧಿ ಫಲಾನುಭವಿಗಳು ಉದ್ಯೋಗ ಮೇಳದಲ್ಲಿ ಪಾಲ್ಗೊಂಡು ಉದ್ಯೋಗ ಪಡೆಯಲು ಮುಂದಾಗಬೇಕು’ ಎಂದರು.

‘ಅನ್ನಭಾಗ್ಯ ಯೋಜನೆ ಅಡಿ ವಿತರಿಸಲಾಗುವ ಅಕ್ಕಿಯು ಅಕ್ರಮವಾಗಿ ಕಾಳಸಂತೆಗೆ ಸಾಗಣೆ ಆಗುವುದನ್ನು ಅಧಿಕಾರಿ ವರ್ಗ ಸಂಪೂರ್ಣ ಹತೋಟಿಗೆ ತರಬೇಕು. ಆ ಮೂಲಕ ಹಸಿವು ಮುಕ್ತ ಕರ್ನಾಟಕ ಸಾಕಾರಕ್ಕೆ ಕೈಜೋಡಿಸಬೇಕು’ ಎಂದರು.

ಸಮಿತಿ ಸದಸ್ಯ ಕೃಷ್ಣಗೌಡ ಎಚ್.ಪಾಟೀಲ ಮಾತನಾಡಿ, ‘ಕೆಲವು ಫಲಾನುಭವಿಗಳ ಗೃಹಲಕ್ಷ್ಮಿ ಮೊತ್ತವು ಬ್ಯಾಂಕ್ ಖಾತೆಗೆ ಜಮೆಯಾಗದೇ ಇರುವ ಪ್ರಕರಣಗಳು ಕಂಡುಬಂದಿವೆ. ಅಧಿಕಾರಿಗಳು ಅವುಗಳನ್ನು ಪರಿಶೀಲಿಸಿ, ಸಮಸ್ಯೆ ಬಗೆಹರಿಸಬೇಕು’ ಎಂದು ತಿಳಿಸಿದರು.

ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷೆ ನೀಲಮ್ಮ ಬೋಳನವರ, ಸದಸ್ಯರಾದ ಈಶಣ್ಣ ಹುಣಸಿಕಟ್ಟಿ, ಸಂಗಮೇಶ ಹಾದಿಮನಿ, ರಮೇಶ ಹೊನ್ನಿನಾಯ್ಕರ, ದೇಸಾಯಿ, ಸಾವಿತ್ರಿ ಹೂಗಾರ ಸೇರಿದಂತೆ ಇತರೆ ಸದಸ್ಯರು, ಅಧಿಕಾರಿಗಳು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.