ADVERTISEMENT

‘ಉತ್ತಮ ಸಮಾಜ ನಿರ್ಮಾಣದಲ್ಲಿ ಪತ್ರಿಕೆಗಳ ಪಾತ್ರ ದೊಡ್ಡದು’: ಡಾ.ಚಂದ್ರು ಲಮಾಣಿ

​ಪ್ರಜಾವಾಣಿ ವಾರ್ತೆ
Published 20 ಜುಲೈ 2025, 4:39 IST
Last Updated 20 ಜುಲೈ 2025, 4:39 IST
ಲಕ್ಷ್ಮೇಶ್ವರ ತಾಲ್ಲೂಕು ಕಾರ್ಯನಿತರ ಪತ್ರಕರ್ತರ ಸಂಘದಿಂದ ಶನಿವಾರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನಡೆದ ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ಶಾಸಕ ಡಾ.ಚಂದ್ರು ಲಮಾಣಿ ಉದ್ಘಾಟಿಸಿದರು
ಲಕ್ಷ್ಮೇಶ್ವರ ತಾಲ್ಲೂಕು ಕಾರ್ಯನಿತರ ಪತ್ರಕರ್ತರ ಸಂಘದಿಂದ ಶನಿವಾರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನಡೆದ ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ಶಾಸಕ ಡಾ.ಚಂದ್ರು ಲಮಾಣಿ ಉದ್ಘಾಟಿಸಿದರು   

ಲಕ್ಷ್ಮೇಶ್ವರ: ‘ಸಮಾಜದಲ್ಲಿ ಪತ್ರಿಕೆಗಳ ಪಾತ್ರ ದೊಡ್ಡದು. ಸಮಾಜದ ಸ್ವಾಸ್ಥ್ಯ ಕಾಪಾಡುವ ಹಾಗೂ ಜಗತ್ತಿನಲ್ಲಿ ನಡೆಯುವ ವಿದ್ಯಮಾನಗಳ ಕುರಿತು ಜನತೆಗೆ ನಿಜ ತಿಳಿಸುವ ಕೆಲಸವನ್ನು ಪತ್ರಿಕೆಗಳು ಮಾಡಬೇಕು’ ಎಂದು ಶಾಸಕ ಡಾ.ಚಂದ್ರು ಲಮಾಣಿ ಹೇಳಿದರು.

ತಾಲ್ಲೂಕು ಕಾರ್ಯನಿತರ ಪತ್ರಕರ್ತರ ಸಂಘದ ವತಿಯಿಂದ ಶನಿವಾರ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾ ದಿನಾಚರಣೆ ಹಾಗೂ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.

‘ದೃಶ್ಯ ಮಾಧ್ಯಮಗಳ ಪ್ರಭಾವದ ಮಧ್ಯೆಯೂ ಸಾರ್ವಜನಿಕರಿಗೆ ನಿಖರ ಸುದ್ದಿಗಳನ್ನು ನೀಡುತ್ತ ಪತ್ರಿಕೆಗಳು ನಂಬಿಕೆ, ವಿಶ್ವಾಸ ಉಳಿಸಿಕೊಂಡಿವೆ. ನಮ್ಮ ನಾಡಿನ ಪರಂಪರೆ, ಸಾಹಿತ್ಯ, ಸಂಸ್ಕೃತಿ ಬೆಳವಣಿಗೆಯಲ್ಲಿ ಪತ್ರಿಕೆಗಳ ಪಾತ್ರ ಬಹಳ ಮುಖ್ಯವಾಗಿದೆ. ಪ್ರಸ್ತುತ ಸ್ಫರ್ಧಾತ್ಮಕ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಆಗುವ ಪತ್ರಿಕೆಗಳ ಸಂಖ್ಯೆ ಹೆಚ್ಚಬೇಕು ಎಂದರು.

ADVERTISEMENT

ಸನ್ಮಾನ ಸ್ವೀಕರಿಸಿ ಹಿರಿಯ ವೈದ್ಯರಾದ ಡಾ.ಎಸ್.ಸಿ.ಮಲ್ಲಾಡದ, ಡಾ.ಪಿ.ಡಿ.ತೋಟದ ಮಾತನಾಡಿ ‘ನ್ಯಾಯಾಂಗ, ಕಾರ್ಯಾಂಗ, ಶಾಸಕಾಂಗಗಳು ಸರಿಯಾಗಿ ಕರ್ತವ್ಯ ಮಾಡದೇ ಇದ್ದಾಗ ಪತ್ರಿಕಾ ರಂಗ ಅವುಗಳನ್ನು ಎಚ್ಚರಿಸುವ ಕೆಲಸ ಮಾಡುತ್ತದೆ. ಇಂದು ಪತ್ರಿಕಾರಂಗ ಸಾಕಷ್ಟು ಸವಾಲುಗಳನ್ನು ಎದುರಿಸುತ್ತಿದ್ದರೂ ಜನರಿಗೆ ಸುದ್ದಿಗಳನ್ನು ಮುಟ್ಟಿಸುವುದರ ಜೊತೆಗೆ ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಕಾರ್ಯ ಮಾಡುತ್ತಿವೆ’ ಎಂದರು.

ವೈದ್ಯರ ದಿನಾಚರಣೆ ಅಂಗವಾಗಿ ಹಿರಿಯ ವೈದ್ಯರಾದ ಡಾ.ಎಸ್.ಸಿ.ಮಲ್ಲಾಡದ, ಡಾ.ಪಿ.ಡಿ. ತೋಟದ, ಡಾ.ಆರುಂದತಿ ಕುಲಕರ್ಣಿ, ಡಾ.ಸುಭಾಸ ದಾಯಗೊಂಡ, ಡಾ.ಶ್ರೀಕಾಂತ ಕಾಟೇವಾಲೆ, ಡಾ.ಮಲ್ಲಿಕಾರ್ಜುನ ಪಟ್ಟಣಶೆಟ್ಟಿ, ಡಾ.ಉಮೇಶ ಅವರನ್ನು ಸನ್ಮಾನಿಸಲಾಯಿತು.

ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಕಳಸಾಪುರ ಅಧ್ಯಕ್ಷತೆ ವಹಿಸಿದ್ದರು. ಚಂಬಣ್ಣ ಬಾಳಿಕಾಯಿ, ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣಪ್ಪ ಧರ್ಮರ, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ವಿಜಯ ಕರಡಿ, ವೀರಣ್ಣ ಪವಾಡದ, ಶರಣು ಗೋಡಿ, ನಾಗೇಶ ಅಮರಾಪುರ, ಮಹೇಶ ಕಲಘಟಗಿ ಮತ್ತಿತರರು ಇದ್ದರು.

ರಮೇಶ ನಾಡಗೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನಾಗರಾಜ ಹಣಗಿ ನಿರೂಪಿಸಿದರು. ದಿಗಂಬರ ಪೂಜಾರ, ಸ್ವಾಗತಿಸಿದರು. ಅಶೋಕ ಸೊರಟೂರ, ಸೋಮಣ್ಣ ಯತ್ತಿನಹಳ್ಳಿ, ಕರಿಯಪ್ಪ ಶಿರಹಟ್ಟಿ, ಶಿವಲಿಂಗಯ್ಯ ಹೊತಗಿಮಠ, ಪರಮೇಶ ಲಮಾಣಿ, ಮಾಳಿಂಗರಾಯ ಪೂಜಾರ, ಸುರೇಶ ಲಮಾಣಿ, ಮಂಜು ಲಮಾಣಿ, ಇನ್ನರ್‍ವ್ಹಿಲ್ ಕ್ಲಬ್ ಅಧ್ಯಕ್ಷರು, ಸದಸ್ಯರು ಇದ್ದರು. 38 ಮಂದಿ ರಕ್ತದಾನ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.